ಜೂನ್ 4ರಿಂದ 12ರವರೆಗೆ ಸಂಸತ್ ಅಧಿವೇಶನ
16ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 4ರಂದು ಆರಂಭವಾಗಿ, ಜೂನ್ 12ಕ್ಕೆ ಮುಕ್ತಾಯಗೊಳ್ಳಲಿದೆ. ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ...
ನವದೆಹಲಿ: 16ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 4ರಂದು ಆರಂಭವಾಗಿ, ಜೂನ್ 12ಕ್ಕೆ ಮುಕ್ತಾಯಗೊಳ್ಳಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಜೂನ್ 4ರಿಂದ ಏಳು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಈ ವೇಳೆ ಸಂಸತ್‌ಗೆ ಆಯ್ಕೆಯಾದ ನೂತನ ಸದಸ್ಯರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲದೆ ಚುನಾವಣೆ ಮೂಲಕ ನೂತನ ಸ್ಪೀಕರ್‌ರನ್ನು ಆಯ್ಕೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಜೂನ್ 6ರಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಮತ್ತು ಜೂನ್ 9ರಂದು ಜಂಟಿ ಅಧಿವೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಷಣ ಮಾಡಲಿದ್ದಾರೆ. ನಂತರ ರಾಷ್ಟ್ರಪತಿಗಳ ಭಾಷಣದ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೊದಲ ಅಧಿವೇಶನಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮಾಜಿ ಕೇಂದ್ರ ಸಚಿವೆ ಸುಮಿತ್ರಾ ಮಹಾಜನ್ ಹಾಗೂ ಈ ಹಿಂದಿನ ಉಪ ಸಭಾಪತಿ ಕೊರಿಯಾ ಮುಂಡಾ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್ ನಾಥ್ ಅವರು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಮಧ್ಯಪ್ರದೇಶದ ಚಿಂದ್ವಾರಾ ಕ್ಷೇತ್ರದಿಂದ 9ನೇ ಬಾರಿ ಸಂಸತ್ ಗೆ ಆಯ್ಕೆಯಾಗಿರುವ ಕಮಲನಾಥ್ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ. ಹೊಸ ಲೋಕಸಭೆಗೆ ಚಾಲನೆ ನೀಡುವ ಔಪಚಾರಿಕ ಪ್ರಕ್ರಿಯೆಗಳನ್ನು ಹಂಗಾಮಿ ಸ್ಪೀಕರ್ ನಡೆಸಬೇಕಾಗುತ್ತದೆ. ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಹೊಣೆಯೂ ಅವರದ್ದೇ. ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದು ನೂತನ ಸ್ಪೀಕರ್ ಆಯ್ಕೆಯಾಗುವವರೆಗೂ ಅವರು ಸ್ಪೀಕರ್ ಹೊಣೆ ನಿಭಾಯಿಸುವರು. ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಕಮಲನಾಥ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಸಂಪುಟ ಸಭೆಯಲ್ಲಿ 10 ಅಂಶಗಳ ಅಜೆಂಡಾ ಜಾರಿಗೆ ಮೋದಿ ಸೂಚನೆ
10 ಅಂಶಗಳ ಅಜೆಂಡಾ
1. ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಸೂಚನೆ
2. ಅಧಿಕಾರಿಗಳ ಹೊಸ ವಿಚಾರಗಳನ್ನು ಸ್ವಾಗತಿಸಿ, ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿ
3. ಕುಡಿಯುವ ನೀರು, ಶಿಕ್ಷಣ, ವಿದ್ಯುತ್, ರಸ್ತೆ, ಆರೋಗ್ಯ ಮತ್ತು ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಿ
4. ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಇರಲಿ
5. ಇ-ಹರಾಜು ನೀತಿ ಜಾರಿಗೆ ತರಲು ಸೂಚನೆ
6. ಉನ್ನತ ಮಟ್ಟದ ಸಚಿವರ ತಂಡದ ಸಭೆ ಬೇಡ, ಇಲಾಖೆಗಳ ನಡುವೆ ಸಮನ್ವಯತೆ ಇರಲಿ
7. ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳಿಗೆ ಮೊದಲ ಆದ್ಯತೆ
8. ಕಾಲ ಮಿತಿಯಲ್ಲಿ ಸರ್ಕಾರದ ನೀತಿಗಳನ್ನು ಜಾರಿಗೆ ತರಬೇಕು
9. ಆಡಳಿತ ಯಂತ್ರದಲ್ಲಿ ಜನಕೇಂದ್ರಿತ ವ್ಯವಸ್ಥೆ ಇರಲಿ
10. ಸ್ಥಿರತೆ ಮತ್ತು ಸದೃಢತೆ ಸರ್ಕಾರದ ನೀತಿಗಳಲ್ಲಿರಲಿ