ರೈಲು ದುರಂತ: ಘಟನಾ ಸ್ಥಳಕ್ಕೆ ತೆರಳುವಂತೆ ರಾಜ್ಯ ಸಚಿವರಿಗೆ ಡೀವಿ ಸೂಚನೆ
ನಿನ್ನೆ ಸಂಭವಿಸಿದ್ದ ಗೋರಖ್‌ಧಾಮ ಎಕ್ಸ್‌ಪ್ರೆಸ್...
ಲಖನೌ(ಉತ್ತರಪ್ರದೇಶ): ನಿನ್ನೆ ಸಂಭವಿಸಿದ್ದ ಗೋರಖ್‌ಧಾಮ ಎಕ್ಸ್‌ಪ್ರೆಸ್ ರೈಲು ದುರಂತ ಸ್ಥಳಕ್ಕೆ ಕೂಡಲೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳುವಂತೆ ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರು ಮಂಗಳವಾರ ರೇಲ್ವೆ ಖಾತೆ ರಾಜ್ಯ ಸಚಿವರಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ರೇಲ್ವೆ ಸಚಿವರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ವಿ. ಸದಾನಂದಗೌಡ ಅವರು ರೇಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರಿಗೆ ಘಟನಾ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಅಲ್ಲಿನ ದುರಂತದ ವಸ್ತುಸ್ಥಿತಿಯನ್ನು ಅವಲೋಕಿಸುವಂತೆ ಹಾಗೂ ದುರಂತದಲ್ಲಿ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರಿಗೆ ಸ್ವಾಂತನ ಹೇಳುವಂತೆ ಸೂಚಿಸಿದ್ದಾರೆ.
ರೇಲ್ವೆ ಸಚಿವ ಸದಾನಂದಗೌಡ ಅವರ ಸೂಚನೆಯಂತೆ ಮನೋಜ್ ಸಿನ್ಹಾ ಅವರು ದೆಹಲಿಯಿಂದ ಉತ್ತರಪ್ರದೇಶಕ್ಕೆ ತೆರಳಿದರು.
ನಿನ್ನೆ ಲಖನೌದ ನೈರುತ್ಯ ದಿಕ್ಕಿಗಿರುವ ಖಲೀಲಾಬಾದ್ ಬಳಿಯ ಚುರೈಬ್ ರೇಲ್ವೆ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಅದೇ ಹಳಿಯ ಮೇಲೆ ಬಂದ ಗೋರಖ್‌ಧಾಮ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ 40 ಪ್ರಯಾಣಿಕರು ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಈ ದುರಂತ ಸಂಭವಿಸುತ್ತಿದ್ದಂತೆ ಟ್ವೀಟ್ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದರು. ಅಲ್ಲದೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರವನ್ನು ಘೋಷಿಸಿದ್ದರು.