ನಿತೀಶ್ ರಾಜಿನಾಮೆ ಒಂದು ನಾಟಕ: ಶಿವಸೇನೆ
ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಿನಾಮೆ ಒಂದು...
ನವದೆಹಲಿ: ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಿನಾಮೆ ಒಂದು ನಾಟಕ ಎಂದು ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯಲ್ಲಿ ಟೀಕಿಸಿದೆ.
ನಿತೀಶ್ ಕುಮಾರ್ ರಾಜಿನಾಮೆ ಹಿಂದೆ ಬಹು ದೊಡ್ಡ ಪಿತ್ತೂರಿಯಿದೆ. ನಿಜ ಸಂಗತಿಯೆಂದರೆ ನರೇಂದ್ರ ಮೋದಿಯೊಂದಿಗೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕೈಜೋಡಿಸಿದಂತೆ ಮಾಡುವ ಉದ್ದೇಶದಿಂದ ರಾಜಿನಾಮೆ ನೀಡಿ, ಈಗ ಲಾಲು ಜತೆ ಜೆಡಿಯು ಸ್ನೇಹ ಸಂಬಂಧ ನಡೆಸುತ್ತಿದೆ ಎಂದರು. ಇದೇ ವೇಳೆ ಜನತೆ ಎದುರು ತಾನು ಮುಗ್ಥ ಎಂದು ಬಿಂಬಿಸಿಕೊಳ್ಳಲು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಭ್ರಷ್ಟಾಚಾರ ಹಾಗೂ ದೇಶ ಒಡೆಯುವ ಕೆಲಸ ಮಾಡಿದ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಮುಂದೆಯೂ ಮತ್ತಷ್ಟು ಮುಖಭಂಗ ಅನುಭವಿಸಲಿದ್ದಾರೆ ಎಂದು ಭವಿಷ್ಯದ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿವಸೇನೆ ಟೀಕಿಸಿದೆ.
ಇದೇ ವೇಳೆ ನೂತನ ಮೋದಿ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯಲು ಶಿವಸೇನೆ ಲಾಬಿ ಆರಂಭಿಸಿದೆ. ಬಿಜೆಪಿ ಸ್ಪಷ್ಟ ಬಹುಮತ ಗಳಿಸದ್ದರೂ ಮಿತ್ರಪಕ್ಷಗಳ ಜತೆಯಲ್ಲೇ ಸರ್ಕಾರ ನಡೆಸಲಾಗುವುದು ಎಂದು ಹೇಳಿರುವ ಹಿನ್ನೆಲೆಯಲ್ಲಿ ನಾಲ್ಕರಿಂದ ಐದು ಸಚಿವ ಸ್ಥಾನದ ಬೇಡಿಕೆಯನ್ನು ಶಿವಸೇನೆ ಮುಂದಿಟ್ಟಿದೆ ಎಂದು ಹೇಳಲಾಗುತ್ತಿದೆ.