ಕಡಿಮೆ ದರದ ಏರ್ ಏಷ್ಯಾ ವಿಮಾನಯಾನ ಬುಕ್ಕಿಂಗ್ ಇಂದಿನಿಂದ ಆರಂಭ
ಚೆನ್ನೈ: ಅತಿ ಕಡಿಮೆ ದರದ ಬಹು ನಿರೀಕ್ಷಿತ ಏರ್ ಏಷ್ಯಾ ವಿಮಾನಯಾನ ಇದೇ ಜೂನ್ 12ರಿಂದ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು -ಗೋವಾ ಮಧ್ಯ ಎರಡು ವಿಮಾನಗಳು ಸಂಚರಿಸಲಿದ್ದು, ಇದಕ್ಕಾಗಿ ಶುಕ್ರವಾರ ರಾತ್ರಿ 9.30ರಿಂದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ.
ಬೆಂಗಳೂರಿನಿಂದ ಗೋವಾಗೆ ಸಂಚರಿಸಲು ತೆರಿಗೆ ಸೇರಿದಂತೆ ಪ್ರತಿ ಟಿಕೆಟ್‌ಗೆ 990 ರುಪಾಯಿ ನಿಗದಿ ಮಾಡಲಾಗಿದೆ. ಆದರೆ ಬೆಂಗಳೂರು-ಚೆನ್ನೈ ಮಾರ್ಗದ ಟಿಕೆಟ್ ದರ ಇನ್ನೂ ಬಹಿರಂಗವಾಗಿಲ್ಲ.
ಜೂನ್ 12ರಂದು ಗೋವಾಗೆ ತೆರಳುವ ಮೊದಲ ವಿಮಾನ ಎ320 ಮಧ್ಯಾಹ್ನ 12ಕ್ಕೆ ಬೆಂಗಳೂರು ಬಿಡಲಿದೆ ಎಂದು ಏರ್ ಏಷ್ಯಾ ಇಂಡಿಯಾ ಸಿಇಒ ಮಿತ್ತು ಚಾಂಡಿಲ್ಯಾ ಅವರು ತಿಳಿಸಿದ್ದಾರೆ.
ಕಡಿಮೆ ದರದ ವಿಮಾನ ಪ್ರಯಾಣ ಕಲ್ಪಿಸುವ ಏರ್ ಏಷ್ಯಾ ವಿಮಾನ ಈ ತಿಂಗಳಲ್ಲಿ ಭಾರತದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಗಿಟ್ಟಿಸಿಕೊಂಡಿತ್ತು. ಈ ಯೋಜನೆಯಲ್ಲಿ ಭಾರತದ ಟಾಟಾ ಗ್ರೂಪ್ ಮತ್ತು ಟೆಲೆಸ್ಟ್ರಾ ಟ್ರೇಡ್‌ಪ್ಲೇಸ್ ಏರ್ ಏಷ್ಯಾದ ಸಹಭಾಗಿತ್ವ ಹೊಂದಿದ್ದಾರೆ.