ಜೀವನಶೈಲಿ

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಉಪಯುಕ್ತ ಸಲಹೆಗಳು...

Manjula VN

ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಧೂಳಿನ ಕಾಟ... ಬೇಸಿಗೆ ಬಂದರೆ ಸಾಕು ಮನೆಯಿಂದ ಹೊರಗೆ ಬರುವುದೇ ಎಂದೆನಿಸಿ ಬಿಡುತ್ತದೆ. ಬೇಸಿಗೆ ಬಂತೆಂದರೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಬಿರುಬೇಸಿಗೆಯಲ್ಲಿ ಹೆಚ್ಚುವ ಧೂಳಿನ ಪ್ರಮಾಣ ಕಣ್ಣಿನ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ  ಕಟ್ಟಡಗಳ ನಿರ್ಮಾಣ ಕಾರ್ಯಗಳು ಹೆಚ್ಚಾಗಿ ನಡೆಯುವುದರಿಂದ ಕಣ್ಣಿಗೆ ಬೀಳುವ ಧೂಳು ಸಾಕಷ್ಟು ಅಲರ್ಜಿ ಮತ್ತು ಸೋಂಕು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. 

ಕಣ್ಣಿನಲ್ಲಿ ನವೆ, ನೀರು ಸುರಿಯುವವುದು, ಗೀಜು ಕಟ್ಟುವುದು, ಕಣ್ಣೊಳಗೆ ಚುಚ್ಚಿದ ಅನುಭವವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಣ್ಣುಗಳ ಬಗ್ಗೆ ಸ್ವಲ್ಪ ಜಾಸ್ತಿಯೇ ಜಾಗರೂಕರಾಗಬೇಕಾಗುತ್ತದೆ.

ಹಾಗಾದರೆ ಬೇಸಿಗೆಯಲ್ಲಿ ಕಣ್ಣುಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು? ಇಲ್ಲಿದೆ ಉಪಯುಕ್ತ ಸಲಹೆಗಳು...

  • ತಣ್ಣಗಿನ ಶುದ್ಧ ನೀರಿನಲ್ಲಿ ದಿನಕ್ಕೆ ಎರಡರಿಂದ ಮೂರು ಬರಿ ಕಣ್ಣನ್ನು ಸ್ವಚ್ಛಗೊಳಿಸಬೇಕು. 
  • ಬೇಸಿಗೆಯಲ್ಲಿ ಹೆಚ್ಚಾಗಿ ಎಸಿ ಮತ್ತು ಫ್ಯಾನುಗಳನ್ನು ಬಳಸುತ್ತೇವೆ. ಇದರಿಂದಾಗಿ ಕಣ್ಣುಗಳು ಬೇಗ ಒಣಗುತ್ತವೆ. ಆದಷ್ಟು ಎಸಿ ಅಥವಾ ಫ್ಯಾನಿನ ಗಾಳಿ ನೇರವಾಗಿ ಕಣ್ಣಿಗೆ ತಗುಲದಂತೆ ನೋಡಿಕೊಳ್ಳಬೇಕು.
  • ಬಿಸಿಲಿನಲ್ಲಿ ಓಡಾಡುವಾಗ ಗಾಗಲ್ಸ್ ಬಳಸುವುದು ಮತ್ತು ದ್ವಿಚಕ್ರ ಸವಾರರು ಆದಷ್ಟು ಮುಚ್ಚಿರುವ ಹೆಲ್ಮೆಟ್‍ಗಳನ್ನು ಬಳಸುವುದು ಉತ್ತಮ. 
  • ಮಡ್ರಾಸ್ ಐ ಎಂಬುದು ಬೇಸಿಗೆಯಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ.  ಹಾಗಾಗಿ ಧೂಳಿನ ಕೈಗಳನ್ನು ಸ್ವಚ್ಛ ಮಾಡಿದ ನಂತರವೇ ಕಣ್ಣನ್ನು ಮುಟ್ಟಬೇಕು. ಯಾವುದೇ ಕಾರಣಕ್ಕೂ ಕೊಳಕು ಕೈಗಳಿಂದ ಕಣ್ಣು ಮುಟ್ಟಿಕೊಳ್ಳಬಾರದು.
  • ಬೇಸಿಗೆಯಲ್ಲಿ ನೀರು ಕೂಡ ಬಹಳಷ್ಟು ಕಲುಷಿತವಾಗಿರುತ್ತದೆ. ಹಾಗಾಗಿ ಕಣ್ಣುಗಳನ್ನು ಕ್ಲೀನ್ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಅಲ್ಲದೇ ಕಣ್ಣಿಗೆ ಧೂಳು ಅಥವಾ ಕಸ ಬಿದ್ದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು. ಮೊದಲು ಸ್ವಚ್ಛ ನೀರು ಅಥವಾ ಬಟ್ಟೆಯಿಂದ ಒರೆಸಿ ನಂತರ ನೇತ್ರತಜ್ಞರನ್ನು ಕಾಣುವುದರಿಂದ ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸಬಹುದು. 
  • ಮನೆ ಅಥವಾ ಕಚೇರಿಯಲ್ಲಿ ಯಾರಿಗಾದರೂ ಕಣ್ಣಿನ ಸೋಂಕು ತಗುಲಿದೆ ಎಂದರೆ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ, ಸೋಂಕು ಬಹುಬೇಗ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿರುತ್ತವೆ. 
  • ಬೇಸಿಗೆಯಲ್ಲಿ ಬ್ಯಾಕ್ಟೀರಿಯಾ ಬೇಗ ಬೆಳೆಯುತ್ತವೆ. ಹಾಗಾಗಿ ಸೋಂಕುಗಳು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. 
SCROLL FOR NEXT