ಎಡಿಜಿಪಿ ಡಾ. ರವೀಂದ್ರನಾಥ್ ರಾಜಿನಾಮೆ ಸಲ್ಲಿಸಿಲ್ಲ: ಗೃಹ ಸಚಿವ
2014 ಮೇ 26 ರಂದು ಬೆಂಗಳೂರಿನ...
ಬೆಂಗಳೂರು: 2014 ಮೇ 26 ರಂದು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿಶಾಪ್ನಲ್ಲಿ ಯುವತಿಯ ಫೋಟೋ ತೆಗೆಯುತ್ತಿದ್ದ ವೇಳೆ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಎಡಿಜಿಪಿ-ಕೆಎಸ್ಆರ್ಪಿ ಡಾ ಪಿ.ರವೀಂದ್ರನಾಥ್ ಅವರು ರಾಜಿನಾಮೆ ಸಲ್ಲಿಸಿಲ್ಲ ಎಂದು ರಾಜ್ಯ ಗೃಹ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಘಟನೆ ಏನು? : 2014 ಮೇ 26 ರಂದು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿಶಾಪ್ನಲ್ಲಿ ಬೆಳಗ್ಗೆ 10.30ಕ್ಕೆ ಫ್ರೀಲ್ಯಾನ್ಸ್ ಜರ್ನಲಿಸ್ಟ್ ಆಗಿರುವ ಯುವತಿಯೊಬ್ಬಳು ತನ್ನ ಕಸಿನ್ ಜತೆ ಕುಳಿತು ಮಾತನಾಡುತ್ತಿದ್ದ ವೇಳೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಆ ಯುವತಿಯ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಇದನ್ನು ಗಮನಿಸಿದ ಯುವತಿ ಮತ್ತು ಆಕೆಯ ಕಸಿನ್ ಫೋಟೋ ಕ್ಲಿಕ್ಕಿಸಿದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಕಾಫಿಶಾಪ್ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲಿಂದ ಆತನನ್ನು ಹಿಡಿದು ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಆತ ಸೆರೆ ಹಿಡಿದ ಯುವತಿಯ ಅಶ್ಲೀಲ ಫೋಟೋಗಳು ಪತ್ತೆಯಾಗಿತ್ತು. ಆತನನ್ನು ತರಾಟೆಗೆ ತೆಗೆದುಕೊಂಡಾಗ ತಾನು ಯಾರೆಂದು ಗೊತ್ತಾ? ಪೊಲೀಸರಿಗೆ ಈ ಬಗ್ಗೆ ದೂರು ನೀಡಬೇಡಿ ಎಂದು ಬೆದರಿಕೆಯನ್ನೂ ಒಡ್ಡಿದ್ದಾನೆ ಎಂದು ಯುವತಿ ತಮ್ಮ ದೂರಿನಲ್ಲಿ ಹೇಳಿದ್ದಾಳೆ. ತರಾಟೆಗೆ ತೆಗೆದುಕೊಂಡಾದ ಮೇಲೆ ಆ ವ್ಯಕ್ತಿ ತಾನು ಪೊಲೀಸ್ ಅಧಿಕಾರಿಯೆಂದು ಒಪ್ಪಿಕೊಂಡಿದರು. ಆಮೇಲೆ ನಮಗೆ ಆ ವ್ಯಕ್ತಿ ಎಡಿಜಿಪಿ-ಕೆಎಸ್ಆರ್ಪಿ ಡಾ ಪಿ.ರವೀಂದ್ರ ನಾಥ್ ಎಂಬುದು ತಿಳಿದು ಬಂತು ಎಂದು ಯುವತಿ ಹೇಳಿದ್ದಾಳೆ.
ಪ್ರಸ್ತುತ ಘಟನೆಯ ಬಗ್ಗೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಡಾ ಪಿ.ರವೀಂದ್ರ ನಾಥ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ವಿಚಾರಣೆಯ ನಂತರ ಮಂಗಳವಾರ ಮಾಧ್ಯಮದವರ ಮುಂದೆ ಕಣ್ಣೀರಿಟ್ಟ ಡಾ ಪಿ.ರವೀಂದ್ರ ನಾಥ್ ತಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ ಮಾಡಿಲ್ಲ ಎಂದು ಹೇಳಿದ್ದರು. ಮಾತ್ರವಲ್ಲದೆ ಈ ಘಟನೆಯಿಂದ ತಾನು ಅವಮಾನಿತನಾಗಿದ್ದು, ಡಿಜಿ ಐಜಿಪಿಗೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದರು.
ಈ ಬಗ್ಗೆ ಗೃಹಸಚಿವರು ಮಂಗಳವಾರ ಸಭೆ ನಡೆಸಿದ್ದಾರೆ. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಡಾ ಪಿ.ರವೀಂದ್ರ ನಾಥ್ ರಾಜಿನಾಮೆ ಸಲ್ಲಿಸಿಲ್ಲ. ದೂರಿನಲ್ಲಿ ಯುವತಿ ಡಾ ಪಿ.ರವೀಂದ್ರ ನಾಥ್ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ದೂರಿನಲ್ಲಿ ಆಕೆ ಅಪರಿಚಿತ ವ್ಯಕ್ತಿ ಎಂದೇ ಉಲ್ಲೇಖಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸೂಕ್ಷ್ಮ ತನಿಖೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಹೈಗ್ರೌಂಡ್ಸ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದು, ಡಾ ಪಿ.ರವೀಂದ್ರ ನಾಥ್ ಅವರ ಮೊಬೈಲ್ನಲ್ಲಿ ಯುವತಿಯ 2 ಫೋಟೋಗಳು ಪತ್ತೆಯಾಗಿದೆ ಎಂದಿದ್ದಾರೆ.