ಸಂಗ್ರಹ ಚಿತ್ರ 
ಜೀವನಶೈಲಿ

ನಿಮ್ಮ ಮಗುವಿಗೆ ಊಟ ಮಾಡಿಸಲು ಹರಸಾಹಸವೇ? ಸಮಸ್ಯೆ ದೂರಾಗಿಸಲು ಮಾಡಿಕೊಳ್ಳಿ ಈ ಸಣ್ಣ ಬದಲಾವಣೆ! ಇಲ್ಲಿವೆ ಕೆಲವು ಟಿಪ್ಸ್

ಊಟ ಮಾಡುವಾಗ ಮಕ್ಕಳು ಹಠ ಮಾಡುವುದು ಸಹಜ. ಆದರೆ, ಮಕ್ಕಳಲ್ಲಿರುವ ಹಠಮಾರಿತನವನ್ನು ಹೋಗಲಾಡಿಸಲು ತಾಯಂದಿರು ಪ್ರಯತ್ನಗಳನ್ನು ಪಡಲೇಬೇಕು.

ನನ್ನ ಮಗು ಸರಿಯಾಗಿ ಊಟ ಮಾಡುತ್ತಿಲ್ಲ, ಆಟವಿದ್ದರೆ ಸಾಕು ಊಟದ ನೆನಪೇ ಆಗುವುದಿಲ್ಲ. ಇದು ತಂದೆ-ತಾಯಿಗಳ ಪ್ರತೀನಿತ್ಯದ ದೂರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಊಟ ಮಾಡಿಸುವುದು ಪೋಷಕರಿಗೆ ಸಾಹಸವಾಗಿ ಹೋಗಿದೆ. ಇನ್ನು ಹಠ ಮಾಡುವ ಮಕ್ಕಳಿದ್ದರೆ ಸಾಕು ಪೋಷಕರು ಪಾಡು ಹೇಳ ತೀರದು. ಮಗು ಏನಾದರೂ ತಿಂದರೆ ಸಾಕು ಎಂದು ಅದು ಕೇಳಿದ್ದನ್ನೆಲ್ಲಾ ಕೊಡಿಸಿ ಹೊಟ್ಟೆ ತುಂಬಿಸುವುದು ಪರಿಪಾಠವಾಗಿ ಬೆಳೆಯುತ್ತಿದೆ.

ಊಟ ಮಾಡುವಾಗ ಮಕ್ಕಳು ಹಠ ಮಾಡುವುದು ಸಹಜ. ಆದರೆ, ಮಕ್ಕಳಿಗೆ ಯಾವ ರೀತಿ ಆಹಾರ ತಿನ್ನಿಸಬೇಕು ಎಂಬ ತಂತ್ರಗಳು ಪೋಷಕರಿಗೆ ತಿಳಿದಿರಬೇಕು. ಸಾಮಾನ್ಯವಾಗಿ ಮಕ್ಕಳು ಆರೋಗ್ಯಕರ ಆಹಾರಗಳನ್ನು ತಿರಸ್ಕರಿಸಿ ಕುರುಕಲು ತಿಂಡಿಗಳನ್ನು ಕೇಳುತ್ತಾರೆ. ಮಕ್ಕಳಲ್ಲಿರುವ ಹಠಮಾರಿತನವನ್ನು ಹೋಗಲಾಡಿಸಲು ತಾಯಂದಿರು ಪ್ರಯತ್ನಗಳನ್ನು ಪಡಲೇಬೇಕು. ಇಲ್ಲದೇ ಹೋದರೆ ನಿಮ್ಮ ಕಂದಮ್ಮ ಪೋಷಕಾಂಶಗಳ ಕೊರತೆಯಿಂದ ಬಳಲುವ ಸಾಧ್ಯತೆಗಳಿರುತ್ತವೆ.

ಈಗಿನ ಬಹುಪಾಲು ತಾಯಂದಿರಿಗೆ ಮಕ್ಕಳಿಗೆ ತಿನ್ನಲು ಏನನ್ನು ಕೊಡಬಹುದು, ಏನನ್ನು ಕೊಡಬಾರದು ಎನ್ನುವುದರ ಅರಿವೇ ಇಲ್ಲದಂತಾಗಿದೆ. ಹಾಳು ಮೂಳು ಬೇಕರಿ ತಿಂಡಿಗಳು, ಕುರ್‌ಕುರೆ, ಲೇಸ್‌, ಬಿಂಗೋ ನಂತಹ ಅನಾರೋಗ್ಯಕರ ಚಿಫ್ಸ್‌ಗಳು, ರಸ್ತೆ ಬದಿಯ ಪಾನಿಪೂರಿ, ಗೋಬಿಮಂಚೂರಿ, ಪಿಜ್ಜಾ, ಬರ್ಗರ್‌ಗಳನ್ನು ಕೊಟ್ಟು ಆ ಮಕ್ಕಳಿಗೆ ಅನ್ನ, ಮೇಲೋಗರ ರುಚಿಸದಂತೆ ಮಾಡಿಬಿಟ್ಟಿದ್ದಾರೆ. ಇದಕ್ಕೆಲ್ಲ ಪರಿಹಾರ ಆ ತಾಯಂದಿರ ಕೈಯಲ್ಲಿಯೇ ಇದೆ.

ಮಗು ಊಟ ಮಾಡಲಾರಂಭಿಸಿದಾಕ್ಷಣ ಜೀವಸತ್ವ ಭರಿತ, ತರಕಾರಿಯುಕ್ತ, ಆರೋಗ್ಯಕರ ಆಹಾರವನ್ನೇ ಕೊಟ್ಟು ಈ ಜಂಕ್‌ಫುಡ್‌ಗಳಿಂದ ದೂರವಿರಿಸಿದ್ದರೆ ಮಕ್ಕಳು ಚೆನ್ನಾಗಿಯೇ ಊಟಮಾಡುತ್ತಿದ್ದರು. ಆದರೆ, ಈ ಪ್ರಯತ್ನಗಳನ್ನು ಮಾಡದೆ ಮಕ್ಕಳ ಹಸಿವು ಹೆಚ್ಚಾಗಿಸಲು ವೈದ್ಯರ ಬಳಿ ಔಷಧಿ ಕೇಳುತ್ತಿದ್ದಾರೆ.

ಈ ವಿಷಯದಲ್ಲಿ ತಾಯಿಯಂದಿರು ನಿಜಕ್ಕೂ ಅಸಹಾಯಕರೇ...ಇಂದಿನ ಮಕ್ಕಳ ಆಹಾರ ಕ್ರಮ ನೋಡಿದರೆ ತಾಯಿಯಂದಿರು ಬೆಳಗ್ಗೆ ಎದ್ದಾಕ್ಷಣ ಹಲ್ಲುಜ್ಜದೇ ಎರಡು ಬ್ರೆಡ್ ಪೀಸ್‌ ಅದಕ್ಕೆ ಜಾಮ್‌ ಸೇರಿಸಿ ಮಕ್ಕಳ ಬಾಯಿಗಿಡುತ್ತಿದ್ದಾರೆ. ಶಾಲೆಯ ಡಬ್ಬಿಗೆ ಮ್ಯಾಗಿ, ಡೈರಿ ಮಿಲ್ಕ್‌ ಚಾಕಲೇಟ್‌, ಹಿಂದಿನ ದಿನ ತಂದಿಟ್ಟ ಒಂದು ಸಮೋಸಾ ಇಟ್ಟು ಕಳುಹಿಸುತ್ತಾರೆ.

ಮಧ್ಯಾಹ್ನ 4ಕ್ಕೆ ಮಗು ಬರುತ್ತದೆ. ಅನ್ನ ಕಲಸಿ ಬಾಯಿಗಿಟ್ಟರೆ ವಾಕರಿಸುತ್ತದೆ. ಬಳಿಕ ತಿಂಡಿ ಡಬ್ಬಿ ಕೊಡುತ್ತಾರೆ. ಆ ಡಬ್ಬಿಯಲ್ಲಿ ಬಿಸ್ಕತ್‌, ಚಾಕಲೇಟ್‌, ಬಿಂಗೋ, ಲೇಸ್‌, ಕುರುಕುರೆ, ಚಕ್ಕುಲಿ ಕೋಡುಬಳೆ, ಪೂರ್ತಿ ಬೇಕರಿಯೇ ಅಲ್ಲಿ ಅನಾವರಣಗೊಂಡಿರುತ್ತದೆ. ಇಷ್ಟೆಲ್ಲ ತಿಂದ ಮಕ್ಕಳು ರಾತ್ರಿ ಊಟ ಮಾಡಿತ್ತವೆಯೇ? ಕೇವಲ ಜಂಕ್ ಫುಡ್ ಅಷ್ಟೇ ಅಲ್ಲದೆ, ಮಕ್ಕಳನ್ನು ಡಿಜಿಟಲ್ ಗೀಳು ಕೂಡ ಕಾಡುತ್ತಿದೆ. ಮೊಬೈಲ್ ಕೈಗಿಟ್ಟರೇ ಏನು ತಿನ್ನುತ್ತಿದ್ದಾರೆಂಬ ಅರಿವಿಲ್ಲದೆ ತಿನ್ನುತ್ತಾರೆ. ಇದು ಮಕ್ಕಳ ಆರೋಗ್ಯ ಹಾಗೂ ಮಿದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಹಾಗಿದ್ದರೆ ಏನು ಮಾಡಬೇಕು...?

ಎಂಟರಿಕ್ ನರ್ವಸ್ ಸಿಸ್ಟಮ್ (ENS) ನಮ್ಮ ದೇಹದ 'ಎರಡನೇ ಮೆದುಳಾಗಿದೆ. ಕರುಳಿನಲ್ಲಿರುವ ಈ ನರಕೋಶವು ತಲೆಯಲ್ಲಿರುವ ಮೆದುಳಿನೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತದೆ, ಹಸಿವು, ಬಯಕೆಗಳು ಮತ್ತು ಪೋಷಕಾಂಶಗಳ ಅಗತ್ಯಗಳನ್ನು ಇದು ಸೂಚಿಸುತ್ತದೆ. ಆರೋಗ್ಯಕರ ಕರುಳು ಇಲ್ಲದಿರುವುದು, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದು ಸೇರಿದಂತೆ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಮಗುವಿನ ಕರುಳಿನ ಕ್ರಮಬದ್ಧತೆ ಮತ್ತು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸಲು ಶಕ್ತಿಯುತ, ಜೀವನಶೈಲಿಯ ಬದಲಾವಣೆಗಳು ಮುಖ್ಯವಾಗುತ್ತದೆ.

ಕುಳಿತುಕೊಂಡು ಊಟ ಮಾಡುವುದನ್ನು ನಿಯಮವನ್ನಾಗಿ ಮಾಡಿ:

ಮಕ್ಕಳು ಯಾವಾಗಲೂ ಓಡಾಡುತ್ತಲೇ ಇರುತ್ತಾರೆ. ಆಟವಾಡುತ್ತಾ ತಿನ್ನುವುದು, ಜ್ಯೂಸ್ ಕುಡಿಯುವುದು ಮಾಡುತ್ತಾರೆ. ಆದರೆ, ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಮನೆಯಲ್ಲಿ ಒಂದು ಸ್ಥಾನವನ್ನು ಊಟಕ್ಕೆಂದೇ ಮೀಸಲಿಡಿ. ಕುಳಿತು ಊಟ ಮಾಡುವುದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಆಳವಾದ ಉಸಿರಾಟ ಹಾಗೂ ಊಟಕ್ಕೆ ಕೃತಜ್ಞತೆ ಸಲ್ಲಿಸುವುದನ್ನು ಹೇಳಿಕೊಡಿ:

ಶಾಲೆಗೆ ಹೋಗಿ ಬಂದ ಮಕ್ಕಳಿಗೆ ಸಾಮಾನ್ಯವಾಗಿ ಹಸಿವು ಹೆಚ್ಚಾಗಿರುತ್ತದೆ. ದೇಹವೂ ಒತ್ತಡದಲ್ಲಿರುತ್ತದೆ. ಹೀಗಾಗಿ ತಿನ್ನುವ ಮೊದಲು ಮಕ್ಕಳಿಗೆ 3-6 ಬಾರಿ ಆಳವಾದ ಉಸಿರು ತೆಗೆದುಕೊಳ್ಳಲು ತಿಳಿಸಿ. ಇದು ಲಾಲಾರಸ ಮತ್ತು ಹೊಟ್ಟೆಯ ಆಮ್ಲವನ್ನು ಹೆಚ್ಚಿಸುತ್ತದೆ. ಇದರಿಂದ ಸೇವನೆ ಮಾಡುವ ಆಹಾರದಲ್ಲಿರುವ ಪೋಷಕಾಂಶಗಳು ಜೀವಕೋಶಗಳನ್ನು ತಲುಪುವುದನ್ನು ಖಚಿತಪಡಿಸುತ್ತದೆ.

ಮಕ್ಕಳು ಸೇವನೆ ಮಾಡುವ ಆಹಾರಕ್ಕೆ ಕೃತಜ್ಞತೆ ಸಲ್ಲಿಸುವಂತೆ ಮಾಡಿ. ಇದು ಊಟದ ಕುರಿತು ಅವರಲ್ಲಿ ಮೌಲ್ಯಗಳು ಹೆಚ್ಚಾಗುವಂತೆ ಮಾಡುತ್ತದೆ. ಇದು ಭಾವನಾತ್ಮಕ ಸ್ಥಿತಿಸ್ಥಾಪಕತ್ವವನ್ನು ಸಹ ನಿರ್ಮಿಸುತ್ತದೆ.

ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವಂತೆ ಮಾಡಿ:

ಆಟವಾಡುವತ್ತ ಹೆಚ್ಚು ಆಸಕ್ತಿ ತೋರುವ ಮಕ್ಕಳು ಸಾಮಾನ್ಯವಾಗಿ ಆಹಾರವನ್ನು ಚೆನ್ನಾಗಿ ಅಗಿಯದೆ ನುಂಗುವುದುಂಟು. ಇದು ಅಪಾಯಕಾರಿ. ಇದು ಮಲಬದ್ಧತೆಗೂ ಕಾರಣವಾಗುತ್ತದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಲಿಪೇಸ್ ಮತ್ತು ಅಮೈಲೇಸ್‌ನಂತಹ ಕಿಣ್ವಗಳೊಂದಿಗೆ ಲಾಲಾರಸ ಉತ್ಪತ್ತಿಯಾಗುತ್ತದೆ, ಪ್ರೋಟೀನ್ ಮತ್ತು ಕೊಬ್ಬಿನಾಂಶ ವಿಭಜನೆಯಾಗಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆಂಟಾಸಿಡ್ ಅಗತ್ಯಗಳನ್ನು ಶೇಕಡಾ 80-90 ರಷ್ಟು ಕಡಿಮೆ ಮಾಡುತ್ತದೆ.

ಊಟದ ಸಮಯದಲ್ಲಿ ಗ್ಯಾಜೆಟ್ ಬಳಕೆ ನಿಷೇಧಿಸಿ:

ಊಟದ ಸಮಯದಲ್ಲಿ ಟಿವಿ ಅಥವಾ ಫೋನ್‌ಗಳು ಬಳಕೆ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ, ಅಲ್ಲದೆ, ಮಕ್ಕಳಿಗೆ ಊಟದ ಮೇಲೆ ಗಮನ ಇಲ್ಲದಂತಾಗಿ, ಊಟ ಮಾಡುವ ಮನಸ್ಸು ಕೂಡ ದೂರಾಗುತ್ತದೆ. ಊಟದ ರುಚಿ ಗುರುತಿಸುವುದನ್ನು ನಿಲ್ಲಿಸುತ್ತಾರೆ. ಗ್ಯಾಜೆಟ್ ಗಳ ನೋಡಿ ಊಟ ಸೇವಿಸುವ ಶೇಕಡಾ 90 ರಷ್ಟು ಮಕ್ಕಳಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಸಂಶೋಧನೆಯೊಂದು ಹೇಳಿದೆ. ಇದು ದುರ್ಬಲ ಮೂಳೆಗಳು, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಕರುಳಿನ ಅಸಮತೋಲನಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಎದುರಿಸಲು ಮಕ್ಕಳೊಂದಿಗೆ ಹೆಚ್ಚೆಚ್ಚು ಮಾತನಾಡಿ, ಅವರ ಗಮನವನ್ನು ನಿಮಿತ್ತ ಸೆಳೆಯಿರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮುಂದಿನ ವರ್ಷ 17ನೇ ಬಜೆಟ್ ಮಂಡಿಸುತ್ತೇನೆ': ನಾಯಕತ್ವ ಬದಲಾವಣೆಯ ವದಂತಿಗೆ ತೆರೆ ಎಳೆದರೇ ಸಿದ್ದರಾಮಯ್ಯ?

ಬಿಹಾರ ಸೋಲಿನಿಂದ ಕಂಗೆಟ್ಟ ಕೈ ಪಡೆ: ಒಡೆದು ಛಿದ್ರವಾಯ್ತಾ INDIA ಒಕ್ಕೂಟ- ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ?

ಮೇಕೆದಾಟು ಯೋಜನೆ: ಪ್ರಸಕ್ತ ದರಕ್ಕೆ ಪರಿಷ್ಕರಿಸಿ DPR ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ

ದೇಶಕ್ಕೆ ಹೆಮ್ಮೆ ತಂದ ತಿಪಟೂರು IAS ಅಧಿಕಾರಿ ಯಶೋಗಾಥೆ: ಮಧ್ಯಪ್ರದೇಶದಲ್ಲಿ 'ಮಣ್ಣಿನ ಮಗ'ನ ಜಲಕ್ರಾಂತಿ!

ವಿಧಾನಸೌಧದ ಮುಂದೆ ಮಾರಾಮಾರಿ ನಡೆಸಿದ್ದು ನೇಪಾಳಿಗರು: ಕೇಸ್ ದಾಖಲು

SCROLL FOR NEXT