ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೀವು ಸುರಕ್ಷಿತವಾಗಿಲ್ವಾ? ಇನ್ನೇನು ಬೇಕು?: ಅಖಿಲೇಶ್ ಯಾದವ್

ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಒಂದರ ಹಿಂದೆ ಒಂದು ಎಂಬಂತೆ ಸುದ್ದಿಯಾಗುತ್ತಿವೆ. ಈ ವಾರ ...

Rashmi Kasaragodu
Updated On : 30 May 2014, 7:10 am

ಲಕ್ನೋ: ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಒಂದರ ಹಿಂದೆ ಒಂದು ಎಂಬಂತೆ ಸುದ್ದಿಯಾಗುತ್ತಿವೆ. ಈ ವಾರ ಇಂಥಾ ಮೂರು ಪ್ರಕರಣಗಳು ವರದಿಯಾದವು. ಈ ಬಗ್ಗೆ ಪತ್ರಕರ್ತರು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪ್ರಶ್ನಿಸಿದಾಗ, ಗರಂ ಆದ ಅಖಿಲೇಶ್ ನೀವಿಲ್ಲಿ ಸುರಕ್ಷಿತರಾಗಿದ್ದೀರಿ ತಾನೆ? ನೀವಿಲ್ಲಿ ಸುರಕ್ಷಿತರಾಗಿಲ್ಲವೇ? ಎಂಬ ಹಾರಿಕೆಯ ಉತ್ತರವನ್ನು ನೀಡಿದ್ದಾರೆ.

ಬುಡೌನ್ ಜಿಲ್ಲೆಯಲ್ಲಿ ಇಬ್ಬರು ಹದಿಹರೆಯದ ಹೆಣ್ಮಕ್ಕಳನ್ನು ಪೈಶಾಚಿಕವಾಗಿ ಅತ್ಯಾಚಾರಗೈದು ನೇಣಿಗೇರಿಸಿದ ಪ್ರಕರಣ ಬುಧವಾರ ನಡೆದಿತ್ತು. ತಮ್ಮ ಮಕ್ಕಳನ್ನು ಕಾಮಾಂಧರಿಂದ ರಕ್ಷಿಸಿ ಎಂದು ಗೋಗರೆದರೂ ಸ್ಥಳೀಯ ಪೊಲೀಸರು ಸಹಾಯಕ್ಕೆ ಬರಲಿಲ್ಲ ಎಂದು ಅತ್ಯಾಚಾರಕ್ಕೊಳಗಾಗಿ ಹತ್ಯೆಗೈಯ್ಯಲ್ಪಟ್ಟ ಬಾಲಕಿಯರ ಕುಟುಂಬದವರು ದೂರಿದ್ದಾರೆ.

ಈ ಪ್ರಕರಣದ ಬಿಸಿ ಆರುವ ಮುನ್ನವೇ ಗುರುವಾರ ಅಜಮ್‌ಗಢ್‌ನ ಸರೈಮೀರ್ ಪ್ರದೇಶದಲ್ಲಿ ಹದಿಹರೆಯದ ಬಾಲಕಿಯೊಬ್ಬಳನ್ನು 4 ಮಂದಿ ಸಾಮೂಹಿಕ ಅತ್ಯಾಚಾರಗೈದ ಪ್ರಕರಣ ಸುದ್ದಿಯಾಯಿತು.

ಮೇ 26ರಂದು ಅತ್ಯಾಚಾರಕ್ಕೊಳಗಾದ ಯುವತಿಯ ಅಮ್ಮನಿಗೆ ಅತ್ಯಾಚಾರ ಪ್ರಕರಣದ ಆರೋಪಿಯ ಅಪ್ಪ ಥಳಿಸಿರುವ ಬಗ್ಗೆಯೂ ವರದಿಯಾಯಿತು. ಈ ಘಟನೆ ಇತಾವ್ ಜಿಲ್ಲೆಯಲ್ಲಿ ನಡೆದಿದ್ದು, ಇದು ಯಾದವ್ ಕುಟುಂಬದವರ ತವರೂರಾಗಿದೆ. ಮಹಿಳೆಗೆ ಹಲ್ಲೆ ಮಾಡಿದ ಆರೋಪದಲ್ಲಿ ಅತ್ಯಾಚಾರದ ಆರೋಪಿಯ ಅಪ್ಪನನ್ನು ಇದೀಗ ಬಂಧಿಸಲಾಗಿದೆ.

ಇತ್ತೀಚೆಗೆ ಅತ್ಯಾಚಾರತಡೆ ನಿಯಮ ಉತ್ತರಪ್ರದೇಶದಲ್ಲಿ ದುರುಪಯೋಗವಾಗುತ್ತಿದೆ ಎಂದು ಹೇಳಿದಾಗ, ಮುಲಾಯಂ ಸಿಂಗ್ ಹುಡುಗರು ತಪ್ಪುಗಳನ್ನು ಮಾಡುತ್ತಾರೆ ಎಂಬ ಉತ್ತರ ನೀಡಿದ್ದರು.

ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಅಖಿಲೇಶ್ ಯಾದವ್ ಸರ್ಕಾರ ರಾಜ್ಯದಲ್ಲಿ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಗಲಭೆ, ದೊಂಬಿಗಳು ನಡೆಯುತ್ತಲೇ ಇವೆ. ಇಲ್ಲಿ ಜಂಗಲ್ ರಾಜ್ ನಡೆಯುತ್ತಿದೆ ಎಂದು ವಿಪಕ್ಷ ನಾಯಕಿ ಮಾಯಾವತಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement