ಜಿತನ್ ರಾಮ್ ಮಂಜಿ ಬಿಹಾರದ ಮುಂದಿನ ಸಿಎಂ
ಪಾಟ್ನಾ: ಬಿಹಾರದ ರಾಜಕೀಯ ಬಿಕ್ಕಟ್ಟಿಗೆ ಕೊನೆಗೂ ತೆರೆ ಬಿದ್ದಿದ್ದು, ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಜಿತನ್ ರಾಮ್ ಮಂಜಿ ಹೆಸರು ಅಂತಿಮವಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಿನಾಮೆಯಿಂದಾಗಿ ತೆರವುಗೊಂಡಿದ್ದ ಸಿಎಂ ಸ್ಥಾನಕ್ಕೆ ಜಿತನ್ ರಾಮ್ ಮಂಜಿ ಅವರನ್ನು ನೇಮಿಸಲಾಗಿದೆ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ನಿತೀಶ್ ಕುಮಾರ್, ಬಿಹಾರದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ್ದಿದ್ದು, ಆ ಸ್ಥಾನಕ್ಕೆ ಮಂಜಿ ಅವರನ್ನು ನೇಮಿಸಲಾಗಿದೆ ಎಂದರು. ಅಲ್ಲದೆ 2015ರ ವಿಧಾನಸಭೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದರೆ ಆಗ ಮತ್ತೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದರು.
ಬಿಹಾರದ ಮುಖ್ಯಮಂತ್ರಿಯಾಗಿ ಜಿತನ್ ರಾಮ್ ಮಂಜಿ ಹೆಸರನ್ನು ಘೋಷಿಸುವುದಕ್ಕೂ ಮುನ್ನ ನಿತೀಶ್ ಕುಮಾರ್ ಹಾಗೂ ಜಿತನ್ ರಾಮ್ ಮಂಜಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.