ಸುಬ್ರತಾ ರಾಯ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ
ಹೂಡಿಕೆದಾರರಿಗೆ ಹಣ ವಾಪಸ್ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ...
ನವದೆಹಲಿ: ಹೂಡಿಕೆದಾರರಿಗೆ ಹಣ ವಾಪಸ್ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಸಹರಾ ಗ್ರೂಪ್ಸ್‌ನ ಮುಖ್ಯಸ್ಥ ಸುಬ್ರತಾ ರಾಯ್‌ಗೆ ಸುಪ್ರೀಂಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಕೋರ್ಟ್, ಹೂಡಿಕೆದಾರರಿಗೆ ಹಣ ಪಾವತಿಸಲು ಸಹರಾ ವಿಫಲವಾಗಿದ್ದು, ಹೂಡಿಕೆದಾರರಿಗೆ ಹಣ ಪಾವತಿಸದೇ ಜಾಮೀನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಂಬರ್ 28ರಂದು ಲಖನೌ ಪೊಲೀಸರು ಸುಬ್ರತಾ ರಾಯ್‌ರನ್ನು ಬಂಧಿಸಿದ್ದರು.
ಏನಿದು ವಂಚನೆ ಪ್ರಕರಣ?
ಸಹಾರಾ ಸಮೂಹ ಕಂಪನಿಯ ಅಂಗಸಂಸ್ಥೆಗಳಾದ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತು ಸಹಾರಾ ಇಂಡಿಯಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ಗಳು ವಸತಿ ಯೋಜನೆಯ ಹೆಸರಿನಲ್ಲಿ ಸುಮಾರು 3 ಕೋಟಿ ಸಾರ್ವಜನಿಕ ಹೂಡಿಕೆದಾರರಿಂದ ಸುಮಾರು 24 ಸಾವಿರ ಕೋಟಿ ರು. ಹಣ ಸಂಗ್ರಹಿಸಿದ್ದವು.
ಆದರೆ, ಹೂಡಿಕೆದಾರರಿಗೆ ನೀಡಿದ್ದ ಭರವಸೆಯಂತೆ ವಸತಿ ಕಲ್ಪಿಸದೆ ವಂಚಿಸಿದ್ದವು. ಇದರಿಂದ ಮನನೊಂದ ಹೂಡಿಕೆದಾರರು ಕೋರ್ಟ್ ಮೆಟ್ಟಿಲೆರಿದ್ದರು. ಮಾರುಕಟ್ಟೆ ನಿಯಂತ್ರಣ ಸಂಸ್ಥೆ 'ಸೆಬಿ' ಈ ವಸತಿ ಹೂಡಿಕೆ ಪ್ರಕರಣದ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕರ 24 ಸಾವಿರ ಕೋಟಿ ರು. ಹೂಡಿಕೆ ಹಣಕ್ಕೆ ಬಡ್ಡಿ ಸೇರಿಸಿ, ಹಣ ಹಿಂದಿರುಗಿಸುವಂತೆ ಸಹಾರಾ ಸಮೂಹಕ್ಕೆ ನಿರ್ದೇಶನ ನೀಡಿತ್ತು. ಹೂಡಿಕೆ ಹಣವನ್ನು ಸೆಬಿಯಲ್ಲಿ ಠೇವಣಿಯಾಗಿ ಇಡಬೇಕು ಎಂದು ಸೂಚಿಸಿತ್ತು.
ನ್ಯಾಯಾಲಯದ ಈ ನಿರ್ದೇಶನದ ಅನ್ವಯ, ಸಹಾರಾ ಕಂಪನಿ ಮೊದಲ ಕಂತಿನಲ್ಲಿ ಸೆಬಿಗೆ ಹೂಡಿಕೆ ಹಣಕ್ಕೆ ಬಡ್ಡಿ ಸೇರಿಸಿ, ಸುಮಾರು 5,120 ಕೋಟಿ ರು. ಪಾವತಿಸಿತ್ತು. ಇನ್ನುಳಿದ 20 ಸಾವಿರ ಕೋಟಿ ರು. ಪಾವತಿಸುವಲ್ಲಿ ವಿಫಲವಾಗಿತ್ತು.