ಜೀವನಶೈಲಿ

ನಿತ್ಯ ನಿಯಮಿತ ವ್ಯಾಯಾಮದಿಂದ ಹಿರಿಯರಲ್ಲೂ ಜ್ಞಾಪಕ ಶಕ್ತಿ ವೃದ್ಧಿ!

Srinivasamurthy VN

ನ್ಯೂಯಾರ್ಕ್: ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಕ್ಕಳು ಮತ್ತು ಯುವಕರು ಮಾತ್ರವಲ್ಲದೇ ಹಿರಿಯರಲ್ಲೂ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ನಿತ್ಯ ವ್ಯಾಯಾಮದಿಂದ ದೈಹಿಕ ಸಾಮರ್ಥ್ಯವೃದ್ಧಿಯಾಗುತ್ತದೆ ಎಂದು ತಿಳಿದಿದೆ. ಆದರೆ ಇದೇ ವ್ಯಾಯಾಮದಿಂದ ಮೆದುಳಿನ ಕಾರ್ಯಕ್ಷಮತೆ ಕೂಡ ವೃದ್ಧಿಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಪ್ರತಿನಿತ್ಯ  ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ವಯೋ ಸಹಜ ಜ್ಞಾಪಕ ಶಕ್ತಿ ಕುಂದುವ ಅಪಾಯ ಕಡಿಮೆಯಾಗುತ್ತದೆಯಂತೆ. ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದ ತಜ್ಞರು ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವ  ಹಿರಿಯರಲ್ಲಿ ವ್ಯಾಯಾಮ ಮಾಡದವರಿಗಿಂತ ಹೆಚ್ಚು ಜ್ಞಾಪಕ ಸಾಮರ್ಥ್ಯವಿರುತ್ತದೆ ಎಂಬುದನ್ನು ಪತ್ತೆ ಮಾಡಿದ್ದಾರೆ.

ಸಾಮಾನ್ಯವಾಗಿ ವ್ಯಾಯಾಮಗಳು ದೈಹಿಕ ಸಾಮರ್ಥ್ಯಕ್ಕಾಗಿ ಮಾತ್ರವೇ ಸಹಕರಿಸುತ್ತವೆ ಎಂಬ ತಪ್ಪು ಕಲ್ಪನೆಗಳಿದ್ದು, ವ್ಯಾಯಾಮದಿಂದ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ಮತ್ತು ಮೆದುಳಿನ ಕಾರ್ಯಕ್ಷಮತೆಯ  ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆಯಂತೆ. ವ್ಯಾಯಾಮದ ವೇಳೆ ಏಕಾಗ್ರತೆ ಮೂಡಿ ಮೆದುಳು ಚುರುಕಾಗುತ್ತದೆ ಮತ್ತು ಅದರ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಶೋಧನೆಗಾಗಿ ತಜ್ಞರ ತಂಡ ಯುವಕರು (18 ರಿಂದ 31 ವರ್ಷದೊಳಗಿನವರು) ಮತ್ತು ಹಿರಿಯ ನಾಗರಿಕರನ್ನು (55ರಿಂದ 74 ವರ್ಷದೊಳಗಿನವರು) ಬಳಕೆ ಮಾಡಿಕೊಳ್ಳಲಾಗಿದ್ದು, ಇವರು ಪ್ರತಿನಿತ್ಯ ಟ್ರೆಡ್ ಮಿಲ್ ಮೇಲೆ  ವಾಕಿಂಗ್ ಮತ್ತು ಜಾಗಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಇವರಲ್ಲಿ ವ್ಯಾಯಾಮಕ್ಕೂ ಮೊದಲಿನ ನೆನಪಿನ ಸಾಮರ್ಥ್ಯಕ್ಕೂ ವ್ಯಾಯಾಮ ಆರಂಭಿಸಿದ ಬಳಿಕದ ನೆನಪಿನ ಸಾಮರ್ಥ್ಯಕ್ಕೂ ವ್ಯತ್ಯಾಸವಿದ್ದು, ಮೊದಲಿಗಿಂತ ವ್ಯಾಯಾಮ  ಆರಂಭಿಸಿದ ಬಳಿಕ ಇವರಲ್ಲಿ ನೆನಪಿನ ಸಾಮರ್ಥ್ಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ತಮಗೆ ನೀಡಲಾಗಿದ್ದ ನೆನಪಿನ ಸಾಮರ್ಥ್ಯ ಪರೀಕ್ಷೆಯಲ್ಲಿ ವ್ಯಾಯಾಮ ಆರಂಭಿಸಿದವರು ಹೆಚ್ಚು  ಅಂಕಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಅಂತೆಯೇ ಇಳಿ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಾಡುವ ನೆನಪಿನ ಕೊರತೆ ಕೂಡ ವ್ಯಾಯಾಮ ಮಾಡುವ ಹಿರಿಯ ನಾಗರಿಕರಲ್ಲಿ ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಒಟ್ಟಾರೆ ವ್ಯಾಯಾಮ ಕೇವಲ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿಯೂ ಮಾನವವನಿಗೆ ನೆರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

SCROLL FOR NEXT