ಯುವತಿಯರ ಫೋಟೋ ತೆಗೆಯುತ್ತಿದ್ದ ಐಪಿಎಸ್ ಅಧಿಕಾರಿಗೆ ಸಾರ್ವಜನಿಕರಿಂದ ಥಳಿತ
ಬೆಂಗಳೂರು: ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಅನುಮತಿ ಇಲ್ಲದೆ ಯುವತಿಯರ ಫೋಟೋ ತೆಗೆಯುತ್ತಿದ್ದ ವೇಳೆ ಸಾರ್ವಜನಿಕರೇ ಅವರನ್ನು ಹಿಡಿದು ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಮಾನ್ಯ ಉಡುಪಿನಲ್ಲಿದ್ದ ಎಡಿಜಿಪಿ ಪಿ. ರವೀಂದ್ರನಾಥ್ ಅವರು ನಿನ್ನೆ ಮಧ್ಯಾಹ್ನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಕಾಫೀ ಶಾಪೊಂದರಲ್ಲಿ ತಮ್ಮ ಮೊಬೈಲ್‌ನಲ್ಲಿ ಯುವತಿಯರ ಫೋಟೋ ಹಾಗೂ ವಿಡಿಯೋವನ್ನು ಸೆರೆಹಿಡಿಯುತ್ತಿದ್ದರು. ಇದನ್ನು ಗಮನಿಸಿದ ಯುವತಿಯರು ಹಾಗೂ ಸಾರ್ವಜನಿಕರು ಅವರನ್ನು ಹಿಡಿದು ಥಳಿಸಿ, ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಐಪಿಎಸ್ ಅಧಿಕಾರಿ ಎಂಬುದು ಬಹಿರಂಗವಾಗಿದೆ. ಆದರೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪೊಲೀಸರು ನಿನ್ನೆ ರಾತ್ರಿಯಲ್ಲಾ ರವೀಂದ್ರನಾಥ್ ಅವರನ್ನು ಸಾಮಾನ್ಯ ಆರೋಪಿಯಂತೆ ಠಾಣೆಯ ಸೆಲ್‌ನಲ್ಲಿ ಹಾಕಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ಠಾಣೆಯಿಂದ ಬಿಡಿಸಿಕೊಂಡು ಹೋಗಿದ್ದಾರೆ.
ತಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹಾಗೂ ಪೇದೆಯನ್ನು ಅಮಾನತುಗೊಳಿಸಬೇಕು ಎಂದು ಆರೋಪಿ ಎಡಿಜಿಪಿ ಒತ್ತಾಯಿಸಿದ್ದಾರೆ. ಅಲ್ಲದೆ ಠಾಣೆಯ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹ ಆರೋಪಿಸಿದ್ದಾರೆ.
ಈ ಘಟನೆ ನಡೆಯುವ ಕೆಲವು ಗಂಟೆಗಳ ಮುನ್ನ ಎಡಿಜಿಪಿ ಸಾಹೇಬರು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು, ಇದು ಅತಿ ಸೂಕ್ಷ್ಮ ಪ್ರಕರಣವಾಗಿದ್ದು, ಘಟನೆಯ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.