ಜೀವನಶೈಲಿ

ವಿಶ್ವದಲ್ಲಿ, ಭಾರತೀಯರಿಗೆ ನಿದ್ದೆ ಕಡಿಮೆ: ಅಧ್ಯಯನ

Sumana Upadhyaya
ನವದೆಹಲಿ: ವಿಶ್ವದಲ್ಲಿ ರಾತ್ರಿ ವೇಳೆ ಅತಿ ಕಡಿಮೆ ನಿದ್ದೆ ಮಾಡುವವರು ಭಾರತೀಯರಾಗಿದ್ದು, ಸರಾಸರಿ 6 ಗಂಟೆ 55 ನಿಮಿಷ ನಿದ್ದೆ ಮಾಡುತ್ತಾರೆ ಎಂದು ಫಿಟ್ನೆಸ್ ಸೊಲ್ಯೂಷನ್ ಸಂಸ್ಥೆ ಫಿಟ್ ಬಿಟ್ ತಿಳಿಸಿದೆ.
ಸಮೀಕ್ಷೆಗೊಳಪಟ್ಟ 18 ದೇಶಗಳಲ್ಲಿ ಭಾರತ ಜಪಾನ್ ಗಿಂತ ಮುಂದೆ ಇದ್ದು, ಜಪಾನೀಯರು ಸರಾಸರಿ 6 ಗಂಟೆ 35 ನಿಮಿಷ ನಿದ್ದೆ ಮಾಡುತ್ತಾರೆ ಎಂದು ಹೇಳಿದೆ.ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯನ್ನರು ವಿಶ್ವದಲ್ಲಿ ಅತಿ ಹೆಚ್ಚು ನಿದ್ದೆ ಮಾಡುತ್ತಿದ್ದು ಪ್ರತಿ ರಾತ್ರಿ ಕ್ರಮವಾಗಿ ಸರಾಸರಿ 7 ಗಂಟೆ 25 ನಿಮಿಷ, 7 ಗಂಟೆ 16 ನಿಮಿಷ ಮತ್ತು 7 ಗಂಟೆ 15 ನಿಮಿಷ ನಿದ್ದೆ ಮಾಡುತ್ತಾರೆ ಎಂದಿದೆ.
ಫಿಟ್ ಬಿಟ್ ಸಂಸ್ಥೆ 2016ರ ಜನವರಿಯಿಂದ ಡಿಸೆಂಬರ್ ವರೆಗೆ ಅಧ್ಯಯನ  ನಡೆಸಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಏಷ್ಯಾ ಖಂಡದವರು ಅಮೆರಿಕಾ ಮತ್ತು ಯುರೋಪ್ ಖಂಡದವರಿಗಿಂತ ಸರಾಸರಿ ನಿದ್ದೆ ಮಾಡುವ ಅವಧಿ ಕಡಿಮೆಯಾಗಿದೆ ಎಂದು ಫಿಟ್ ಬಿಟ್ ಹೇಳಿದೆ.
ಮನುಷ್ಯನ ಜೀವನದಲ್ಲಿ ಆರೋಗ್ಯ ಕಾಪಾಡಲು ಉತ್ತಮ ಡಯಟ್ ಮತ್ತು ವ್ಯಾಯಾಮದ ಜೊತೆಗೆ ನಿದ್ದೆ ಕೂಡ ಅತಿ ಅಗತ್ಯ. ಹೃದಯ ಖಾಯಿಲೆ, ಸಕ್ಕರೆ ರೋಗ, ಅತಿಸ್ಥೂಲ, ಮಾನಸಿಕ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ನಿದ್ದೆ ಮುಖ್ಯವಾಗುತ್ತದೆ.
ಆರೋಗ್ಯಕರ ನಿರೋಧಕ ವ್ಯವಸ್ಥೆ, ಅರಿವಿನ ಕಾರ್ಯಗಳ ರಕ್ಷಣೆ, ಆರೋಗ್ಯಕರವಾಗಿ ದೇಹದ ತೂಕ ಕಾಪಾಡಿಕೊಳ್ಳುವಿಕೆಯಲ್ಲಿ ನಿದ್ದೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಸ್ಟಾನ್ ಫೋರ್ಡ್ ವಿಶ್ವ ವಿದ್ಯಾಲಯ ಮತ್ತು ಫಿಟ್ ಬಿಟ್ ಸಂಸ್ಥೆಯ ಸಲಹಾ ವಿಭಾಗದ ನಿದ್ದೆ ತಜ್ಞ ಡಾ.ಅಲ್ಲಿಸನ್ ಸೀಬರ್ನ್ ಹೇಳುತ್ತಾರೆ.
SCROLL FOR NEXT