ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್ ನಿಜವಾಗಿಯೂ ಡಿಫರೆಂಟ್ ಲೀಡರ್ರಾ?

ನಾಯಕನಾಗುವುದು ಹೇಗೆ ಎಂಬುದಕ್ಕೆ...

Lingaraj Badiger
Updated On : 22 May 2014, 2:49 am

ನಾಯಕನಾಗುವುದು ಹೇಗೆ ಎಂಬುದಕ್ಕೆ 'ಕೇಜ್ರಿವಾಲ್ ಸ್ಟೈಲ್‌'ನಲ್ಲಿ ಸುದೀರ್ಘ ಕಾಲ ಬಾಳಿಕೆ ಬರುವ ತಂತ್ರಗಳಿವೆ. ಅವುಗಳನ್ನೊಮ್ಮೆ ನೋಡಿ.

ತಲೆಗೊಂದು ಚೂಪು ಟೋಪಿ, ಮೈಗೊಂದು ಸ್ವೆಟರ್, ಮುಖಕ್ಕೆ 12 ಎಂಎಂ ನಗು, ಕಾಲಿಗೆರಡು ಸಾದಾಸೀದಾ ಚಪ್ಪಲಿ ಹಾಗೂ ಮೂಲಂಗಿ ಪ್ಯಾಂಟು. ಆಗಾಗಿ ಒತ್ತರಿಸಿ ಬರುವ ಕೆಮ್ಮಿಗೆ ಇಲಾಜು ಮಾಡಿಸಿಕೊಳ್ಳಲೂ ಈ ಮನುಷ್ಯನಿಗೆ ಪುರುಸೊತ್ತಿಲ್ಲ.

ದೇಶಕ್ಕೊಬ್ಬ ಹೊಸ ನಾಯಕ ಈ ರೂಪದಲ್ಲಿ ಸಿಗುತ್ತಾನೆಂದು ಯಾರಾದರೂ ಒಂದು ವರ್ಷದ ಹಿಂದೆ ಊಹಿಸಿದ್ದರಾ? ಬಿಲ್ಕುಲ್ ಇಲ್ಲ. ಆದರೂ ಅವನು ಸಿಕ್ಕ ಮತ್ತು ಈ ದೇಶದ ಜನ ಕಾಯುತ್ತಿದ್ದುದು ಇಂಥ ನಾಯಕನಿಗಾಗಿಯೇ ಎಂಬುದನ್ನು ತೋರಿಸಿಕೊಟ್ಟ.
ಈತ ಅರವಿಂದ ಕೇಜ್ರಿವಾಲ್ ಎಂದು ಯಾರಿಗೂ ಹೊಸತಾಗಿ ಹೇಳಬೇಕಿಲ್ಲ. ಇಷ್ಟು ವರ್ಷ ದೆಹಲಿಯ ಮುಖ್ಯಮಂತ್ರಿ ಯಾರು ಎಂದು ಕರ್ನಾಟಕದ ಯಾವುದೋ ಮೂಲೆಯ ಶಾಲೆಯೊಂದರ ಹುಡುಗನಿಗೆ ಕೇಳಿದ್ದರೆ ಖಂಡಿತ ಅವನಿಗೆ ಆ ಹೆಸರು ಗೊತ್ತಿರುತ್ತಿರಲಿಲ್ಲ. ಇಂದು ಕೇಳಿನೋಡಿ. ಉತ್ತರ ಕರೆಕ್ಟಾಗಿ ಬರುತ್ತದೆ.

ಏಕೆಂದರೆ ಕೇಜ್ರಿವಾಲ್ ಎಂಬ ಆಮ್ ಆದ್ಮಿ ಎಬ್ಬಿಸಿದ ಹವಾ ಅಂಥದ್ದು. ಇಷ್ಟಕ್ಕೂ ಕಾಂಗ್ರೆಸ್ ಪಕ್ಷ ಹತ್ತು ವರ್ಷದಿಂದ ಆಮ್ ಆದ್ಮಿಯ ಜಪ ಮಾಡುತ್ತಿದ್ದರೂ ಆ ಪದದ ಅರ್ಥವೇನೆಂದು ಹಿಂದಿ ಬಾರದ ಯಾರಿಗೂ ಗೊತ್ತಿರಲಿಲ್ಲ. ಕೇಜ್ರಿವಾಲ್ ಈ ಹೆಸರು ಕೈಗೆತ್ತಿಕೊಂಡ ಮೇಲೆ ಆಮ್ ಆದ್ಮಿ ಎಂಬ ಅಮೂಲ್ಯ ಬ್ರ್ಯಾಂಡ್ ಒಂದು ದೇಶದಲ್ಲಿ ಸೃಷ್ಟಿಯಾಯಿತು. ಇವತ್ತು ಆಮ್ ಆದ್ಮಿಯ ಅರ್ಥವೇನು ಜಗತ್ತಿನಲ್ಲಿ ಇಂಥದ್ದು ಎರಡೇ ಪೀಸು!

ಇದು ಶತಮಾನಕ್ಕೊಮ್ಮೆ ಅಥವಾ ಅದಕ್ಕಿಂತ ಅಪರೂಪಕ್ಕೊಮ್ಮೆ ಜರುಗುವ ವಿದ್ಯಮಾನ. ತೀರಾ ನಮ್ಮನಿಮ್ಮಂತೆ ಅಕ್ಕಪಕ್ಕದ ಮನೆಯಲ್ಲಿ ಓಡಾಡಿಕೊಂಡಿದ್ದ ಮಾಮೂಲಿ ವ್ಯಕ್ತಿಯೊಬ್ಬ ದಿಢೀರನೆ ಒಂದು ರಾಜ್ಯದ ಮುಖ್ಯಮಂತ್ರಿಯಾಗುವುದು ಸಿನಿಮಾದಲ್ಲಿ ಮಾತ್ರ ಸಾಧ್ಯ. ಯಾವ ದೇಶದಲ್ಲೂ ಇಂತಹ ಘಟನೆ ಜರುಗಿದ್ದಿಲ್ಲ. ಆದರೆ ಇದು ಅಸಾಧ್ಯವೇನಲ್ಲ ಎಂದು ಕೇಜ್ರಿವಾಲ್ ತೋರಿಸಿದರು. ಅದು ಆಮ್ ಆದ್ಮಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ತಾಕತ್ತು.
ದುರ್ಬೀನು ಹಾಕಿ ಹುಡುಕಿದರೆ ಉರುಗ್ವೆ ಎಂಬ ಕರ್ನಾಟಕದ ಕಾಲುಭಾಗವಿರುವ ದೇಶದಲ್ಲಿ ಒಬ್ಬ ಇಂತಹ ರಾಷ್ಟ್ರಾಧ್ಯಕ್ಷ ಕಾಣಿಸುತ್ತಾನೆ. ಆತ ಭಯಂಕರ ಬಡವ. ದೇಶದ ಬಗ್ಗೆ ತನಗಿರುವ ಕಾಳಜಿ ಹಾಗೂ ಒಳ್ಳೆಯತನದಿಂದಲೇ ಆತ ಆ ದೇಶಕ್ಕೆ ಅಧ್ಯಕ್ಷನಾದ. ಇವತ್ತಿಗೂ ಅವನು ಹಳ್ಳಿಯೊಂದರಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಾನೆ. ಹಾಗೆ ಬದುಕುತ್ತಲೇ ದೇಶ ನಡೆಸುತ್ತಾನೆ. ಮನೆಯಲ್ಲಿ ತನ್ನ ಚಹಾ ತಾನೇ ಮಾಡಿಕೊಳ್ಳುತ್ತಾನೆ. ಅತಿಥಿಗಳು ಬಂದರೆ ಅವರಿಗೂ ಅಡುಗೆ ಮಾಡಿ ಬಡಿಸುತ್ತಾನೆ. ಅಷ್ಟು ಸರಳತೆಯನ್ನು ಭಾರತದಂತಹ ಶತಕೋಟಿ ಜನಸಂಖ್ಯೆಯ ದೇಶದ ಒಂದು ರಾಜ್ಯದ ಮುಖ್ಯಮಂತ್ರಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ. ಏಕೆಂದರೆ ಇಲ್ಲಿನ ಅನಿವಾರ್ಯತೆಗಳೇ ಒಬ್ಬ ಮುಖ್ಯಮಂತ್ರಿಗೆ ಆಡಂಬರದ ಜೀವನವನ್ನು ಬೇಡ ಬೇಡ ಅಂದರೂ ಮೈಮೇಲೆ ಹೇರುತ್ತವೆ.
ಆದರೂ ಕೇಜ್ರಿವಾಲ್ ಸರಳವಾಗಿಯೇ ಉಳಿದಿದ್ದಾರೆ. ಅದೇ ಅವರ ನಾಯಕತ್ವದ ಗುಟ್ಟು.
ಹಿಂದೆ ಆಂಧ್ರಪ್ರದೇಶದಲ್ಲಿ ಎನ್‌ಟಿಆರ್ ಎಂದೇ ಖ್ಯಾತರಾಗಿದ್ದ ಎನ್.ಟಿ.ರಾಮರಾವ್ ಹೀಗೆ ಒಂದೇ ವರ್ಷದಲ್ಲಿ ಪಾರ್ಟಿ ಕಟ್ಟಿ ಚುನಾವಣೆಯಲ್ಲೂ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಆದರೆ ಅದಕ್ಕಿಂತ ಮುಂಚೆಅವರು ಕರ್ನಾಟಕದ ಡಾ೤ ರಾಜಕುಮಾರ್‌ರಷ್ಟೇ ಜನಪ್ರಿಯ ಚಿತ್ರನಟರಾಗಿದ್ದರು. ಹಾಗಾಗಿ ಜನ ಅವರಿಗೆ ಕಣ್ಮುಚ್ಚಿಕೊಂಡು ಮತ ಹಾಕಿದ್ದರು.

ಕೇಜ್ರಿವಾಲ್‌ಗೆ ಇಂತಹ ಆಕರ್ಷಣೆಗಳ್ಯಾವುವೂ ಇರಲಿಲ್ಲ. ಅವರ ಬಳಿಯಿದ್ದುದು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಏಕೈಕ ಗುರಿ,  ಅದಕ್ಕಾಗಿ ಈ ದೇಶದ ಜನಸಾಮಾನ್ಯರೆಲ್ಲ ಒಂದಾಗಬೇಕೆಂಬ ಕಾಳಜಿ ಮತ್ತು ಜನರು ಇದಕ್ಕಾಗಿ ಒಂದಾಗುತ್ತಾರೆಂಬ ಅದಮ್ಯ ನಂಬಿಕೆ.


ನಾಯಕತ್ವಕ್ಕೆ ಕೇಜ್ರಿ ಹೊಸ ಸೂತ್ರಗಳು
ಇದು ಭಾರತಕ್ಕೆ ತೀರಾ ಹೊಸತನದ ಲೀಡರ್‌ಶಿಪ್. ಇಂದು ಮಾರ್ಕೆಟ್‌ನಲ್ಲಿ ನಾಯಕತ್ವದ ಗುಣಗಳ ಬಗ್ಗೆ ಹೇಳುವ ಸಾವಿರಾರು ಪುಸ್ತಕಗಳಿವೆ. ನಮ್ಮ ಐಐಎಂಗಳಲ್ಲಿ ಲೀಡರ್‌ಶಿಪ್ ಕ್ವಾಲಿಟಿಗಳ ಬಗ್ಗೆ ವರ್ಷಗಟ್ಟಲೆ ಪಾಠ ಮಾಡುತ್ತಾರೆ. ಅವುಗಳನ್ನು ಕೇಳಿಕೊಂಡು ಬೆಳೆದವರು ಒಬ್ಬ ಅಂಬಾನಿಯೋ, ಜೈರಾಂ ರಮೇಶೋ ಅಥವಾ ರಾಹುಲ್ ಗಾಂಧಿ ರೀತಿಯ ನಾಯಕರೋ ಆಗಬಹುದು. ಆದರೆ, ಜನರಿಗೆ ಅವರು ಹತ್ತಿರವಾಗುವುದಿಲ್ಲ. ಏಕೆಂದರೆ ಅವರ್ಯಾರೂ ಜನರ ನಾಡಿಮಿಡಿತ ಅರ್ಥಮಾಡಿಕೊಂಡ ನಾಯಕರಲ್ಲ. ಅಪ್ಪಟ ಸಾಮಾನ್ಯರ ನಡುವಿನಿಂದ ಎದ್ದುಬಂದ ಒಬ್ಬ ಅಸಾಮಾನ್ಯ ನಾಯಕ ಬೇಕು ಅಂದರೆ ಅವನನ್ನು ಕೇಜ್ರಿವಾಲ್‌ರಂಥವರಲ್ಲೇಹುಡುಕಬೇಕು.
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಲೇ ಒಬ್ಬ ಎತ್ತರದ ನಾಯಕನಾಗಿ ಬೆಳೆದಕೇಜ್ರಿವಾಲ್‌ರ ನಡೆಯಲ್ಲೇ ನಾಯಕತ್ವಕ್ಕೆ ಇಲ್ಲಿಯವರೆಗೆ ಯಾರೂ ಹೇಳದ ಹೊಸ ರೀತಿಯ ಪಾಠಗಳಿವೆ. ನಾಯಕನಾಗುವುದು ಹೇಗೆ ಎಂಬುದಕ್ಕೆ 'ಕೇಜ್ರಿವಾಲ್ ಸ್ಟೈಲ್‌'ನಲ್ಲಿ ಸುದೀರ್ಘ ಕಾಲ ಬಾಳಿಕೆ ಬರುವ ತಂತ್ರಗಳಿವೆ. ಅವುಗಳನ್ನೊಮ್ಮೆ ನೋಡಿ.

ನಗು ಎಲ್ಲರನ್ನೂ ಗೆಲ್ಲುತ್ತದೆ
ಅಣ್ಣಾ ಹಜಾರೆ ಜೊತೆ ಲೋಕಪಾಲ ಹೋರಾಟ ಮಾಡುತ್ತಿದ್ದಾಗ ಕೇಜ್ರಿವಾಲ್ ದೂರ್ವಾಸ ಮುನಿಯಾಗಿದ್ದರು. ಯಾವಾಗಲೂ ಅವರ ಮುಖ ಬಿಗಿದಿರುತ್ತಿತ್ತು. ಆದರೆ ರಾಜಕೀಯಕ್ಕೆ ಬಂದಕೂಡಲೇ ಅದು ಏಕ್ದಂ ಬದಲಾಯಿತು. ಈಗ ನಗುವೇ ಕೇಜ್ರಿವಾಲ್‌ರ ಟ್ರಂಪ್‌ಕಾರ್ಡ್. ಅದು ಸದಾನಂದಗೌಡರಷ್ಟು ಬಿರಿದ ನಗುವಲ್ಲ. ಆಪ್ತವಾದ ಮುಗುಳ್ನಗು. ಯಾರು ಏನೇ ಕೇಳಿದರೂ, ತಮಗೆ ಬೇಡದ್ದನ್ನು ಕೇಳಿದರೂ ಕೇಜ್ರಿವಾಲ್ ನಗುತ್ತಲೇ ಉತ್ತರಿಸುತ್ತಾರೆ. ನಗುವಿಗೆ ಎಲ್ಲರನ್ನೂ ಗೆಲ್ಲುವ ಶಕ್ತಿಯಿದೆ. ಯಡಿಯೂರಪ್ಪ ಏಕೆ ಫೇಲಾದರು ಎಂಬುದಕ್ಕೆ ಅವರು ಎಲ್ಲರಿಗೂ ಬೈಯುತ್ತಿದ್ದರು ಎಂಬುದು ಕೂಡ ಒಂದು ಕಾರಣ. ಕೇಜ್ರಿವಾಲ್ ಈ ಹಂತ ದಾಟಿ ಮುಂದೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ನಿಮಗೆ ನೀಡಿರುವ ಬೆಂಬಲ ಹಿಂಪಡೆದರೆ ಸರ್ಕಾರ ಬಿದ್ದುಹೋಗುತ್ತದೆಯಲ್ಲ ಸರ್ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರೆ, ನಾವು ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನವನ್ನಾದರೂ ಎಲ್ಲಿ ಮಾಡುತ್ತಿದ್ದೇವೆ ಎಂದು ನಗುತ್ತಲೇ ಮರುಪ್ರಶ್ನೆ ಹಾಕುತ್ತಾರೆ. ಯಾರೂ ತಮ್ಮ ನಾಯಕ ಮುಖ ಗಂಟುಹಾಕಿಕೊಂಡಿರುವುದನ್ನು ನೋಡಲು ಬಯಸುವುದಿಲ್ಲ. ಅವನು ಹಸನ್ಮುಖಿಯಾಗಿದ್ದರೆ ಆ ಮುಖವೇ ಬಹಳ ಜನರನ್ನು ಅವನತ್ತ ಆಕರ್ಷಿಸುತ್ತದೆ.

ಸಣ್ಣ ಹೆಜ್ಜೆ, ದೊಡ್ಡ ಬದಲಾವಣೆ
ಭ್ರಷ್ಟಾಚಾರದ ಬಗ್ಗೆ ಈ ದೇಶದಲ್ಲಿ ಬಹಳ ಜನ ಮಾತನಾಡುತ್ತಾರೆ. ಅವರೆಲ್ಲ ಲಕ್ಷಾಂತರ ಕೋಟಿ ರೂ. ಕಪ್ಪು ಹಣ ವಾಪಸ್ ತರಬೇಕು ಎಂಬುದರಿಂದ ಹಿಡಿದು ಭ್ರಷ್ಟಾಚಾರ ನಿರ್ಮೂಲನೆಗೆ ದೊಡ್ಡ ದೊಡ್ಡ ಯೋಜನೆಗಳನ್ನು ಮುಂದಿಡುತ್ತಾರೆ. ಆದರೆ ಸಣ್ಣ ಸಣ್ಣ ಹೆಜ್ಜೆಯಿಡುತ್ತಲೇ ಭ್ರಷ್ಟಾಚಾರವೆಂಬ ಸಮುದ್ರ ದಾಟಬೇಕು ಎಂಬುದನ್ನು ಕೇಜ್ರಿವಾಲ್ ಅರ್ಥಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ತಳಮಟ್ಟದಿಂದ ಜನಸಾಮಾನ್ಯರನ್ನು ಸಂಘಟಿಸುತ್ತಿದ್ದಾರೆ. ಯಾರೂ ಲಂಚ ಕೊಡಬೇಡಿ ಎಂಬ ಮನವಿಯಿಂದಲೇ ಅವರ ಹೋರಾಟ ಶುರುವಾಗುತ್ತದೆ. ಲಂಚ ಕೊಡದೆ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬುದನ್ನು ಅವರು ಜನರಿಗೆ ಅರ್ಥ ಮಾಡಿಸುತ್ತಿದ್ದಾರೆ. ಆ ತಂತ್ರ ಜನರಿಗೆ ತಿಳಿದ ದಿನ ದೇಶದ ನರನಾಡಿಯಲ್ಲಿಹರಿಯುತ್ತಿರುವ ಅರ್ಧ ಭ್ರಷ್ಟಾಚಾರದ ರಕ್ತ ಶುದ್ಧವಾಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಪಂಚತಂತ್ರದ ಹಳೆಯ ಸೂತ್ರ ಕೇಜ್ರಿವಾಲ್‌ಗೆ ಇಷ್ಟ. ಅಷ್ಟಷ್ಟಾಗಿ ಎಲ್ಲವನ್ನೂ ಸರಿಪಡಿಸಬೇಕು ಎಂಬುದು ಅವರ ನಾಯಕತ್ವದ ಶೈಲಿ.

ಬೊಗಳೆ ಬಿಡಬೇಡಿ, ಆಡಿದ್ದನ್ನು ಮಾಡಿ
ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ ನೀಡುವ ಭರವಸೆಗಳನ್ನು ಯಾವತ್ತೂ ಈಡೇರಿಸುವುದಿಲ್ಲ ಎಂಬ ಅನಾದಿಕಾಲದ ನಂಬಿಕೆಯನ್ನು ಕೇಜ್ರಿವಾಲ್ ಸುಳ್ಳು ಮಾಡಿದ್ದಾರೆ. ಚುನಾವಣೆಗೆ ಮುನ್ನಅವರು ದೆಹಲಿಯಲ್ಲಿ ವಿದ್ಯುತ್ ದರವನ್ನು ಅರ್ಧಕ್ಕರ್ಧ ಇಳಿಸುತ್ತೇನೆ ಎಂದಿದ್ದರು. ಅಧಿಕಾರಕ್ಕೆ ಬಂದ ಮೇಲೆ ಮರೆಯದೆ ಇಳಿಸಿದರು. ಉಚಿತವಾಗಿ ನೀರು ಕೊಡುತ್ತೇನೆ ಅಂದಿದ್ದರು. ಅದನ್ನೂ ಕೊಟ್ಟರು. ಲೋಕಪಾಲ ಜಾರಿಗೆ ತರುತ್ತೇನೆ ಎಂದಿದ್ದರು. ಈಗ ತರುತ್ತಿದ್ದಾರೆ. ನಾಯಕನಾದವನು ಆಡಿದಂತೆ ನಡೆಯಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ಹಾಗೆನಡೆದುಕೊಂಡರೆ ಮಾತ್ರ ಅವನನ್ನು ಇಷ್ಟಪಡುತ್ತಾರೆ ಮತ್ತು ಮುಂದೆಯೂ ಅವನೇ ತಮ್ಮ ನಾಯಕನಾಗಿರಲಿ ಎಂದು ಬಯಸುತ್ತಾರೆ. ಇದು ಕಾರ್ಪೋರೇಟ್ ಕಚೇರಿಯ ಬಾಸ್‌ಗಳಿಗೂ ಅನ್ವಯಿಸುತ್ತದೆ.

ಧಿಮಾಕು ಬೇಡ, ತಗ್ಗಿ ನಡೆಯಿರಿ
ರಾಜಕಾರಣಿಗಳಿಗೊಂದು ದೊಡ್ಡ ಸಮಸ್ಯೆಯಿದೆ. ಚುನಾವಣೆ ಬಂದಾಗ ಮಂಡಿಯವರಿಗೆ ಬಗ್ಗಿ ನಮಸ್ಕಾರ ಮಾಡಿ ಮತ ಕೇಳುವ ಅವರು ಚುನಾವಣೆಯಲ್ಲಿ ಗೆದ್ದಮೇಲೆ ಜನರನ್ನೇ ತಮ್ಮ ಮುಂದೆ ಮಂಡಿಯೂರಿ ಕುಳಿತುಕೊಳ್ಳುವಂತೆ ಮಾಡುತ್ತಾರೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ ಆದ ತಕ್ಷಣ ಅವರಿಗೆ ಕೋಡು ಬಂದುಬಿಡುತ್ತದೆ. ನಮ್ಮ ರಾಜ್ಯದ ಇಂದಿನ ಮುಖ್ಯಮಂತ್ರಿಗಳು ಐಎಎಸ್ ಅಧಿಕಾರಿಗಳನ್ನು ಕೂಡ ಹೋಗು-ಬಾ ಅಂತ ಏಕವಚನದಲ್ಲೇ ಮಾತನಾಡಿಸುತ್ತಾರೆ. ಎಲ್ಲರಿಗೂ ಅವರದ್ದೇ ಆದ ಆತ್ಮಗೌರವ ಇರುತ್ತದೆ, ಅದನ್ನು ಗೌರವಿಸಬೇಕು ಎಂಬುದು ನಾಯಕನಾದವನು ಮೊದಲು ಅರ್ಥಮಾಡಿಕೊಳ್ಳಬೇಕಾದ ಸಂಗತಿ. ಕೇಜ್ರಿವಾಲ್ ಚುನಾವಣೆಯಲ್ಲಿ ಗೆದ್ದ ನಂತರವೂ ಮೊದಲು ಹೇಗಿದ್ದರೋ ಹಾಗೆಯೇ ಇದ್ದಾರೆ. ಅಧಿಕಾರ ಅವರಿಗೆ ಮದವೇರಿಸಿಲ್ಲ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳೂ ಪ್ರತಿಪಕ್ಷದವರಿಗೆ 'ಇನ್ನು ಪರ್ಮನೆಂಟಾಗಿ ನೀವು ಅಲ್ಲೇ ಕುಳಿತಿರಬೇಕು' ಎನ್ನುತ್ತಿರುತ್ತಾರೆ. ಆದರೆ ಕೇಜ್ರಿವಾಲ್ 'ನಾವು ನಾಳೆಯೇ ಪ್ರತಿಪಕ್ಷದಲ್ಲಿ ಕೂರಬೇಕಾಗಿ ಬರಬಹುದು, ಅದಕ್ಕೆ ಸಿದ್ಧರಿದ್ದೇವೆ'  ಎಂದು ಮೊದಲ ದಿನದಿಂದಲೇ ಹೇಳುತ್ತ ಬಂದಿದ್ದಾರೆ. ಖಾಸಗಿ ಕಂಪನಿಗಳಲ್ಲೂ ಬಾಸ್‌ಗಳು 'ನಾವು ದೇವಲೋಕದಿಂದ ಬಂದವರು' ಎಂಬಂತೆ ವರ್ತಿಸುತ್ತಿರುತ್ತಾರೆ. ಅವರಿಗೆಲ್ಲ ಕೇಜ್ರಿವಾಲ್ ಮಾದರಿಯಾಗಬೇಕು.

ಸೋಷಿಯಲ್ ಮೀಡಿಯಾ ಮ್ಯಾಜಿಕ್
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮಾ ಟ್ವೀಟರನ್ನು ತುಂಬಾ ಬಳಸಿಕೊಂಡಿದ್ದರು. ಅದಕ್ಕೂ ಮುನ್ನ ನರೇಂದ್ರ ಮೋದಿ ಗುಜರಾತ್ ಚುನಾವಣೆಯಲ್ಲಿ ಎಸ್‌ಎಂಎಸ್ ಬಳಸಿಕೊಂಡಿದ್ದರು. ಕೇಜ್ರಿವಾಲ್ ದೆಹಲಿ ಚುನಾವಣೆಯಲ್ಲಿ ಫೇಸ್‌ಬುಕ್ಕನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಹೊಸ ತಂತ್ರಜ್ಞಾನವನ್ನು ಈಗಿನ ಟ್ರೆಂಡ್‌ಗಳಿಗೆ ತಕ್ಕಂತೆ ಯಶಸ್ವಿಯಾಗಿ ಬಳಸಿಕೊಳ್ಳುವುದು ಉತ್ತಮ ನಾಯಕನ ಲಕ್ಷಣ. ಆಮ್ ಆದ್ಮಿ ಪಾರ್ಟಿ ಆ ಕೆಲಸ ಮಾಡಿತು. ಸಾಮಾಜಿಕ ಜಾಲತಾಣಗಳು ಚುನಾವಣಾ ಪ್ರಕ್ರಿಯೆಯನ್ನು ನಿಜವಾದ ಅರ್ಥದಲ್ಲಿ ಉದಾರೀಕರಣಗೊಳಿಸಿವೆ ಮತ್ತು ಮತ್ತಷ್ಟು ಪ್ರಜಾಸತ್ತಾತ್ಮಕಗೊಳಿಸಿವೆ. ರಾಜಕಾರಣಿಗಳಿಗೆ ಈಗಷ್ಟೇ ಅವುಗಳ ಮಹತ್ವ ತಿಳಿಯಲಾರಂಭಿಸಿದೆ. ಭಾರತದಲ್ಲಿ ಮೊದಲ ಬಾರಿಗೆ ಕೇಜ್ರಿವಾಲ್ ಪಕ್ಷ ಅವುಗಳ ಮಹತ್ವ ಅರ್ಥ್ಥಮಾಡಿಕೊಂಡಿತು. ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ಅವರಿಗೆ ಪಲಾವು, ಮಜ್ಜಿಗೆ ಹಂಚಿ, ಕೋಟ್ಯಂತರ ರೂಪಾಯಿ ಖರ್ಚುಮಾಡಿ ಸಮಾವೇಶ ಆಯೋಜಿಸುವುದಕ್ಕಿಂತ ಫೇಸ್‌ಬುಕ್, ಟ್ವೀಟರ್, ವ್ಯಾಟ್ಸಾಪ್‌ನಲ್ಲಿ ಜನರಿಗೆ ಕಡಿಮೆ ಖರ್ಚಿನಲ್ಲಿ ತಲುಪಬಹುದು. ಸಮಾವೇಶದಲ್ಲಿ ಕೇವಲ ರಾಜಕಾರಣಿಗಳ ಭಾಷಣಕ್ಕಷ್ಟೇ ಅವಕಾಶವಿರುತ್ತದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಜನರೊಂದಿಗೆ ಚರ್ಚೆ ನಡೆಸಬಹುದು. ದ್ವಿಮುಖ ಸಂವಾದವನ್ನು ಜನ ಯಾವಾಗಲೂ ಹೆಚ್ಚು ಇಷ್ಟಪಡುತ್ತಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮ ಮಾತಿಗೂ ಬೆಲೆಯಿದೆ ಎಂದು ಅವರಿಗೆ ಅನ್ನಿಸಿದರೆ ಹೆಚ್ಚು ಉತ್ಸಾಹದಿಂದ ಮತದಾನ ಮಾಡುತ್ತಾರೆ. ದಿಲ್ಲಿ ಚುನಾವಣೆಯಲ್ಲಿ ಬೇರೆಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಆಗಿದ್ದಕ್ಕಿಂತ ಹೆಚ್ಚು ಮತದಾನವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ.

ತೆರೆಮರೆಯಲ್ಲೇ ತಂತ್ರಗಾರಿಕೆ
ಅಣ್ಣಾ ಹಜಾರೆ ಲೋಕಪಾಲ ಹೋರಾಟ ಮಾಡಿದಾಗ ಅದರ ತಂತ್ರಗಾರಿಕೆಯನ್ನು ರೂಪಿಸಿದ್ದು ಅರವಿಂದ ಕೇಜ್ರಿವಾಲ್. ತೆರೆಮರೆಯಲ್ಲೇ ನಿಂತು ಅವರು ಎಲ್ಲ ನಡೆಗಳನ್ನೂ ಚಾಣಾಕ್ಷವಾಗಿ ನಿರ್ಧರಿಸಿದ್ದರು. ನಾಯಕನಾದವನಿಗೆ ತನ್ನ ಉದ್ದೇಶ ಸ್ಪಷ್ಟವಾಗಿರಬೇಕು ಮತ್ತು ಅದನ್ನು ಈಡೇರಿಸಲು ಅದ್ಭುತವಾದ ತಂತ್ರಗಾರಿಕೆ ತಿಳಿದಿರಬೇಕು. ಕೇಜ್ರಿವಾಲ್ ತಂತ್ರಗಾರಿಕೆಯಲ್ಲಿ ನಿಪುಣ. ಇಲ್ಲವಾದರೆ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವಿದ್ಯುತ್ ಬೆಲೆ ಅರ್ಧಕ್ಕಿಳಿಸುವ, ನೀರು ಪುಕ್ಕಟೆಯಾಗಿ ಕೊಡುವ ಹೆಚ್ಚುಕಮ್ಮಿ ಅಸಾಧ್ಯವೇ ಆಗಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ಅವರ ತಂತ್ರಗಾರಿಕೆ ಎಷ್ಟು ಹರಿತವಾಗಿತ್ತೆಂದರೆ, ಐದಾರು ಸಲ ದೆಹಲಿಯಲ್ಲಿ ಗೆದ್ದುಬಂದಿದ್ದ ರಾಷ್ಟ್ರೀಯ ಪಕ್ಷಗಳ ಶಾಸಕರನ್ನೂ ಆಮ್ ಆದ್ಮಿ ಪಾರ್ಟಿಯ ತೀರಾ ಸಾಮಾನ್ಯ ಅಭ್ಯರ್ಥಿಗಳು ಅನಾಯಾಸವಾಗಿ ಸೋಲಿಸಿದರು. ಅಷ್ಟೇಕೆ, ಮೂರು ಬಾರಿ ಸತತವಾಗಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತರನ್ನು ಮೊದಲ ಪ್ರಯತ್ನದಲ್ಲೇ ಕೇಜ್ರಿವಾಲ್ ಸೋಲಿಸಿದರು. ಅವರಿಗೆ ತಮ್ಮ ಗೆಲುವಿನಲ್ಲಿ ಅನುಮಾನವೇ ಇರಲಿಲ್ಲ. ಇದ್ದಿದ್ದರೆ ಇನ್ನೊಂದು ಕಡೆ ಸ್ಪರ್ಧಿಸಿದ್ದರು. ತಮ್ಮ ತಂತ್ರಗಾರಿಕೆಯಲ್ಲಿ ಅವರಿಗೆ ಆ ಪರಿ ವಿಶ್ವಾಸವಿತ್ತು.

ಯಾವುದೂ ಅಸಾಧ್ಯವಲ್ಲ
ಕೇಜ್ರಿವಾಲ್ ಅವರ ಯಶಸ್ಸಿನಿಂದ ನಾವು ಕಲಿಯಬಹುದಾದ ಅತಿ ದೊಡ್ಡ ಪಾಠವೆಂದರೆ ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದು. ನಿಸ್ವಾರ್ಥವಾಗಿ ಮತ್ತು ಯಾವುದೇ ಅಂಜಿಕೆಯಿಲ್ಲದೆ ಮುನ್ನುಗ್ಗಿದರೆ ಏನು ಬೇಕಾದರೂ ಸಾಧಿಸಬಹುದು. ಆರಂಭದಲ್ಲಿ ಕೇಜ್ರಿವಾಲ್ ಏಕಾಂಗಿಯಾಗಿ ಈ ದೇಶದ ಅತ್ಯಂತ ನಿಗೂಢವಾದ ಚುನಾವಣಾ ವ್ಯವಸ್ಥೆಯ ವಿರುದ್ಧ ಎದೆಸೆಟೆಸಿ ನಿಂತರು. ಹಣ, ಹೆಂಡ ಹಂಚದೆ ಯಾರೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬ ನಂಬಿಕೆ ದೃಢವಾಗಿದ್ದ ಹೊತ್ತಿನಲ್ಲಿ ಪ್ರಾಮಾಣಿಕವಾಗಿಯೂ ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದನ್ನು ತೋರಿಸಿದರು. ಈ ದೇಶದ ಚುನಾವಣಾ ವ್ಯಾಕರಣವನ್ನೇ ಬದಲಿಸಿದ ನಡೆಯಿದು. ಅವರೀಗ ಲೋಕಸಭೆ ಚುನಾವಣೆ ಎಂಬ ಬೃಹತ್ ಸವಾಲಿನ ವಿರುದ್ಧ ದಿಕ್ಕಿನಲ್ಲಿ ಈಜಲು ಆರಂಭಿಸಿದ್ದಾರೆ. ನಿಜವಾದ ನಾಯಕ ದೊಡ್ಡ ದೊಡ್ಡ ಸವಾಲುಗಳನ್ನು ತೆಗೆದುಕೊಳ್ಳಲುಇಷ್ಟಪಡುತ್ತಾನೆ.

ಮುಕ್ತವಾಗಿರಿ, ಪ್ರಾಮಾಣಿಕವಾಗಿರಿ
ರಾಜಕಾರಣದಲ್ಲಿ ಹಾಗೂ ಕಾರ್ಪೋರೇಟ್ ವ್ಯವಹಾರಗಳಲ್ಲಿ ಬಾಸ್‌ಗಳು ತಮ್ಮ ಕಾರ್ಯತಂತ್ರವನ್ನು ಯಾವಾಗಲೂ ರಹಸ್ಯವಾಗಿರಿಸಿಕೊಳ್ಳುತ್ತಾರೆ. ವಿರೋಧಿಗಳಿಗೆ ಅದು ತಿಳಿಯಬಾರದು ಎಂಬುದು ಒಂದು ಕಾರಣವಾದರೆ, ತನ್ನ ಜೊತೆಗಿರುವವರೇ ಮುಂದೆ ಈ ತಂತ್ರಗಳನ್ನು ತಿಳಿದುಕೊಂಡು ತನ್ನನ್ನು ಹಿಂದಿಕ್ಕಬಹುದು ಎಂಬ ಭಯ ಇನ್ನೊಂದು ಕಾರಣ. ಕೇಜ್ರಿವಾಲ್ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರು. ಅವರು ಎಲ್ಲವನ್ನೂ ಬಹಿರಂಗವಾಗಿ ನಿರ್ಧರಿಸಿದರು. ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು ಎಂಬ ಪ್ರಾಮಾಣಿಕ ಕಳಕಳಿಯೊಂದೇ ಅವರ ಎಲ್ಲ ನಿರ್ಧಾರಗಳಲ್ಲಿ ಕಾಣಿಸುತ್ತಿತ್ತು. ಜನಸಾಮಾನ್ಯರಿಗೆ ಬೇಕಾಗಿರುವುದೂ ಇದೇ. ಅವರಿಗೆ ತಮ್ಮನ್ನು ನಿರ್ಣಾಯಕ ಕೆಲಸಗಳಲ್ಲಿ ಒಳಗೊಳ್ಳುವ ನಾಯಕರು ಬೇಕು. ತಮ್ಮ ಮಾತಿಗೂ ಬೆಲೆ ನೀಡುವ ನಾಯಕನನ್ನು ಅವರು ಇಷ್ಟಪಡುತ್ತಾರೆ. ಆದ್ದರಿಂದಲೇ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ರಹಸ್ಯವಾಗಿ ಫೈನಲ್ ಮಾಡಲಿಲ್ಲ. ಬದಲಿಗೆ ಪಕ್ಷದ ಕಾರ್ಯಕರ್ತರನ್ನು ಕೇಳಿ, ಜನಸಾಮಾನ್ಯರ ಅಭಿಪ್ರಾಯ ಕೇಳಿ ಅಂತಿಮಗೊಳಿಸಿದರು. ಅದು ಕ್ಲಿಕ್ ಆಯಿತು.

-ಆಯುಷ್ಮಾನ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40117 ಗೆ ಭೇಟಿನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement