ಕೊರೋನಾ ವೈರಸ್ ವಿಶ್ವದ ಪ್ರತೀಯೊಬ್ಬರನ್ನೂ ಬೆಚ್ಚಿ ಬೀಳುವಂತೆ ಮಾಡುತ್ತಿದ್ದು, ಸೋಂಕು ಹರಡಲು ಆರಂಭವಾಗುತ್ತಿದ್ದಂತೆಯೇ ಎಲ್ಲೆಡೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳಿಗೆ ಹಾಹಾಕಾರ ಶುರುವಾಗಿದೆ. ಈ ನಡುವಲ್ಲೇ ನಕಲಿ ಸ್ಯಾನಿಟೈಸರ್ ಗಳ ಹಾವಳಿ ಕೂಡ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜನರು ಬಹಳ ಎಚ್ಚರದಿಂದ ಇರಬೇಕಿದೆ. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದೂ ಕೂಡ ಅತ್ಯಂತ ಮುಖ್ಯವಾಗಿದೆ.
ಕೇವಲ ನಮ್ಮ ಆರೋಗ್ಯ ಮಾತ್ರವಲ್ಲೇ, ನಮ್ಮ ಇಡೀ ಕುಟುಂಬದ ಸದಸ್ಯರ ಆರೋಗ್ಯದ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಸ್ವಚ್ಛತೆ ಎಂದಾಕ್ಷಣ ಪ್ರತೀಯೊಬ್ಬರಿಗೂ ನೆನಪಾಗುವುದು ಸೋಪು ಹಾಗೂ ಸ್ಯಾನಿಟೈಸರ್ ಗಳು.
ಸೋಂಕು ಹರಡುವುದಕ್ಕೆ ಆರಂಭವಾದಾಗಿನಿಂದಲೂ ಪ್ರತೀ ಮನೆಯ ಹಾಗೂ ಕಚೇರಿಯಲ್ಲಿ ಸ್ಯಾನಿಟೈಸರ್ ಗಳು ಕಾಣಿಸುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಎಲ್ಲರೂ ಸ್ಯಾನಿಟೈಸರ್ ಹಾಕಿಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಆದರೆ, ಸ್ಯಾನಿಟೈಸರ್ ಬಳಕೆ ಕೇವಲ ನೆಪ ಹಾಗೂ ನಮ್ಮ ಸಮಾಧಾನಕ್ಕಷ್ಟೇ ಆಗಬಾರದು.
ವೈರಸ್ ಗಳನ್ನು ನಮ್ಮಿಂದ ದೂರ ಇಡುವಷ್ಟು ಶಕ್ತಿಯಿರುವ ಸ್ಯಾನಿಟೈಸರ್ ಗಳನ್ನು ಬಳಕೆ ಮಾಡುವುದು ಮುಖ್ಯ. ಬಳಕೆ ಮಾಡುವ ಸ್ಯಾನಿಟೈಸರ್ ಗಳಲ್ಲಿ ಶೇ.60 ರಷ್ಟು ಆಲ್ಕೋಹಾಲ್ ಕಂಟೆಂಟ್ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದೇ ಹೋದರೆ, ನಾವು ಎಷ್ಟೇ ಸ್ಯಾನಿಟೈಸರ್ ಗಳನ್ನು ಹಾಕಿಕೊಂಡು ಅದು ವ್ಯರ್ಥವೇ ಸರಿ.
ಹಾಗಾದರೆ ನಾವು ಬಳಕೆ ಮಾಡುವ ಸ್ಯಾನಿಟೈಸರ್ ಹೇಗಿರಬೇಕು? ಅದರ ಬಳಕೆ ಹೇಗೆ? ಇಲ್ಲಿದೆ ವಿವರ...
- ಶೇ.60ರಿಂದ ಶೇ.70ರಷ್ಟು ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಗಳಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಕೈತೊಳೆಯಲು ಸೋಪು ಅಥವಾ ನೀರು ಇಲ್ಲದಿದ್ದಾಗ ಇದನ್ನು ಬಳಕೆ ಮಾಡಬಹುದಾಗಿದೆ.
- ಸ್ಯಾನಿಟೈಸರ್ ಗಳನ್ನು ಹಾಕಿಕೊಂಡ ಬಳಿಕ ಕನಿಷ್ಟ 15-30 ಸೆಕೆಂಡ್ ಕೈಗಳನ್ನು ಉಜ್ಜಬೇಕು. ಇದರಿಂದ ವೈರಸ್ ಗಳು ಸಾಯುತ್ತವೆ. ಸ್ಯಾನಿಟೈಸರ್ ಹಚ್ಚಿ ಸರಿಯಾಗಿ ಕೈಗಳನ್ನು ಉಜ್ಜಿಕೊಳ್ಳದೇ 15 ನಿಮಿಷಗಳಿಗೂ ಮುನ್ನವೈ ಕೈತೊಳೆಯದೇ ಊಟ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ.
- ಸಾಧ್ಯವಾದರೆ, ಅನುಕೂಲಗಳಿದ್ದರೆ ಊಟಕ್ಕೂ ಮೊದಲು ಸ್ಯಾನಿಟೈಸರ್ ಹಚ್ಚಿಕೊಳ್ಳದೆ ಸೋಪು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.
- ಮಕ್ಕಳಿಗೆ ಸಾಧ್ಯವಾದಷ್ಟು ಸ್ಯಾನಿಟೈಸರ್ ಕಡಿಮೆ ಬಳಕೆ ಮಾಡಿ. ಮಕ್ಕಳು ಆಗಾಗ ತಮ್ಮ ಬೆರಳು ಹಾಗೂ ಕೈಗಳನ್ನು ಬಾಯಿಗೆ ಹಾಕಿಕೊಳ್ಳುವುದು, ಕೈಯಲ್ಲಿಯೇ ಏನಾದರೂ ತಿನ್ನುವ ಸಾಧ್ಯತೆಗಳಿರುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕ.
- ಮಕ್ಕಳು ಅಥವಾ ದೊಡ್ಡವರ ಹೊಟ್ಟೆಗೆ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್ ಹೋದರೆ, ವಾಂತಿ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆಲ್ಕೋಹಾಲ್ ವಿಷಕಾರಕವಾಗಿದ್ದು, ಮಕ್ಕಳು ಇದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪುವ ಸಾಧ್ಯತೆಗಳಿರುತ್ತವೆ. ಮಕ್ಕಳೇನಾದರೂ ಸ್ಯಾನಿಟೈಸರ್ ಗಳನ್ನು ಕುಡಿದು ಬಿಟ್ಟಿದ್ದರೆ, ನಿರ್ಲಕ್ಷ್ಯ ವಹಿಸಿದೆ ಕೂಡಲೇ ವೈದ್ಯರ ಬಳಿಗೆ ಮಗು ಕುಡಿದ ಸ್ಯಾನಿಟೈಸರ್ ಬಾಲಟಿ ಜೊತೆಗೆ ತೆಗೆದುಕೊಂಡು ಹೋಗಿ ತಪಾಸಣೆ ಮಾಡಿಸಿ, ಚಿಕಿತ್ಸೆ ಕೊಡಿಸಿ.
- 6 ವರ್ಷಕ್ಕಿಂತಲೂ ಕಡಿಮೆ ಇರುವ ಮಕ್ಕಳಿಗೆ ಸ್ಯಾನಿಟೈಸರ್ ಬಳಕೆ ಮಾಡದಿರುವುದು ಉತ್ತಮ. ಸಾಧ್ಯವಾದಷ್ಟು ಸ್ಯಾನಿಟೈಸರ್ ಗಳನ್ನು ಮಕ್ಕಳಿಂದ ದೂರ ಇಡುವುದು ಒಳಿತು.
- ಎಸ್ಜಿಮಾದಂತಹ ಚರ್ಮರೋಗ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ಯಾನಿಟೈಸರ್ ಹಾನಿಕಾರಕವಾಗಿದೆ. ಚರ್ಮ ಸಮಸ್ಯೆಗಳಿಂದ ಬಳಲುತ್ತಿರುವವರು ಸ್ಯಾನಿಟೈಸರ್ ಬದಲಿಗೆ ಸೋಪು ಮತ್ತು ನೀರಿನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಉತ್ತಮ. ಒಂದು ಬಳಕೆ ಮಾಡಲೇಬೇಕಾದ ಪರಿಸ್ಥಿತಿ ಇದ್ದರೆ, ಸ್ಯಾನಿಟೈಸರ್ ಹಾಕಿಕೊಂಡ ಬಳಿಕ ಕೈಗಳು ಒಣಗಿದ ನಂತರ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿಕೊಳ್ಳಿ. ಎಸೆನ್ಶಿಯರ್ ಆಯಿಲ್ ಜೊತೆಗೆ ಸ್ಯಾನಿಟೈಸರ್ ಗಳ ಬಳಕೆ ನಿಯಂತ್ರಿಸಿ.
- ಸ್ಯಾನಿಟೈಸರ್ ಹಾಕಿಕೊಂಡ ಬಳಿಕ ಕೈಗಳು ಒಣಗುವವರೆಗೂ ಉಜ್ಜಿಕೊಳ್ಳಿ. ಕೈಗಳು ಬೇಗ ಒಣಗಲಿ ಎಂದು ಗಾಳಿಗೆ ಬಿಡಬೇಡಿ. ಈ ವೇಳೆ ಗಾಳಿಯಲ್ಲಿರುವ ಸೂಕ್ಷ್ಮಜೀವಿಗಳು ಮತ್ತೆ ಕೈಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳಿರುತ್ತವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos