ಹೀನಾಯ ಸೋಲು: 36 ಸಚಿವರ ವಜಾಗೊಳಿಸಿದ ಸಿಎಂ ಅಖಿಲೇಶ್
ಲಖನೌ: ಲೋಕಸಭೆ ಚುನಾವಣೆಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದಾ 36 ಸಚಿವರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಂಗಳವಾರ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಸಮಾಜನಾದಿ ಪಕ್ಷ ಕೇವಲ 5 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿತ್ತು. ಈ ಹೀನಾಯ ಸೋಲಿಗೆ ಸಚಿವರ ಅಸಮರ್ಥತೆ ಕಾರಣ ಎಂದು ಅಖಿಲೇಶ್ ಯಾದವ್ 88 ಸಚಿವರ ಪೈಕಿ 36 ಸಚಿವರನ್ನು ವಜಾಗೊಳಿಸಿದ್ದಾರೆ.
ಕಳೆದ 2012ರಿಂದ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷ ಇಂತಹ ಹೀನಾಯ ಸೋಲು ನಿರೀಕ್ಷಿಸಿರಲಿಲ್ಲ. 88 ಸಚಿವರಲ್ಲಿ 36 ಸಚಿವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದ್ದರಿಂದ ಅವರ ವಿರುದ್ದ ಕ್ರಮಕೈಗೊಳ್ಳಲಾಗಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಂತೆ ನೀವು ಕೂಡಾ ಸೋಲಿನ ನೈತಿಕ ಹೊಣೆ ಹೊತ್ತು ಸಿಎಂ ಹುದ್ದೆಗೆ ರಾಜಿನಾಮೆ ನೀಡುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, ಉತ್ತರಪ್ರದೇಶದ ರಾಜಕೀಯ ಸ್ಥಿತಿಯನ್ನು ಇತರ ರಾಜ್ಯಗಳಿಗೆ ಹೋಲಿಸಲಾಗದು ಎಂದರು.
ಉತ್ತರಪ್ರದೇಶದಲ್ಲಿರುವ 80 ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಕೇವಲ 5 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿತ್ತು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 73 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್‌ಗೆ ಕೇವಲ 2 ಸ್ಥಾನಗಳು ಲಭಿಸಿತ್ತು. ದೇಶಾದ್ಯಂತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 282 ಕ್ಷೇತ್ರಗಳಲ್ಲಿ ಜಯಭೇರಿಸಿತ್ತು. ಎನ್‌ಡಿಎ ಮೈತ್ರಿಕೂಟ ಒಟ್ಟು 336 ಕ್ಷೇತ್ರಗಳಲ್ಲಿ ಜಯಗಳಿಸಿ ದಾಖಲೆ ನಿರ್ಮಿಸಿದೆ.