ಮೋದಿಗೆ ಹೆದರಿ ಆಫ್ಗನ್-ಪಾಕ್ ಗಡಿಗೆ ಕಾಲ್ಕಿತ್ತ ದಾವೂದ್
ನವದೆಹಲಿ: ಭಾರತದ ನೂತನ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಹೆಸರು ಖಚಿತವಾಗುತ್ತಿದ್ದಂತೆ ಭೂಗತ ದೊರೆ ದಾವೂದ್ ಇಬ್ರಾಹಿಂತ ತನ್ನ ನಿವಾಸವನ್ನು ಅಫ್ಗಾನಿಸ್ತಾನ್-ಪಾಕ್ ಗಡಿಗೆ ಸ್ಥಳಾಂತರ ಮಾಡಿದ್ದಾನೆ ಎಂದು ಮಂಗಳವಾರ ವರದಿಯಾಗಿದೆ.
ಈ ಹಿಂದೆ ಚುನಾವಣಾ ಪ್ರಚಾರದ ಅಭಿಯಾನದ ಸಂದರ್ಭದಲ್ಲಿ ಗುಜರಾತಿನ ಸುದ್ದಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮೋದಿ ದಾವೂದ್ ಪತ್ತೆಗೆ ಕ್ರಮ ಕೈಗೊಳ್ಳವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಣ ಭಯದಿಂದ ಭೂಗತ ದೊರೆ ದಾವೂದ್ ಭೂಗತನಾಗಿದ್ದಾನೆ. ಕೇವಲ ದಾವೂದ್ ಮಾತ್ರವಲ್ಲ, ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ವಾಸವಾಗಿರುವ ದಾವೂದ್ ಸಹಚರರು ಕೂಡ ಮುಂಬೈ ತೊರೆದಿದ್ದಾರೆ ಎನ್ನಲಾಗಿದೆ.
ಸದ್ಯದಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಬಿಜೆಪಿ ನಾಯಕ ನರೇಂದ್ರ ಮೋದಿ, 1993ರ ಮುಂಬೈ ಸ್ಫೋಟದ ರೂವಾರಿ ದಾವೂದ್ನನ್ನು ಬಂಧಿಸಲು ಮುಂದಾಗಲಿದ್ದಾರೆ ಎಂದು ಗುಪ್ತಚರ ಘಟಕ ಹೇಳಿವೆ.
ಮೋದಿಯವರ ಮುಂದಿನ ನಡೆಯನ್ನು ಗ್ರಹಿಸಿರುವ ದಾವೂದ್, ಅಲ್ ಖೈದಾ ನಾಯಕ ಒಸಾಮ ಬಿನ್ ಲಾಡೆನ್ನನ್ನು ಕಮಾಂಡೋ ಶೈಲಿಯ ಕಾರ್ಯಾಚರಣೆಯ ಮೂಲಕ ಅಬ್ಬೋತ್ತಬಾದ್ನಲ್ಲಿ ಕೊಂದ ಅಮೆರಿಕಾದ ಮಾದರಿಯನ್ನು ಮೋದಿ ತನ್ನ ಮೇಲೆ ಪ್ರಯೋಗಿಸಲಿದ್ದಾರೆ ಎಂದು ಭಾವಿಸಿರುವ ದಾವೂದ್, ಭಯದಿಂದ ತನ್ನ ಸ್ಥಳವನ್ನು ಬದಲಾಯಿಸಿದ್ದು, ತನಗೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸುವಂತೆ ಪಾಕಿಸ್ತಾನದ ಐಎಸ್ಐಗೆ ಮನವಿ ಮಾಡಿದ್ದಾನೆ ಎನ್ನಲಾಗಿದೆ.
ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ಅಜಿತ್ ದೋವಲ್ ಅವರು ಸೋಮವಾರ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೇಶ ಎದುರಿಸುತ್ತಿರುವ ಭದ್ರಾ ಸವಾಲುಗಳನ್ನು ಸಂಕ್ಷಿಪ್ತವಾಗಿ ವಿವರಿಸಲಿದ್ದಾರೆ. ಏತನ್ಮಾಧ್ಯೆ ದೇಶದ ಹೊರಗಿನ ಮತ್ತು ಒಳಗಿನ ಬೆದರಿಕೆಗಳ ಬಗೆಗಿನ ಮಾಹಿತಿ ನೀಡಿದ್ದ 69 ವರ್ಷದ ದೋವಲ್ ಸಹಾಯ ಪಡೆಯುತ್ತಾರೆ ಎನ್ನಲಾಗಿದೆ.