ಪಾಟ್ನಾ ಬಾಂಬ್ ಸ್ಫೋಟ: ಮೋದಿ ಟಾರ್ಗೆಟ್, ಎನ್ಐಎ ಸ್ಪಷ್ಟನೆ
ನಿಯೋಜಿತ ಪ್ರಧಾನಮಂತ್ರಿ ನರೇಂದ್ರ ಮೋದಿ...
ಪಾಟ್ನಾ: ನಿಯೋಜಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬುಧವಾರ ಸ್ಪಷ್ಟಪಡಿಸಿದೆ.
ಬಿಹಾರದ ಪಾಟ್ನಾದಲ್ಲಿ ಅಕ್ಟೋಬರ್ 27 ರಂದು ಆಯೋಜಿಸಲಾಗಿದ್ದ ನರೇಂದ್ರ ಮೋದಿ ಚುನಾವಣಾ ರ್ಯಾಲಿಗೂ ಮುನ್ನ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು ಸರಣಿ ಬಾಂಬ್ ದಾಳಿ ನಡೆಸಿದ್ದರು. ಇದು ಉದ್ದೇಶ ಪೂರ್ವಕವಾಗಿ ಮೋದಿ ಅವರ ಹತ್ಯೆ ಮಾಡಲು ಈ ಸರಣಿ ದಾಳಿ ನಡೆದಿತ್ತು ಎಂದು ಎನ್ಐಎ ಹೇಳಿದೆ. ಈ ಸಂಬಂಧ ದಾಳಿಯ ಮಾಸ್ಟರ್ ಮೈಂಡ್ ತೆನ್ಸೀನ್ ಅಖ್ತರ್ನನ್ನು ಕಳೆದ ಮಾರ್ಚ್ನಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ಪಾಟ್ನಾ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪುನಃ ನಾಲ್ವರು ಶಂಕಿತ ಆರೋಪಿಗಳನ್ನು ಎನ್ಐಎ ಮತ್ತು ರಾಂಚಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತೌಫಿಕ್, ಮುಜಿಬುಲ್ಲಾ, ಹೈದರ್ ಮತ್ತು ನುಮಾನ್ ಎಂದು ಗುರುತಿಸಲಾಗಿದೆ.
ಪಾಟ್ನಾದಲ್ಲಿ ಅಕ್ಟೋಬರ್ 27ರಂದು ಸುಮಾರು 6 ಕಡೆಗಳಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಸುಮಾರು 6 ಮಂದಿ ಸಾವಿಗೀಡಾಗಿದ್ದು, 85 ಮಂದಿಗೆ ಗಾಯಗಳಾಗಿದ್ದವು.