ಈಗಿನ ಸುದ್ದಿ

ವಿವಾದ ಸೃಷ್ಟಿಸಿದ ಸ್ಮೃತಿ ಇರಾನಿ ವಿದ್ಯಾರ್ಹತೆ

Lingaraj Badiger

ನವದೆಹಲಿ: ಕಾಂಗ್ರೆಸ್ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆ ಪ್ರಶ್ನಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಸ್ಮೃತಿ ಇರಾನಿ ಅವರ ವಿದ್ಯಾರ್ಹತೆ ಬಗ್ಗೆ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿದೆ.

ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದ ಸೋನಿಯಾ ಗಾಂಧಿ ಅವರ ವಿದ್ಯಾರ್ಹತೆ ಏನು ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಹೇಳಿಕೆಗಳನ್ನು ನೀಡದಂತೆ ಸೋನಿಯಾ ಗಾಂಧಿ ಅವರು ತಮ್ಮ ಸಂಸದರಿಗೆ ಸೂಚಿಸಬೇಕು ಎಂದು ಹೇಳಿದ್ದಾರೆ.

ನಿನ್ನೆ ಅಜಯ್ ಮಾಕೇನ್ ಅವರು, ಮೋದಿ ಸಂಪುಟ ಹೇಗಿದೆ ಗೊತ್ತಾ? ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಒಂದು ಪದವಿ ಸಹ ಪಡೆದಿಲ್ಲ ಎಂದು ಟ್ವಿಟ್ ಮಾಡಿದ್ದರು. ಇದು ಇದೀಗ ಸಾಮಾಜಿಕ ಜಾಲ ತಾಣದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಚಿವ ಸ್ಥಾನಕ್ಕೂ ವಿದ್ಯಾರ್ಹತೆಗೂ ತಳುಕು ಹಾಕುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.

ಇನ್ನು ಕೆಲವರು ಮಹಿಳೆ ಎಂಬ ಕಾರಣಕ್ಕೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿಲಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಆರ್ಥಿಕ ತಜ್ಞರೇನಲ್ಲ. ಆದರೂ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ಇನ್ನೂ ಚಹಾ ಮಾರಿ ಬೆಳೆದ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಯಾವುದೇ ವಿಶ್ವವಿದ್ಯಾಲಯದಿಂದ ಉನ್ನತ ಪದವಿ ಪಡೆದವರಲ್ಲ. ಹೀಗಿರುವಾಗ ಸ್ಮೃತಿ ಇರಾನಿ ವಿದ್ಯಾರ್ಹತೆ ಪ್ರಶ್ನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

SCROLL FOR NEXT