ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಚಿವ ಸ್ಥಾನಕ್ಕೆ ರಾಜಿನಾಮೆ, ಸಂಸದನಾಗಿ ಮುಂದುವರೆಯುವೆ: ಪ್ರಕಾಶ್ ಹುಕ್ಕೇರಿ

Vishwanath S
Updated On : 19 May 2014, 2:14 am

ಬೆಂಗಳೂರು: ಹೈಕಮಾಂಡ್ ಒತ್ತಡಕ್ಕೆ ಮಣಿದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಸಚಿವ ಪ್ರಕಾಶ್ ಹುಕ್ಕೇರಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಂಸದರಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಹುಕ್ಕೇರಿ, ಜನರ ತೀರ್ಪು ಮತ್ತು ಆದೇಶದಂತೆ ನಡೆದುಕೊಳ್ಳುತ್ತೇನೆ. ಅದರಂತೆ ನಾನು ಸಚಿವ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಲೋಕಸಭೆಗೆ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನರು ನನ್ನ ಮೇಲೆ ಅಭಿಮಾನ ಇಟ್ಟು ಗೆಲ್ಲಿಸಿದ್ದಾರೆ. ಇದರ ಫಲವಾಗಿ ಯಾವುದೇ ಕಾರಣಕ್ಕೂ ಅವರಿಗೆ ನಿರಾಸೆ ಮಾಡುವುದಿಲ್ಲ. ಆದಷ್ಟು ಬೇಗ ಸಚಿವ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಲೋಕಸಭೆಯಲ್ಲಿ ರಾಜ್ಯದ ಪರವಾಗಿ ಮತ್ತು ಕ್ಷೇತ್ರದ ಜನರ ಪರವಾಗಿ ಮಾತನಾಡುತ್ತೇನೆ. ಅಲ್ಲದೆ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಲಿ ಎಂಬ ಕಾರಣಕ್ಕಾಗಿ ಮುಜರಾಯಿ ಮತ್ತು ಸಕ್ಕರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಅವರನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಹುಕ್ಕೇರಿಗೆ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಯ ರಮೇಶ್ ಕತ್ತಿ ವಿರುದ್ಧ ಕೇವಲ 3003 ಮತಗಳ ಅಂತರದಿಂದ ಹುಕ್ಕೇರಿ ಜಯಗಳಿಸಿದ್ದಾರೆ.

ಒಲ್ಲದ ಮನಸಿನಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದ ಪ್ರಕಾಶ್ ಹುಕ್ಕೇರಿ ಅವರು ತಾವು ಸಚಿವನಾಗಿ ರಾಜ್ಯದಲ್ಲೇ ಕಾರ್ಯನಿರ್ವಹಿಸುವುದಾಗಿ ಹಾಗೂ ದೆಹಲಿಗೆ ಹೋಗುವುದಿಲ್ಲ ಎಂದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದರು. ಆದರೆ, ಈ ಕುರಿತು ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ರಾಜ್ಯ ನಾಯಕರು ಹೇಳಿದ್ದರು. ಇದೀಗ ಸ್ವತಃ ಹುಕ್ಕೇರಿಯವರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement