ಜೀವನಶೈಲಿ

ಮಾತನಾಡುವಾಗ ನಮ್ಮ ಬಾಯಿಯಿಂದ ಸಿಡಿಯುವ ಹನಿಗಳಿಂದಲೂ ಕೊರೋನಾ ಹರಡುತ್ತೆ!

Lingaraj Badiger

ನವದೆಹಲಿ: ಸಾಮಾನ್ಯವಾಗಿ ಕೊರೋನಾ ಪೀಡಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ಸೂಕ್ಷ್ಮ ಹನಿಗಳಿಂದ ಕೊರೋನಾ ವೈರಸ್ ಮತ್ತೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ದೇಶಾದ್ಯಂತ ಎಲ್ಲರೂ ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ. ಆದರೆ ಸೋಂಕಿತ ವ್ಯಕ್ತಿ ಮಾತನಾಡುವಾಗ ಆತನ ಬಾಯಿಯಿಂದ ಸಿಡಿಯುವ ಹನಿಗಳಿಂದಲೂ ಕೊರೋನಾ ವೈರಸ್ ಹರಡುವ ಸಾಧ್ಯತೆ ಇರುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ವ್ಯಕ್ತಿಯ ಭಾಷಣವು ಕನಿಷ್ಠ ಎಂಟು ನಿಮಿಷಗಳ ಕಾಲ ಗಾಳಿಯಲ್ಲಿ ಉಳಿಯುವ ಸಣ್ಣ ಉಸಿರಾಟದ ಹನಿಗಳನ್ನು ಹೊರಸೂಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ನರ್ಸಿಂಗ್ ಹೋಂಗಳು, ಸಮ್ಮೇಳನಗಳು, ಮನೆಗಳು ಮತ್ತು ಇತರ ಸ್ಥಳಗಳಲ್ಲಿ ಕೊರೋನಾ ವೈರಸ್ ಸೋಂಕು ಹರಡುವ ಹಿಂದಿನ ಕಾರಣವನ್ನು ಈ ಪ್ರಯೋಗವು ವಿವರಿಸಿದ್ದು, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮಧುಮೇಹ, ಜೀರ್ಣಕಾರಿ ಮತ್ತು ಮೂತ್ರಪಿಂಡ ಕಾಯಿಲೆಗಳ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದಾರೆ. ಇದನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಎಂಬ ಪೀರ್-ರಿವ್ಯೂಡ್ ಜರ್ನಲ್ ನ್ಲಿ ಪ್ರಕಟಿಸಲಾಗಿದೆ. ಮಾನವ ಭಾಷಣದ ಮೂಲಕ ಹೊರಸೂಸುವ ಹಲವಾರು ಉಸಿರಾಟದ ಹನಿಗಳನ್ನು ಲೇಸರ್ ಲೈಟ್ ಆಧಾರಿತ ಪರೀಕ್ಷೆಗೆ ಒಳಪಡಿಸಲಾಗಿದೆ.

ಜೋರಾಗಿ ಮಾತನಾಡುವಿಕೆಯು ಸೆಕೆಂಡಿಗೆ ಸಾವಿರಾರು ಹನಿಗಳನ್ನು ಹೊರಸೂಸುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ಅಧ್ಯಯನವನ್ನು ಉಲ್ಲೇಖಿಸಿ ವರದಿ ಮಾಡಿದೆ.

ದಕ್ಷಿಣ ಕೊರಿಯಾದ ಕಾಲ್ ಸೆಂಟರ್ ಮತ್ತು ಜನದಟ್ಟಣೆಯ ಚೀನಾ ರೆಸ್ಟೋರೆಂಟ್‌ನಲ್ಲಿ ಕೊರೋನಾ ವೈರಸ್ ಹರಡುವಿಕೆಯ ಬಗ್ಗೆ ತಜ್ಞರು ಅಧ್ಯಯನ ಮಾಡಿದ್ದಾರೆ. ಈ ಪ್ರಕರಣಗಳಲ್ಲಿ ಸಾಂಕ್ರಾಮಿಕ ವೈರಸ್ ಹೆಚ್ಚಾಗಿ ಏರೋಸಾಲ್ ಹನಿಗಳ ಮೂಲಕ ಹರಡಬಹುದೆಂಬ ಅನುಮಾನ ವ್ಯಕ್ತವಾಗಿದೆ.

SCROLL FOR NEXT