ಪಾಕ್ ಪ್ರಜೆಗೆ ಜಯದೇವ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿ
ಪಾಕ್ ಪ್ರಜೆ ಶೌಕತ್ ಅಲಿ ಎಂಬವರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ...
ಬೆಂಗಳೂರು: ಪಾಕ್ ಪ್ರಜೆ ಶೌಕತ್ ಅಲಿ ಎಂಬವರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ( ಬೈಪಾಸ್ )ಮಾಡಲಾಗಿದೆ. ಕರಾಚಿಯ ಬೆಂಗಳೂರು ಟೌನ್ ನಿವಾಸಿಯಾಗಿರುವ 45ರ ಹರೆಯದ ಶೌಕತ್ ಅಲಿ 2013 ಜುಲೈ ತಿಂಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕರಾಚಿಯಲ್ಲಿನ ಜಿನ್ನಾ ಎನ್‌ಐಸಿಜಿ ಆಸ್ಪತ್ರೆಯಲ್ಲಿ ಕರೋನರಿ ಅಂಜಿಯೋಗ್ರಾಂ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದು ಅವರಿಗೆ ತುರ್ತಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿರುವುದಾಗಿ ಹೇಳಲಾಗಿತ್ತು. ಅದರ ವೆಚ್ಚ ಸುಮಾರು ರು. 10 ಲಕ್ಷಗಳಾಗುವುದೆಂದು ತಿಳಿಸಲಾಗಿತ್ತು. ಆದರೆ ಇಲೆಕ್ಟ್ರಿಷಿಯನ್ ಹುದ್ದೆ ಮಾಡುವ ಅಲಿ ಅವರು ಅಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿರಲಿಲ್ಲ.
ಶೌಕತ್ ಅಲಿಯವರ ಸಂಬಂಧಿಕರು ಕರ್ನಾಟದಲ್ಲಿ ವಾಸವಿರುವುದರಿಂದ ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಹೀಗೆ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತೆರೆದ ಹೃದಯ ಚಿಕಿತ್ಸೆಯನ್ನು ಡಾ.ಸೀತಾರಾಮ್ ಭಟ್‌ರ ನೇತೃತ್ವದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಇದೀಗ ಅಲಿಯವರು ಗುಣಮುಖರಾಗಿದ್ದು ಬೆಂಗಳೂರಿನಿಂದ ಪಾಕಿಸ್ತಾನದ ಬೆಂಗಳೂರು ಟೌನ್‌ಗೆ ಪ್ರಯಾಣಿಸಲು ತಯಾರಾಗಿದ್ದಾರೆ.
ಈಗಾಗಲೇ ಪಾಕಿಸ್ತಾನ ಮತ್ತು ಇನ್ನಿತರ ನೆರೆಹೊರೆಯ ದೇಶಗಳಿಂದ ಬರುವ ಹೃದ್ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಾ ಬಂದಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ತನ್ನದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ಈಗಾಗಲೇ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಹೊಂದಲು ಬಹಳಷ್ಟು ರೋಗಿಗಳು ಚಿಕಿತ್ಸೆಗೆ ಕಾಯುತ್ತಿದ್ದರೂ ಸೌಹಾರ್ದತೆಯ ಸಂಕೇತವಾಗಿ ಶೌಕತ್ ಅಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆಯನ್ನು ಕೈಗೊಂಡಿದ್ದು, ಇದಕ್ಕಾಗಿ ಅಲಿ ಭರಿಸಿದ ಮೊತ್ತ ಕೇವಲ ರು. 82,00 ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.