ಎನ್ಡಿಎ ಸಂಸದೀಯ ಪಕ್ಷದ ನಾಯಕನಾಗಿ ಮೋದಿ ಆಯ್ಕೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದೀಯ ಪಕ್ಷದ ನಾಯಕ...
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದೀಯ ಪಕ್ಷದ ನಾಯಕನನ್ನಾಗಿ ಮಂಗಳವಾರ ಆಯ್ಕೆ ಮಾಡಲಾಗಿದೆ.
ಇಂದು ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಮೋದಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಬಿಜೆಪಿಯ ಮತ್ತೊರ್ವ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು ಮೋದಿ ಹೆಸರನ್ನು ಅನುಮೋದಿಸಿದರು. ನಂತರ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಪ್ರಧಾನಿ ಹುದ್ದೆಗೆ ಮೋದಿ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.
ಸಭೆಯ ಬಳಿಕ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಮೋದಿ ಅವರು ಮಧ್ಯಾಹ್ನ 2.30ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.
ಮೇ 24ರಂದು ಮೋದಿ ದೇಶದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಬಡವರ ಉದ್ಧಾರ ನಮ್ಮ ಸರ್ಕಾರದ ಮುಖ್ಯ ಗುರಿ: ಮೋದಿ
ಬಡವರ ಉದ್ಧಾರ ನಮ್ಮ ಸರ್ಕಾರದ ಮುಖ್ಯ ಗುರು ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎನ್ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಮೋದಿ, ಬಡ ಕುಟುಂಬದ ವ್ಯಕ್ತಿ ಈ ದೇಶದ ಪ್ರಧಾನಿಯಾಗಿದ್ದಾನೆ. ಇಂದು ಒಬ್ಬ ಬಡ ವ್ಯಕ್ತಿ ಪ್ರಧಾನಿಯಾಗುವುದಕ್ಕೆ ಈ ದೇಶದ ಸಂವಿಧಾನ ಕಾರಣ. ಹೀಗಾಗಿ ನಾನು ಸಂವಿಧಾನವನ್ನು ಗೌರವಿಸುತ್ತೇನೆ ಎಂದು ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಮೋದಿ ಹೇಳಿದರು. ಅಲ್ಲದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನೆದ ಮೋದಿ, ಈ ಸಂದರ್ಭದಲ್ಲಿ ಅವರು ಉಪಸ್ಥಿತರಿದಿದ್ದರೆ ಈ ಕ್ಷಣದ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು ಎಂದರು.
ಆಡ್ವಾಣಿ ಅವರು ಒಂದು ಪದ ಬಳಸಿದರು. ಮೋದಿಯ ಕೃಪೆ ಎಂದು. ನಾನು ಭಾರತ ಮಾತೆ ಹಾಗೂ ಬಿಜೆಪಿಯ ಮಗ. ಮಗನ ಕೃಪೆ ತಾಯಿಗೆ ಇರಲ್ಲ. ಆದರೆ ತಾಯಿಯ ಕೃಪೆ ಮಗನಿಗೆ ಇರುತ್ತದೆ. ಮಗ ಎಂದಿಗೂ ತಾಯಿಯ ಸೇವೆ ಮಾಡಬೇಕು ಎಂದು ನುಡಿದರು.
ಇದೇ ವೆಳೆ ತಮ್ಮ ಗೆಲುವಿನ ಹಾದಿಯನ್ನು ವಿವರಿಸಿದ ಮೋದಿ, ಸೆ.13ರಂದು ನನ್ನನ್ನು ಚುನಾವಣ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅಂದಿನಿಂದ ನನ್ನ ಮಹತ್ವದ ಅಗ್ನಿ ಪರೀಕ್ಷೆ ಆರಂಭವಾಯಿತು. ಸೆ.15ರಿಂದ ಮೇ 10ರವರೆಗೆ ನಾನು ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ ಎಂದರು.
ಗುಜರಾತ್ ಮುಖ್ಯಮಂತ್ರಿಯಾಗುವ ಮೂಲಕ ನಾನು ವಿಧಾನಸಭೆ ಪ್ರವೇಶ ಮಾಡಿದ್ದೇ, ಇದೀಗ ಪ್ರಧಾನಿಯಾಗುವ ಮೂಲಕ ಸಂಸತ್ ಪ್ರವೇಶ ಮಾಡಿದ್ದೇನೆ ಎಂದು ಮೋದಿ ಹೇಳಿದರು.