ದೆಹಲಿಯಲ್ಲಿ ಬಿರುಗಾಳಿ ಮಳೆ, ಸಂಚಾರ ಅಸ್ತವ್ಯಸ್ತ
ಶುಕ್ರವಾರ ಸಂಜೆ ದೆಹಲಿಯಲ್ಲಿ ಭಾರೀ ಗಾಳಿ ಮಳೆಯುಂಟಾಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಸಂಜೆಯ ...
ನವದೆಹಲಿ: ಶುಕ್ರವಾರ ಸಂಜೆ ದೆಹಲಿಯಲ್ಲಿ ಭಾರೀ ಗಾಳಿ ಮಳೆಯುಂಟಾಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಸಂಜೆಯ ವೇಳೆ ಭಾರೀ ಗಾಳಿ ಆರ್ಭಟಿಸಿದ್ದು, ಇದರಿಂದಾಗಿ ಮೆಟ್ರೋ ರೈಲು ಸಂಚಾರ, ವಿಮಾನ ಸಂಚಾರ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ.
ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತವುಂಟಾಗಿದ್ದು ಪೂರ್ವ ದೆಹಲಿ, ನೋಯ್ಡಾ ಮತ್ತು ಗಾಜಿಯಾಬಾದ್ ಪ್ರದೇಶಗಳಲ್ಲಿ ಜನರು ಸಂಚಾರ ವ್ಯವಸ್ಥೆಗಳಿಲ್ಲದೆ ಸಂಕಷ್ಟಕ್ಕೀಡಾಗುವಂತಾಯಿತು.
ಗಂಟೆಗೆ 90 ಕಿ.ಮೀ ವೇಗದಲ್ಲಿ ಬಿರುಗಾಳಿ ಎದ್ದಿದ್ದು, ಮೆಟ್ರೋ ಸೇವೆಗಳನ್ನು ಕೂಡಲೇ ಸ್ಥಗಿತಗೊಳಿಸಲಾಯಿತು. ಮುಂದಿನ ಎರಡು ಗಂಟೆಗಳ ಕಾಲ ಇದೇ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಿರುಗಾಳಿಯಿಂದಾಗಿ 12 ವಿಮಾನ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಐಜಿಐ ಅಧಿಕಾರಿಗಳು ಹೇಳಿದ್ದಾರೆ. ಬಿರುಗಾಳಿಯಿಂದ ಮರಗಳು ಧರೆಗುರುಳಿದ್ದು, ಹೆಚ್ಚಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ನಿಂದ ಜನರು ಪರದಾಡುವಂತಾಗಿದೆ.