ಮೋದಿ ಸಮಾರಂಭಕ್ಕೆ ಸಿಎಂ ಸಿದ್ದು ಗೈರು ಸಾಧ್ಯತೆ
ಬೆಂಗಳೂರು: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮೋದಿ ಸಮಾರಂಭಕ್ಕೆ ಗೈರು ಆಗುವ ಸಾಧ್ಯತೆ ಇದೆ.
ಮೋದಿ ಆಮಂತ್ರಣ ಪತ್ರಿಕೆ ಮುಖ್ಯಮಂತ್ರಿಗಳ ಕಚೇರಿ ತಲುಪಿದ್ದು, ಸಿದ್ದರಾಮಯ್ಯ ಮಾತ್ರ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಉತ್ಸಾಹ ತೊರಿಲ್ಲ ಮತ್ತು ಭಾರತ ರತ್ನ ಪುರಸ್ಕೃತ ಡಾ.ಸಿ.ಎನ್.ಆರ್.ರಾವ್ ಅವರ ಸನ್ಮಾನ ಸಮಾರಂಭದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿಲ್ಲ ಎನ್ನಲಾಗುತ್ತಿದೆ.
ಮತ್ತೊಂದು ಮೂಲಗಳ ಪ್ರಕಾರ, ಮೋದಿ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಸಿದ್ದು ಗೈರು ಆಗುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುತ್ತಾರಾ ಅಥವಾ ಪಕ್ಷದ ಪ್ರತಿನಿಧಿಯಾಗಿ ಬೇರೆ ಯಾರನ್ನಾದರೂ ಕಳುಹಿಸಿಕೊಡುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ.