ಕಪ್ಪು ಹಣ: ವಾರದೊಳಗೆ ತನಿಖಾ ತಂಡ ರಚನೆಗೆ ಸುಪ್ರೀಂ ಸೂಚನೆ
ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣದ ಕುರಿತು ತನಿಖೆ..
ನವದೆಹಲಿ: ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣದ ಕುರಿತು ತನಿಖೆ ನಡೆಸಲು ಒಂದು ವಾರದೊಳಗೆ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕಳೆದ ವಿಚಾರಣೆ ವೇಳೆಯೇ ಕಪ್ಪು ಹಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ತನಿಖೆಗೆ ಎಸ್ಐಟಿ ರಚಿಸುವಂತೆ ಕೋರ್ಟ್ ಸೂಚಿಸಿತ್ತು. ಆದರೆ ಹಿಂದಿನ ಯುಪಿಎ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ತನ್ನ ನಿರ್ದೇಶನವನ್ನು ಪಾಲಿಸದಿರುವುದರ ಬಗ್ಗೆ ಕಿಡಿಕಾರಿರುವ ಕೋರ್ಟ್, ಈ ಬಾರಿ ಒಂದು ವಾರದೊಳಗೆ ಎಸ್ಐಟಿ ರಚಿಸುವಂತೆ ಗಡುವು ವಿಧಿಸಿದೆ.
ಸಪ್ರೀಂ ಕೋರ್ಟ್ನ ಇಬ್ಬರು ನಿವೃತ್ತ ನ್ಯಾಯಾಧೀಶರು ಈ ತನಿಖಾ ತಂಡದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಇದೇ ವೇಳೆ ಎಲ್ಜಿಟಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಭಾರತೀಯರ ಬಗ್ಗೆ ಜರ್ಮನಿ ನೀಡಿರುವ ದಾಖಲೆಗಳನ್ನು ಸುರಕ್ಷಿತವಾಗಿಡುವಂತೆ ಸುಪ್ರೀ ಕೋರ್ಟ್ ಕೇಂದ್ರ ಸರ್ಕಾರದ ಕಂದಾಯ ಕಾರ್ಯದರ್ಶಿಗೆ ಸೂಚಿಸಿದೆ.