ಅಧಿಕಾರ ಸ್ವೀಕರಿಸಲು ಅನಂತ ಗೀತೆ ಸಮ್ಮತಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಮಹತ್ವದ ಖಾತೆ ಸಿಗದಿದ್ದಕ್ಕೆ ಅಸಮಾಧಾನ...
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಮಹತ್ವದ ಖಾತೆ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದ್ದ ಸಂಸದ ಅನಂತ ಗಂಗಾರಾಮ್ ಗೀತೆ ಅವರು ಬುಧವಾರ ಅಧಿಕಾರ ವಹಿಸಿಕೊಳ್ಳಲು ಸಮ್ಮತಿ ಸೂಚಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದಿಂದ ಸುಮಾರು 18 ಸಂಸದರು ಆಯ್ಕೆಗೊಂಡಿದ್ದರು ಮೋದಿ ಸಂಪುಟದಲ್ಲಿ ಕೇವಲ ಒಂದು ಸಚಿವ ಸ್ಥಾನ ನೀಡಲಾಗಿದ್ದು, ಅದು ಮಹತ್ವದ ಖಾತೆಯಲ್ಲ ಎಂದು ಆರೋಪಿಸಿ ನಿನ್ನೆ ಅಧಿಕಾರ ವಹಿಸಿಕೊಳ್ಳಲು ಅನಂತ ಗೀತೆ ನಿರಾಕಸಿದ್ದರು. ಆದರೆ ಇದೀಗ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದ ಬಳಿಕ ಅಧಿಕಾರ ಸ್ವೀಕರಿಸಲು ಅನಂತ ಗೀತೆ ಒಪ್ಪಿಗೆ ಸೂಚಿಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮಹಾರಾಷ್ಟ್ರದ ರಾಯಗಡ ಲೋಕಸಭಾ ಕ್ಷೇತ್ರದಿಂದ ಶಿವಸೇನೆ ಪಕ್ಷದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಅನಂತ ಗಂಗಾರಾಮ್ ಗೀತೆ ಅವರಿಗೆ ಮೋದಿ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆಯನ್ನು ನೀಡಲಾಗಿತ್ತು.
ಇದೇ ವೇಳೆ, ತಮ್ಮ ಪಕ್ಷದ ಅಭ್ಯರ್ಥಿಗೆ ಮೋದಿ ಸಂಪುಟದಲ್ಲಿ ಮಹತ್ವದ ಖಾತೆ ಸಿಗದೆ ಇರೋದಕ್ಕೆ ಶಿವಸೇನೆ ಸಹ ಅತೃಪ್ತಿ ವ್ಯಕ್ತಪಡಿಸಿತ್ತು. ಅಲ್ಲದೆ ಅನಂತ್ ಗೀತೆ ಅವರಿಗೆ ಮಹತ್ವದ ಖಾತೆ ನೀಡುವಂತೆ ಒತ್ತಾಯಿಸಿತ್ತು.