ಜೀವನಶೈಲಿ

ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ: ನಿರ್ವಹಣೆ ಹೇಗೆ?

Srinivas Rao BV
ಮಕ್ಕಳೆಂದರೆ ಸುಂದರ ಪ್ರಪಂಚ, ಅವು ಬೆಳೆಯುತ್ತಾ ಹೋದಂತೆ ಪೋಷಕರಿಗೆ ಸವಾಲುಗಳೂ ಹೆಚ್ಚು. ಪೌಷ್ಠಿಕಾಂಶದ ಆಹಾರವನ್ನು ಮಕ್ಕಳು ಸೇವಿಸುವಂತೆ ಮಾಡುವುದಕ್ಕೆ ಪಡಬೇಕಿರುವ ಪಾಡು ಪೋಷಕರಿಗಷ್ಟೇ ಗೊತ್ತು. 
ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕೆಂಬುದೇನೋ ಸರಿ ಆದರೆ ಯಾವುದು ಪೌಷ್ಠಿಕ ಆಹಾರ? ಅದರಿಂದ ಮುಂದಿನ ದಿನಗಳಲ್ಲಿ ಉಂಟಾಗುವ ಪರಿಣಾಮಗಳೇನು? ಸ್ಮಾರ್ಟ್ ಫೋನ್ ರುಚಿ ಹತ್ತಿಸಿ ಊಟ ಮಾಡಿಸುವುದನ್ನು ಅಭ್ಯಾಸ ಮಾಡಿಸಿದರೆ ಅದೊಂದು ವ್ಯಸನವಾಗಿ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಪೋಷಕರು ಮಾಡಬೇಕಿರುವುದು ಏನು ಎಂಬೆಲ್ಲದರ ಬಗ್ಗೆ ಹೆಲ್ತ್ ಕೇರ್ ಸಂಸ್ಥೆ ಅಬಾಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಜ್ಞರು ವಿವರಿಸಿದ್ದಾರೆ. 
ಮಗು ಗರ್ಭದಲ್ಲಿರುವಾಗಿನಿಂದ 5 ವರ್ಷದವರೆಗೆ ಬೆಳವಣಿಗೆ ಮತ್ತು ಅಭಿವೃದ್ಧಿ ಬಾಲ್ಯದ ಮಹತ್ವದ ಅಂಶಗಳು. ಸಮತೋಲಿತ ಆಹಾರ ಪ್ರೋಟೀನ್, ವಿಟಮೀನ್, ಖನಿಜ, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಇವೆಲ್ಲವನ್ನೂ ಹೊಂದಿರುತ್ತದೆ. ಒಮ್ಮೆ ತಿನ್ನುವುದಕ್ಕೆ ಪ್ರಾರಂಭಿಸಿದ ನಂತರ ಮಕ್ಕಳು ತಮಗೇನು ಬೇಕೆಂಬುದನ್ನು ತಾವೇ ನಿರ್ಧರಿಸಲು ಯತ್ನಿಸುತ್ತಾರೆ ಎನ್ನುತ್ತಾರೆ ಡಾ.ಇರ್ಫಾನ್ ಶೇಖ್.
"2018 ರ ಜಾಗತಿಕ ನ್ಯೂಟ್ರೀಷನ್ ವರದಿಯ ಪ್ರಕಾರ ಭಾರತ ಅತಿ ಹೆಚ್ಚು ಪೌಷ್ಠಿಕಾಂಶದಿಂದ ಕುಂಠಿತಗೊಂಡ ಮಕ್ಕಳು ಹಾಗೂ ಅತಿ ಹೆಚ್ಚು ಪೌಷ್ಠಿಕಾಂಶ ಪೋಲು ಮಾಡುವ ಮಕ್ಕಳನ್ನು ಹೊಂದಿದೆ.  ಅಷ್ಟೇ ಅಲ್ಲದೇ ವಿಶ್ವದಲ್ಲಿ ಬೊಜ್ಜು ಹೊಂದಿರುವ  ಹೆಚ್ಚು ಮಕ್ಕಳನ್ನು ಹೊಂದಿರುವ 2 ನೇ ರಾಷ್ಟ್ರವೂ ಹೌದು. ದೇಶಕ್ಕೆ ಇದೊಂದು ರೀತಿ ಉಭಯ ಸಂಕಟ" ಎನ್ನುತ್ತಾರೆ ಡಾ.ಶೇಖ್. 
ಇನ್ನು ಡಾ. ಮರಿಯನ್ ಪೋಷಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದು, ಅವು ಹೀಗಿವೆ, " ತಿನ್ನುವುದಕ್ಕೆ ನಿರಾಕರಿಸುವ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಟ್ಟು ಓಲೈಸುವ ಬದಲು ಕುತೂಹಲ ಮತ್ತು ಅನ್ವೇಷಣಾ ಪ್ರವೃತ್ತಿಯನ್ನು ಹೆಚ್ಚಿಸುವ ಆಟಿಕೆಗಳನ್ನು ನೀಡಿ. ತಿಂದ ತಕ್ಷಣ ಅವನ್ನು ಹಿಂಪಡೆಯಿರಿ, ಹೀಗೆ ಮಾಡುವುದರಿಂದ ಕ್ರಮೇಣ ಆಹಾರ ಸೇವಿಸುವುದಕ್ಕೆ ಮಕ್ಕಳೇ ಮುಂದಾಗುತ್ತಾರೆ ಎಂದು ಸಲಹೆ ನೀಡಿದ್ದಾರೆ. 
ಪೋಷಕರಿಗೆ ಮಾರ್ಗಸೂಚಿಗಳು 
ನೀವೇನು ಹೇಳುತ್ತೀರೋ ಅದನ್ನು ಪಾಲಿಸಿ 
ಕನಿಷ್ಟ ಒಂದು ಗಂಟೆಗಳ ಕಾಲ ಮಕ್ಕಳನ್ನು ಹೊರಗೆ ಆಟ ಆಡುವಂತೆ ಮಾಡಿ 
ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೂ ಮಕ್ಕಳು ಅಡಿಕ್ಟ್ ಆಗದಂತೆ ಎಚ್ಚರ ವಹಿಸಿ 
ಜಂಕ್ ಫುಡ್ ನೀಡುವುದರ ಬದಲು ಮಕ್ಕಳಿಗೆ ಮನೆಯಲ್ಲೇ ಪೌಷ್ಠಿಕ ಆಹಾರ ಮಾಡಿಕೊಡಿ
SCROLL FOR NEXT