ಜೀವನಶೈಲಿ

ಕೋವಿಡ್ ಗೆ ಪ್ರತಿಕ್ರಿಯಿಸುವಲ್ಲಿ ಮಹಿಳೆ-ಪುರುಷರ ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ವ್ಯತ್ಯಾಸಗಳು ಪತ್ತೆ!

Srinivas Rao BV

ಲಂಡನ್: ಕೋವಿಡ್-19 ಉಂಟುಮಾಡುವ ರೋಗಾಣುಗಳಿಗೆ ಪ್ರತಿಕ್ರಿಯಿಸುವ ಮಹಿಳೆಯರು ಹಾಗೂ ಪುರುಷರಲ್ಲಿನ ರೋಗನಿರೋಧಕ ವ್ಯವಸ್ಥೆಯಲ್ಲಿನ ಪ್ರಮುಖ ವ್ಯತ್ಯಾಸಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. 

ಯೇಲ್ ವಿಶ್ವವಿದ್ಯಾಲಯದಲ್ಲಿ ಈ ಸಂಶೋಧನೆ ನಡೆದಿದ್ದು,  ಕೋವಿಡ್-19 ನಿಂದ ಹೆಚ್ಚು ಬಳಲಿ ಸಾವನ್ನಪ್ಪುವ ಸಾಧ್ಯತೆ ಹೊಂದಿರುವ ಪುರುಷರಲ್ಲಿನ ರೋಗನಿರೋಧಕ ಪ್ರಕ್ರಿಯೆಗೆ ಹೆಚ್ಚು ಸಂಬಂಧಿಸಿದ ಚಯಾಪಚಯ ಪ್ರತಿಕ್ರಿಯಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. 

ಜರ್ನಲ್ ಸೈನ್ಸ್ ಸಿಗ್ನಲಿಂಗ್ ನಲ್ಲಿ ಪ್ರಕಟಗೊಂಡ ಈ ಅಧ್ಯಯನದಲ್ಲಿ ಅಮೈನೊ ಆಸಿಡ್ ಚಯಾಪಚಯದ ಉತ್ಪನ್ನವಾಗಿರುವ ಕೈನುರೆನಿಕ್ ಆಮ್ಲ ಮಟ್ಟ ಪುರುಷ ಕೋವಿಡ್-19 ರೋಗಿಗಳಲ್ಲಿ, ಮಹಿಳೆಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಸಂಶೋಧಕರು ಕಂಡುಕೊಂಡಿರುವುದು ವರದಿಯಾಗಿದೆ. 

ಕೈನುರೆನಿಕ್ ಆಮ್ಲ ಮಟ್ಟ ಹೆಚ್ಚಾಗಿರುವುದು ಸ್ಕಿಜೋಫ್ರೇನಿಯಾ ಮತ್ತು ಎಚ್ಐವಿ ಸಂಬಂಧಿತ ರೋಗಗಳಿಗೆ ಸಂಬಂಧಪಟ್ಟಿರುವುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕೋವಿಡ್-19 ಸೋಂಕು ತೀವ್ರವಾಗಿರುವ ಪುರುಷ ರೋಗಿಗಳಲ್ಲಿ ಕೈನುರೆನಿಕ್ ಆಮ್ಲದಿಂದ ಕೈನುರೆನೈನ್ ಅಂಶ ಹೆಚ್ಚಾಗಿದ್ದು, ಪೋಷಕಾಂಶದ ನಿಯಾಸಿನ್ ಸೃಷ್ಟಿಸಲು ಉಪಯುಕ್ತವಾಗುತ್ತದೆ.

ರೋಗವೊಂದರಲ್ಲಿ ಬದಲಾದ ಜೀವರಾಸಾಯನಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇದು ಸಹಕಾರಿ ಎನ್ನುತ್ತಾರೆ ಸಂಶೋಧಕರು. ಈ ರೀತಿ ಮಾಡುವುದರಿಂದ ಸ್ಪಷ್ಟವಾದ ರೋಗ ಮಾದರಿಯನ್ನು ಅಭಿವೃದ್ಧಿಪಡಿಸಿ ಅದರ ಚಿಕಿತ್ಸೆಗೆ ಸಮರ್ಥವಾದ ಮಾರ್ಗ ಕಂಡುಕೊಳ್ಳಬಹುದಾಗಿದೆ ಎಂದು ಬ್ರಿಟನ್ ನ ಸ್ಟ್ರಾಥ್‌ಕ್ಲೈಡ್ ವಿಶ್ವವಿದ್ಯಾಲಯದ ನಿಕೋಲಸ್ ರಾಟ್ರೇ ಹೇಳಿದ್ದಾರೆ.

"ಕೋವಿಡ್-19 ನ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಚಯಾಪಚಯ ಕ್ರಿಯೆಯ ಪ್ರಮುಖ ಪಾತ್ರವನ್ನು ಈ ಸಂಶೋಧನೆ ತೋರುತ್ತಿದ್ದು, ವ್ಯಕ್ತಿಯೋರ್ವನ ವಿವಿಧ ರೋಗನಿರೋಧಕ ಸ್ಥಿತಿ ರೋಗಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ" ಎನ್ನುತ್ತಾರೆ ವಿಶ್ವವಿದ್ಯಾಲಯದ ನಿಕೋಲಸ್ ರಾಟ್ರೇ 

ಯೇಲ್ ನ್ಯೂ ಹೆವನ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದ 22 ಮಹಿಳೆಯರು ಹಾಗೂ 17 ಪುರುಷ ರೋಗಿಗಳ ರಕ್ತ ಮಾದರಿಗಳನ್ನು ಸಂಶೋಧಕರು ತಮ್ಮ ಅಧ್ಯಯನಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಮಾದರಿಗಳನ್ನು ಸೋಂಕು ತಗುಲದೇ ಇರುವ 20 ಮಂದಿಯ ಮಾದರಿಗಳಿಗೆ ಹೋಲಿಕೆ ಮಾಡಲಾಗಿದೆ. 

ಸಂಶೋಧಕರು ಸಕಾರಾತ್ಮಕವಾಗಿ ಜೀರ್ಣ ಹಾಗೂ ಸೆಲ್ಯುಲಾರ್ ಪ್ರಕ್ರಿಯೆಗಳ ಆಣ್ವಿಕ ಉತ್ಪನ್ನಗಳಾದ 75 ಮೆಟಬೊಲೈಟ್ ಗಳನ್ನು ಗುರುತಿಸಿದ್ದಾರೆ. ಇದನ್ನು ರೋಗಿಯ ಲಿಂಗ, ದೇಹ-ದ್ರವ್ಯರಾಶಿ ಸೂಚ್ಯಂಕ (body-mass index) ಹಾಗೂ ಇನ್ನಿತರ ಗುಣಲಕ್ಷಣಗಳಿಗೆ ಹೋಲಿಕೆ ಮಾಡಿದಾಗ 17 ಮೆಟಬೊಲೈಟ್ ಗಳಿಗೂ ಕೋವಿಡ್-19 ಸೋಂಕಿಗೂ ಸಂಬಂಧವಿರುವುದು ಪತ್ತೆಯಾಗಿದೆ. 

ಮುಂದುವರಿದ ಸಂಶೋಧನೆಯಲ್ಲಿ ಪುರುಷ ರೋಗ ನಿರೋಧಕ ಪ್ರತಿಕ್ರಿಯೆಯಲ್ಲಿನ ಕೈನುರೆನಿಕ್ ಆಮ್ಲದ ಅಧಿಕ ಮಟ್ಟ ಹಾಗೂ ಕೈನುರೆನಿಕ್ ಆಮ್ಲದಿಂದ ಕೈನುರೆನೈನ್ ಗೆ ಇರುವ ಅಧಿಕ ಅನುಪಾತ ಹಾಗೂ ರೋಗಿಯಲ್ಲಿನ ಕೆಟ್ಟ ಫಲಿತಾಂಶಗಳಿಗೂ ಸಂಬಂಧವಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. 

SCROLL FOR NEXT