ಜೀವನಶೈಲಿ

ಹದಿಹರೆಯದ ಮಕ್ಕಳ ಟ್ಯಾಟೂ ಕ್ರೇಜ್ ಬಗ್ಗೆ ಪೋಷಕರಿಗೆ ಆತಂಕ

Lingaraj Badiger
ವಾಷಿಂಗ್ಟನ್: ಇತ್ತೀಚಿಗೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಫ್ಯಾಶನ್ ಆಗುತ್ತಿದ್ದು, ಯುವಜನತೆಯಲ್ಲಿ ಟ್ಯಾಟೂ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಆದರೆ ಈ ಕ್ರೇಜ್ ಮತ್ತು ಫ್ಯಾಶನ್ ಪೋಷಕರನ್ನು ಚಿಂತೆಗೀಡುಮಾಡಿದೆ.
ಟ್ಯಾಟೂನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾಮಾಜ ಅವರನ್ನು ಸ್ವೀಕರಿಸುವ ರೀತಿ ಹಾಗೂ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದ್ದು, ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಟ್ಯಾಟೂ ಬಗ್ಗೆ ಅಮೆರಿಕದಲ್ಲಿ ನಡೆದ ಸಮೀಕ್ಷೆ ಪ್ರಕಾರ, ಶೇ,78ರಷ್ಟು ಪೋಷಕರು ತಮ್ಮ ಹದಿಹರೆಯದ ಮಕ್ಕಳು ಟ್ಯಾಟೂ ಹಾಕಿಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಇನ್ನು 10ರಲ್ಲಿ ಒಬ್ಬ ಪೋಷಕರು ಮಾತ್ರ ವಿಶೇಷ ಸಂದರ್ಭದಲ್ಲಿ ಅಥವಾ ಟ್ಯಾಟೂ ಕಾಣಿಸಿಕೊಳ್ಳದ ಹಾಗೆ ಹಾಕಿಸಿಕೊಳ್ಳಲು ತಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ.
ಮಿಚಿಗನ್ ವಿಶ್ವವಿದ್ಯಾನಿಲಯದ ಸಿ.ಎಸ್. ಮೊಟ್ ಚಿಲ್ಡ್ರನ್ಸ್ ಹಾಸ್ಪಿಟಲ್ ನಡೆಸಿದ ನ್ಯಾಷನಲ್ ಪೊಲ್ ಆನ್ ಚಿಲ್ಡ್ರನ್ಸ್ ಹೆಲ್ತ್ ಪ್ರಕಾರ, ಹಲವು ಪೋಷಕರು ತಮ್ಮ ಹದಿಹರೆಯದ ಮಕ್ಕಳು ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 
ಸುಮಾರು ಅರ್ಧದಷ್ಟು ಪೋಷಕರು, ಟ್ಯಾಟೂಗೆ ಬಳಸುವ ಸೂಚಿಯಿಂದ ಇನ್ ಫೆಕ್ಷನ್, ಹೆಪಟೈಟಿಸ್ ಅಥವಾ ಎಚ್ಐವಿಗಳಂತಹ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಟ್ಯಾಟೂಗಳು ಸ್ವ-ಅಭಿವ್ಯಕ್ತಿಯ ರೂಪವೆಂದು ಅನೇಕ ಪೋಷಕರು ಒಪ್ಪುತ್ತಾರೆ. ಆದರೆ ಹದಿಹರೆಯದವರು ಸಂಭವನೀಯ ಆರೋಗ್ಯದ ಅಪಾಯಗಳನ್ನು ಪರಿಗಣಿಸುವುದಿಲ್ಲ ಎಂದು ಸಮೀಕ್ಷೆಯ ಸಹ-ನಿರ್ದೇಶಕ ಗ್ಯಾರಿ ಫ್ರೀಡ್ ಅವರು ಹೇಳುತ್ತಾರೆ.
13 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಸಮೀಕ್ಷೆಯ ನಡೆಸಲಾಗಿದ್ದು, ಇದರಲ್ಲಿ ಒಟ್ಟು 1,018 ಪೋಷಕರು ಭಾಗಿಯಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
SCROLL FOR NEXT