ಪ್ರಿಯಾಂಕಾ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಅಗತ್ಯ: ಶತ್ರಘ್ನ ಸಿನ್ಹಾ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ...
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಕುಟುಂಬಕ್ಕೆ ವಿಶೇಷ ರಕ್ಷಣೆ (ಎಸ್‌ಪಿಜಿ) ನೀಡಬೇಕು ಎಂದು ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ನೀಡಿರುವ ಹೇಳಿಕೆ ಇದೀಗ ಬಿಜೆಪಿ ವಲಯದಲ್ಲಿ ಕೋಲಾಹಲ ಕಾರಣವಾಗಿದೆ.
ಗಾಂಧಿ ಕುಟುಂಬ ಈ ಹಿಂದೆ ಅನೇಕ ತ್ಯಾಗಗಳನ್ನು ಮಾಡಿದೆ. ದಿವಂಗತ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗು ರಾಜೀವ್ ಗಾಂಧಿ ಹಂತಕರ ಗುಂಡಿಗೆ ಬಲಿಯಾಗಿರುವುದನ್ನು ಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೆ ಪ್ರಿಯಾಂಕಾ ಗಾಂಧಿ ತಮಗೆ ನೀಡಿರುವ ಎಸ್‌ಪಿಜಿ ಭದ್ರತೆ ಮತ್ತು ವಿಮಾನ ನಿಲ್ದಾಣದ ತಪಾಸಣಾ ವಿನಾಯಿತಿಯನ್ನು ಹಿಂಪಡೆಯುವಂತೆ ಎಸ್‌ಪಿಜಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು.
ವಿಶೇಷ ಸವಲತ್ತು ಗುಂಪಿಗೆ ಸೇರಿದವರ ಪಟ್ಟಿಯಿಂದ ವಾದ್ರಾ ಹೆಸರು ತೆಗೆಯಲು ಕೇಂದ್ರ ಸರ್ಕಾರ ಯೋಚಿಸುತ್ತಿತ್ತು. ಅದರ ಸುಳಿವು ಪಡೆದ ಪ್ರಿಯಾಂಕಾ, ತಮಗೆ ಮತ್ತು ಪತಿಗೆ ನೀಡಿದ ವಿಶೇಷ ಸವಲತ್ತುಗಳನ್ನು ಹಿಂಪಡೆಯುವಂತೆ ಎಸ್‌ಪಿಜಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
'ಗಣ್ಯ ಪ್ರಯಾಣಿಕರ ಪಟ್ಟಿಯಿಂದ ಪತಿ ಹೆಸರು ಕೈಬಿಡಲು ಸರ್ಕಾರ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ. ನಾನು ಮತ್ತು ಮಕ್ಕಳು ಭದ್ರತಾ ತಪಾಸಣೆ ಇಲ್ಲದೆ ತೆರಳುವುದು, ಪತಿ ಮಾತ್ರ ತಪಾಸಣೆಗೆ ಒಳಗಾಗುವುದು ಮುಜುಗರದ ಸಂಗತಿ. ಆದ್ದರಿಂದ ಇಬ್ಬರಿಂದಲೂ ವಿಶೇಷ ಸವಲತ್ತು ಹಿಂಪಡೆಯಬೇಕು' ಎಂದು ಮನವಿ ಮಾಡಿದ್ದಾರೆ.