ರಮ್ಯಾ ಸೋಲಿಗೆ ರಮ್ಯಾನೇ ಕಾರಣ: ಮಂಡ್ಯ ಕಾಂಗ್ರೆಸ್ ಮುಖಂಡರು
ರಮ್ಯಾ ಸೋಲಿಗೆ ರಮ್ಯಾನೇ ಕಾರಣ...
ಬೆಂಗಳೂರು: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಸೋಲಿಗೆ ಮಂಡ್ಯದಲ್ಲಿನ ಬಣ ರಾಜಕೀಯ ಕಾರಣವಲ್ಲ. ಸೋಲಿಗೆ ರಮ್ಯಾ ಅವರೇ ನೇರ ಕಾರಣ ಎಂದು ಮಂಡ್ಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಎಲ್.ಆರ್ ಶಿವರಾಮೇಗೌಡ ಅವರು ಬುಧವಾರ ಹೇಳಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಸೋಲಿನ ಕುರಿತು ಇಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ನಾಯಕರು, ವಸತಿ ಸಚಿವ ಅಂಬರೀಷ್ ಅವರ ಗಮನಕ್ಕೆ ತಂದು ತಾವು ಈ ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ ರಮ್ಯಾ ಸೋಲಿಗೆ ತಾವು ಕಾರಣರಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ನಾವೇಲ್ಲ ಒಗ್ಗೂಡಿ ಕೆಲಸ ಮಾಡಿದ್ದೇವೆ. ಹೀಗಾಗಿಯೇ ರಮ್ಯಾ ಅವರು ಅತಿ ಕಡಿಮೆ ಅಂತರದಿಂದ ಸೋತಿದ್ದಾರೆ. ಇಲ್ಲದಿದ್ದರೆ ಅವರು ಎರಡು ಲಕ್ಷ ಮತಗಳ ಅಂತರಿಂದ ಸೋಲುತ್ತಿದ್ದರು ಎಂದು ಹೇಳಿದರು.
ಜಿಲ್ಲಾ ಯುವ ಮುಖಂಡರನ್ನು ರಮ್ಯಾ ಕಡೆಗಣಿಸಿ, ಒಬ್ಬರೇ ಪ್ರಚಾರ ಮಾಡಿದ್ದಾರೆ. ಇದು ಅವರ ಸೋಲಿಗೆ ಪ್ರಮುಖ ಕಾರಣ. ಆದರೆ ಸೋಲಿಗೆ ನಾವೇ ಕಾರಣ ಎಂದು ರಮ್ಯಾ ನಮ್ಮ ವಿರುದ್ಧವೇ ಹೈಕಮಾಂಡ್ಗೆ ದೂರು ನೀಡಿದ್ದಾರೆ. ನಾವು ಸಹ ಹೈಕಮಾಂಡ್ಗೆ ದೂರು ನೀಡುತ್ತೇವೆ. ರಮ್ಯಾ ಮತ್ತು ನಮ್ಮ ವಿರುದ್ಧ ತನಿಖೆ ನಡೆಸಲಿ ಎಂದು ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಪಕ್ಷಕ್ಕೆ ಬಹುಮತ ಬಂದಿತ್ತು. ಆದರೆ ಈ ಬಾರಿ ಅಲ್ಲಿನ ಮತದಾರರು ರಮ್ಯಾ ವಿರುದ್ಧವೇ ದೂರು ನೀಡಿದ್ದಾರೆ. ಅಲ್ಲದೆ ಅವರಿಗೆ ಮತ ನೀಡುವುದಿಲ್ಲ ಎಂದು ಹೇಳಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಲ್.ಆರ್ ಶಿವರಾಮೇಗೌಡ, ಎಲ್.ಡಿ.ರವಿ, ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು, ಮಂಡ್ಯ ನಗರಸಭಾ ಅಧ್ಯಕ್ಷ ಸಿದ್ಧರಾಜು, ಸುರೇಶ್ ಹಾಗೂ ಅಂಬರೀಷ್ ಆಪ್ತ ಅಮರಾವತಿ ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಮೇ 19ರಂದು ತಮ್ಮ ಸೋಲಿನ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವರದಿ ನೀಡಿದ್ದ ರಮ್ಯಾ, ವಸತಿ ಸಚಿವ ಅಂಬರೀಷ್ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪ್ರತಿಷ್ಟೆಯೇ ತಮ್ಮ ಸೋಲಿಗೆ ಕಾರಣ ಎಂದು ದೂರಿದ್ದರು. ಅಲ್ಲದೆ ತಮ್ಮ ದೂರಿನಲ್ಲಿ ಮಂಡ್ಯ ಕಾಂಗ್ರೆಸ್ ಘಟಕದ ವಿವಿಧ ನಾಯಕರ ಹೆಸರನ್ನು ಉಲ್ಲೇಖಿಸಿದ್ದರು.