ವಿದೇಶಾಂಗ ಸಚಿವೆಯಾಗಿ ಸುಷ್ಮಾ ಅಧಿಕಾರ ಸ್ವೀಕಾರ
ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ವಿದೇಶಾಂಗ...
ನವದೆಹಲಿ: ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ನವದೆಹಲಿಯಲ್ಲಿಂದು ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯಕ್ಕೆ ಒತ್ತು ನೀಡಲಾಗುವುದು ಎಂದರು.
ಪಾಕಿಸ್ತಾನ ಮತ್ತು ಭಾರತದ ನಡುವಿನ ಗಡಿ ವಿವಾದ ಹಲವು ವರ್ಷಗಳದ್ದು, ಇದಕ್ಕೆ ತಿಲಾಂಜಲಿ ಹಾಕಬೇಕು. ಉಭಯ ರಾಷ್ಟ್ರಗಳ ನಡುವೆ ಸ್ನೇಹ ಬಾಂಧವ್ಯ ವೃದ್ಧಿಸಬೇಕಿದೆ. ಇದಕ್ಕಾಗಿ ದಾಳಿಗಳನ್ನು ಬಿಟ್ಟು ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿದೆ ಎಂದರು.
ಉಭಯ ರಾಷ್ಟ್ರಗಳ ನಡುವಿನ ಸ್ನೇಹ ವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದ್ದು, ಉಗ್ರಗಾಮಿ ಕೃತ್ಯಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಪಾಕ್ ಅಧ್ಯಕ್ಷ ನವಾಜ್ ಷರೀಫ್ ಅವರಿಗೆ ಸೂಚಿಸಿದ್ದಾರೆ ಎಂದು ಸುಷ್ಮಾ ಹೇಳಿದರು.
ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಬಾಂಧವ್ಯ ಉತ್ತಮಗೊಳ್ಳಬೇಕಿದ್ದರೆ ಬಾಂಬ್ ಸ್ಫೋಟ, ದಾಳಿಗಳನ್ನು ಬಿಟ್ಟು ಮಾತುಕತೆಯಾಗಲಿ ಸ್ಫೋಟದ ತೀವ್ರತೆಗೆ ಮಾತುಕತೆಯ ಧ್ವನಿ ಶಮನವಾಗುತ್ತೆ ಎಂದು ಮೋದಿ ಅವರು ಹೇಳಿದ್ದು, ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ ವಿಚಾರವಾಗಿ ನಿನ್ನೆಯೆ ಮುನ್ನುಡಿ ದೊರೆತಿದೆ ಎಂದರು.