ಪ್ರಧಾನಿ ಪಟ್ಟಕ್ಕೆ ಗುಜರಾತ್ ಸಾಧನೆಯೇ ಮೆಟ್ಟಿಲು: ಮೋದಿ
ನನ್ನ ಈ ಯಶಸ್ಸಿಗೆ ಗುಜರಾತ್ನ ಮಾದರಿ ಸರ್ಕಾರ ಹಾಗೂ ಗುಜರಾತ್ ಜನತೆಯೂ ಕಾರಣ ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
ಅಹಮದಾಬಾದ್: ನನ್ನ ಈ ಯಶಸ್ಸಿಗೆ ಗುಜರಾತ್ನ ಮಾದರಿ ಸರ್ಕಾರ ಹಾಗೂ ಗುಜರಾತ್ ಜನತೆಯೂ ಕಾರಣ ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
ಇಂದು ಗುಜರಾತ್ ವಿಧಾಸಭೆಯ ವಿಶೇಷ ಅಧಿವೇಶನದಲ್ಲಿ ತಮ್ಮ ವಿದಾಯ ಭಾಷಣ ಮಾಡಿದ ಮೋದಿ, ಗುಜರಾತ್ ಮಾದರಿಯಿಂದಲೇ ನಾನು ಇಂದು ಪ್ರಧಾನಿಯಾಗುತ್ತಿದ್ದೇನೆ. ಪ್ರಧಾನಿ ಪಟ್ಟಕ್ಕೆ ಗುಜರಾತ್ ಸಾಧನೆಯೇ ಮೆಟ್ಟಿಲು ಎಂದು ಹೇಳಿದರು. ಅಲ್ಲದೆ ಗುಜರಾತ್ ಮಾದರಿ ಬಗ್ಗೆ ಜನತೆಗೆ ಕುತೂಹಲ ಇದೆ ಎಂದರು.
ನಾನು ಮುಖ್ಯಮಂತ್ರಿ ಆದಾಗ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಹಿಂದಿನ ಸರ್ಕಾರ ಬಿಟ್ಟು ಹೋಗಿದ್ದ ಹಲವು ಕೆಲಸಗಳನ್ನು ಪೂರ್ಣಗೊಳಿಸಿದ್ದೇನೆ. 2002ರಲ್ಲಿ ಗುಜರಾತ್ ಸಾಲದ ಕೂಪದಲ್ಲಿತ್ತು ಎಂದು ಮೋದಿ ತಿಳಿಸಿದರು.
ನನಗೆ ನಾಲ್ಕು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗುವ ಸೌಭಾಗ್ಯ ಸಿಕ್ಕಿತು. ನನ್ನನ್ನು ಮುಖ್ಯಮಂತ್ರಿ ಮಾಡಿದ ನಿಮಗೆ ಕೃತಜ್ಞನಾಗಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಮೋದಿ ಭಾವುಕರಾಗಿ ನುಡಿದರು.
ಗುಜರಾತ್ ವಿಧಾನಸಭೆಯಿಂದ ನಾನು ಸಾಕಷ್ಟು ಕಲಿತಿದ್ದೇನೆ. ಪ್ರಜಾಪ್ರಭುತ್ವದ ನಿಯಮ ಪಾಲಿಸುವುದು ಅತ್ಯವಶ್ಯಕ ಎಂದು ಮೋದಿ ಹೇಳಿದರು.
ಇದಕ್ಕು ಮೊದಲ ಮಾತನಾಡಿದ ಮೋದಿ ಆಪ್ತ ಅಮಿತ್ ಶಾ, ಮೊದಲ ಬಾರಿಗೆ ಓರ್ವ ಗುಜರಾತಿ ಈ ದೇಶದ ಪ್ರಧಾನಿಯಾಗುತ್ತಿದ್ದಾರೆ. ಗುಜರಾತಿ ಮಣ್ಣಿನ ಮಗನಿಗೆ ದೇಶದ ಜನತೆ ಬಹುಮತ ನೀಡಿ ಗೆಲ್ಲಿಸಿದ್ದಾರೆ ಎಂದು ಹೇಳಿದರು.