ಚುನಾವಣೆ ಮೂಲಕ ನೂತನ ನಾಯಕನ ಆಯ್ಕೆ: ನಾರಾಯಣ್ ಸಿಂಗ್
ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಿನಾಮೆ ಹಿನ್ನೆಲೆಯಲ್ಲಿ ನಾಳೆ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಮಾಡಿ ಸರ್ಕಾರ ರಚಿಸಲಾಗುವುದು ಎಂದು ಬಿಹಾರ ಜೆಡಿಯು ಅಧ್ಯಕ್ಷ ನಾರಾಯಣ್ ಸಿಂಗ್ ಸೋಮವಾರ ತಿಳಿಸಿದ್ದಾರೆ.
ನಿತೀನ್ ಕುಮಾರ್ ರಾಜಿನಾಮೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನಡೆದ ಜೆಡಿಯು ಶಾಸಕರ ಸಭೆ ಮುಕ್ತಾಯಗೊಂಡಿದ್ದು, ಆ ಬಳಿಕ ಸುದ್ದಿಗೋಷ್ಠಿ ನಡೆಸಿದ ನಾರಾಯಣ್ ಸಿಂಗ್, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ನಾಳೆ ಚುನಾವಣೆ ಮೂಲಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಿ ನೂತನ ಸರ್ಕಾರ ರಚಿಸಲಾಗುವುದು ಎಂದರು.
ಬಿಹಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲನ್ನಪ್ಪಿರಬಹುದು ಆದರೂ ಬಿಹಾರದಲ್ಲಿ ಜೆಡಿಯು ಸರ್ಕಾರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಆದರೆ ಸೋಲಿನ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ರಾಜಿನಾಮೆ ನೀಡಿ, ನೈತಿಕತೆಯ ಆದರ್ಶ ಪ್ರದರ್ಶಿಸಿದ್ದಾರೆ ಎಂದರು. ನಿತೀಶ್ ಕುಮಾರ್ ರಾಜಿನಾಮೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ನೂತನ ಸರ್ಕಾರ ರಚಿಸುವ ಕುರಿತಾಗಿ ಇಂದು ಸಂಜೆ ರಾಜ್ಯಪಾಲ ಡಾ.ಡಿ.ವೈ. ಪಾಟೀಲ್ ಅವರಿಗೆ ಮನವಿ ಮಾಡಲಾಗುವುದು ಎಂದರು.
ಏತನ್ಮಧ್ಯೆ, ಬಿಹಾರದಲ್ಲಿ ತೊರವುಗೊಂಡಿರುವ ಸಿಎಂ ಸ್ಥಾನಕ್ಕೆ ಬಿಹಾರದ ರಾಜ್ಯಾಧ್ಯಕ್ಷ ಆಗಿರುವ ನಾರಾಯಣ್ ಸಿಂಗ್ ಅವರು ಸಿಎಂ ಹುದ್ದೆ ಅಲಂಕರಿಸಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಅವರು, ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದು, ನಾಳೆ ಚುನಾವಣೆ ಮೂಲಕ ನೂತನ ನಾಯಕನ ಆಯ್ಕೆ ಮಾಡಲಾಗುವುದು ಎಂದರು.
2015ರ ವಿಧಾನಸಭೆ ಚುನಾವಣೆಯನ್ನು ನಿತೀಶ್ ಕುಮಾರ್ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ನಾರಾಯಣ್ ಸಿಂಗ್ ತಿಳಿಸಿದ್ದಾರೆ.