ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಏನಿದೆ ವಿಶೇಷ?
ಸೋಮವಾರ ಸಂಜೆ 6 ಗಂಟೆಗೆ ಭಾರತದ ನೂತನ ಪ್ರಧಾನಿಯಾಗಿ..
ನವದೆಹಲಿ: ಸೋಮವಾರ ಸಂಜೆ 6 ಗಂಟೆಗೆ ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರ ಪ್ರಮಾಣ ವಚನ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದೇ ಬಿಂಬಿಸಲಾಗುತ್ತಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಅಂಥದ್ದೇನಿದೆ? ಈ ಕಾರ್ಯಕ್ರಮದ ವಿಶೇಷತೆಗಳು ಏನು?
ಇಲ್ಲಿದೆ ಏಳು ವಿಶೇಷತೆಗಳು
1. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಮೋದಿ ಪ್ರಮಾಣ ವಚನ ಕಾರ್ಯಕ್ರಮ ಅತೀ ದೊಡ್ಡ ಕಾರ್ಯಕ್ರಮವೆಂದೇ ಹೇಳಲಾಗುತ್ತಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ 4,000ಕ್ಕಿಂತಲೂ ಹೆಚ್ಚು ಅತಿಥಿಗಳು ಭಾಗವಹಿಸಲಿದ್ದಾರೆ.
2. ದೇಶಾದ್ಯಂತ ಮತ್ತು ಸಾರ್ಕ್ ರಾಷ್ಟ್ರಗಳಾದ್ಯಂತ ದೂರದರ್ಶನ ನೆಟ್‌ವರ್ಕ್ ಮೂಲಕ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಪ್ರಸಾರವಾಗಲಿದ್ದು, ವ್ಯಾಪಕವಾಗಿ ಪ್ರಸಾರವಾಗಲಿರುವ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಗಳಿಸಿಕೊಳ್ಳಲಿದೆ.
3. ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ಕ್ ರಾಷ್ಟ್ರಗಳ ನಾಯಕರು, ಪ್ರತಿನಿಧಿಗಳು, ಗವರ್ನರ್‌ಗಳು ಮತ್ತು ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಇದು ಮಾತ್ರವಲ್ಲದೆ ಭಾರತದ ಮುಖ್ಯ ನ್ಯಾಯಾಧೀಶರು, ಪದ್ಮ ಪ್ರಶಸ್ತಿ ವಿಜೇತರು, 777 ಸಂಸದರು ಹಾಗು ಬಿಜೆಪಿ ಆಮಂತ್ರಿತ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
4. ಈ ಕಾರ್ಯಕ್ರಮವನ್ನು ದೂರದರ್ಶನ 8 ಕ್ಯಾಮೆರಾ ಹಾಗೂ ಒಂದು ಒಬಿ ವ್ಯಾನ್ ಮೂಲಕ ಪ್ರಸಾರ ಮಾಡಲಿದೆ. ನಾಲ್ಕು ಕ್ಯಾಮೆರಾ ಮತ್ತು ಇನ್ನೊಂದು ಒಬಿ ವ್ಯಾನ್ ಬ್ಯಾಕ್ ಅಪ್ ಆಗಿ ಕಾರ್ಯವೆಸಗಲಿದೆ. 15 ಪ್ರಾದೇಶಿಕ ಭಾಷೆಗಳು ಸೇರಿದಂತೆ ಈ ಕಾರ್ಯಕ್ರಮ 15 ಡಿಡಿ ವಾಹಿನಿಗಳಲ್ಲಿ ಪ್ರಸಾರವಾಗಲಿದೆ.
5. ನಡೆದಾಡಲು ಅಶಕ್ತರಾದವರಿಗೆ 15 ತಳ್ಳು ಗಾಡಿಗಳ ವ್ಯವಸ್ಥೆ ಮಾಡಲಾಗಿದೆ.
6. ಕಾರ್ಯಕ್ರಮದಲ್ಲಿ ಲೈವ್ ಬ್ಯಾಂಡ್ ದೇಶಭಕ್ತಿ ಗೀತೆ ಮತ್ತು ಹಿಂದಿ ಸಿನಿಮಾ ಗೀತೆಗಳನ್ನು ನುಡಿಸಲಿದೆ.
7. ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಆ್ಯಂಬುಲೆನ್ಸ್ ಮತ್ತು ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.