ಪಾಕ್ನ 30 ಮೀನುಗಾರರು, 5 ನಾಗರಿಕರು ಬಂಧಮುಕ್ತ
ಜೈಲಿನಲ್ಲಿರುವ 30 ಪಾಕಿಸ್ತಾನಿ ಮೀನುಗಾರರನ್ನು ಮತ್ತು 5 ನಾಗರಿಕರನ್ನು ಗುರುವಾರ ಭಾರತ ಬಂಧ ಮುಕ್ತಗೊಳಿಸಿದೆ...
ನವದೆಹಲಿ: ಜೈಲಿನಲ್ಲಿರುವ 30 ಪಾಕಿಸ್ತಾನಿ ಮೀನುಗಾರರನ್ನು ಮತ್ತು 5 ನಾಗರಿಕರನ್ನು ಗುರುವಾರ ಭಾರತ ಬಂಧ ಮುಕ್ತಗೊಳಿಸಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಮಾತುಕತೆಯ ನಂತರ ಭಾರತ ಈ ತೀರ್ಮಾನವನ್ನು ಕೈಗೊಂಡಿದೆ.
ಈ ಹಿಂದೆ ಪಾಕಿಸ್ತಾನದಿಂದ ಬಂಧಮುಕ್ತಗೊಂಡ 150 ಮಂದಿ ಕೈದಿಗಳು ಬುಧವಾರ ರಾತ್ರಿ ವಡೋದರಾಕ್ಕೆ ಬಂದು ಸೇರಿದ್ದಾರೆ. ಪಾಕ್ ಪ್ರಧಾನಿ ದೆಹಲಿಗೆ ಭೇಟಿ ನೀಡುವ ಮುನ್ನ ಪಾಕಿಸ್ತಾನ 150 ಕೈದಿಗಳನ್ನು ಬಿಡುಗಡೆ ಮಾಡಿತ್ತು.
ಕರಾಚಿಯ ಮಲಿರ್ ಜೈಲಿನಿಂದ 59 ಮೀನುಗಾರರನ್ನು ಹಾಗು ಸಿಂಧ್ ಪ್ರಾಂತ್ಯದ ನಾರಾ ಜೈಲಿನಿಂದ 92 ಮಂದಿ ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.