ಕೂದಲು ಉದುರುವುದು, ತೆಳ್ಳಗಾಗುವುದು, ಬೆಳವಣಿಗೆ ನಿಧಾನವಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದಾಗಿ ಅನೇಕರು ತೆಂಗಿನ ಎಣ್ಣೆ, ಹರಳೆಣ್ಣೆ, ರೋಸ್‌ಮೆರಿ ಎಣ್ಣೆ, ಕರಿಬೇವು, ಮೆಂತ್ಯೆ, ದಾಸವಾಳ, ನೆಲ್ಲಿಕಾಯಿ, ಈರುಳ್ಳಿ ರಸ ಮುಂತಾದ ಪದಾರ್ಥಗಳನ್ನು ಬಳಸಿ ಮನೆಯಲ್ಲಿ ತಯಾರಿಸಿದ ಎಣ್ಣೆಯನ್ನು ಹಚ್ಚಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ "7 ದಿನಗಳಲ್ಲಿ ಉದ್ದ ಕೂದಲು", "ಒಂದೇ ತಿಂಗಳಲ್ಲಿ ದಟ್ಟ ಕೂದಲು" ಎಂಬ ವಿಡಿಯೊಗಳು ವೈರಲ್ ಆಗುತ್ತಿವೆ.
ಆದರೆ, ನಿಜವಾಗಿಯೂ ಮನೆಯಲ್ಲಿ ತಯಾರಿಸಿದ ಎಣ್ಣೆಗಳು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತವೆಯೇ? ಅಥವಾ ಇದು ಕೇವಲ ಒಂದು ನಂಬಿಕೆಯೇ? ವಿಜ್ಞಾನ ಏನು ಹೇಳುತ್ತದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ...
ಮನೆಯಲ್ಲಿ ತಯಾರಿಸಿದ ಎಣ್ಣೆಯಿಂದ ಕೂದಲು ನಿಜಕ್ಕೂ ವೇಗವಾಗಿ ಬೆಳೆಯಿಸುತ್ತದೆಯೇ?
ತಜ್ಞರ ಪ್ರಕಾರ, ಯಾವುದೇ ಎಣ್ಣೆ—ಮನೆಯಲ್ಲಿ ತಯಾರಿಸಿದದ್ದಾಗಿರಲಿ ಅಥವಾ ಮಾರುಕಟ್ಟೆಯಲ್ಲಿ ದೊರೆಯುವದ್ದಾಗಿರಲಿ—ಕೂದಲು ಬೆಳೆಯುವ ನೈಸರ್ಗಿಕ ವೇಗವನ್ನು ಹೆಚ್ಚಿಸುವುದಿಲ್ಲ.
ಕೂದಲಿನ ಬೆಳವಣಿಗೆ ಮುಖ್ಯವಾಗಿ ನಮ್ಮ ಆನುವಂಶಿಕತೆ, ಹಾರ್ಮೋನುಗಳು, ಪೌಷ್ಟಿಕಾಂಶ, ವಯಸ್ಸು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ.
ಹಾಗೆಂದು ಎಣ್ಣೆ ಹಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರ್ಥವಲ್ಲ. ಸರಿಯಾದ ರೀತಿಯಲ್ಲಿ ಬಳಸಿದರೆ ಅದು ನೆತ್ತಿಯ ಆರೋಗ್ಯವನ್ನು ಸುಧಾರಿಸಿ, ಕೂದಲು ತುಂಡಾಗುವುದನ್ನು ಕಡಿಮೆ ಮಾಡಿ, ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಕೂದಲು ಉತ್ತಮವಾಗಿ ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.
ಆರೋಗ್ಯಕರ ನೆತ್ತಿಯೇ ಆರೋಗ್ಯಕರ ಕೂದಲಿನ ರಹಸ್ಯ
ಕೂದಲಿನ ಬೇರುಗಳು ನೆತ್ತಿಯಲ್ಲಿರುತ್ತವೆ. ನೆತ್ತಿ ಆರೋಗ್ಯವಾಗಿದ್ದರೆ ಕೂದಲು ಸಹ ಆರೋಗ್ಯವಾಗಿರುತ್ತದೆ. ಮನೆಯಲ್ಲಿ ತಯಾರಿಸಿದ ಕೆಲವು ಎಣ್ಣೆಗಳು ನೆತ್ತಿಯ ತೇವಾಂಶವನ್ನು ಕಾಪಾಡುತ್ತವೆ.
ಒಣತನ, ತುರಿಕೆ ಹಾಗೂ ಸಣ್ಣ ಪ್ರಮಾಣದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಆದರೆ, "ಎಣ್ಣೆ ಹಚ್ಚಿದರೆ ಹೊಸ ಕೂದಲು ಹುಟ್ಟುತ್ತದೆ" ಅಥವಾ "ಬೋಳು ಭಾಗದಲ್ಲಿ ಕೂದಲು ಬರುತ್ತದೆ" ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳು ಅತ್ಯಂತ ವಿರಳ.
ತೆಂಗಿನ ಎಣ್ಣೆ ಹಚ್ಚುವ ಪ್ರಯೋಜನವೇನು?
ತೆಂಗಿನ ಎಣ್ಣೆ ಭಾರತೀಯ ಮನೆಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸುವ ಎಣ್ಣೆ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿದರೆ, ಅದು ಕೂದಲಿನಲ್ಲಿರುವ ಪ್ರೋಟೀನ್ ನಷ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಕೂದಲನ್ನು ಮೃದುವಾಗಿಡುವುದು, ಕೂದಲು ತುಂಡಾಗುವುದನ್ನು ತಡೆಯುವುದು ಹಾಗೂ ಒಣ ಹಾಗೂ ಒರಟಾದ ಕೂದಲಿಗೆ ತೇವಾಂಶ ನೀಡುತ್ತದೆ. ಆದರೆ, ಇದು ಕೂದಲು ವೇಗವಾಗಿ ಬೆಳೆಯುವಂತೆ ಮಾಡುವುದಿಲ್ಲ.
ಹರಳೆಣ್ಣೆಯ ಬಗ್ಗೆ ಇರುವ ನಂಬಿಕೆ ಎಷ್ಟು ಸತ್ಯ?
ಹರಳೆಣ್ಣೆ (Castor Oil) ಹಚ್ಚಿದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಬಹಳ ಜನಪ್ರಿಯವಾಗಿದೆ. ಆದರೆ, ಇದನ್ನು ದೃಢಪಡಿಸುವ ವೈಜ್ಞಾನಿಕ ಅಧ್ಯಯನಗಳು ತುಂಬಾ ಕಡಿಮೆ.
ಹರಳೆಣ್ಣೆ ಕೂದಲಿಗೆ ಹಚ್ಚಿದರೆ, ಅದು ನೆತ್ತಿಗೆ ತೇವಾಂಶ ಒದಗಿಸುತ್ತದೆ, ಅಲ್ಲದೆ, ಕೂದಲಿನ ಕಾಂತಿಯನ್ನು ಹೆಚ್ಚಿಸಿ, ಕೂದಲು ಒಡೆಯುವುದನ್ನು ಕಡಿಮೆ ಮಾಡಬಹುದು. ಆದರೆ ಕೂದಲು ಬೆಳೆಯುವ ವೇಗವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ.
ರೋಸ್‌ಮೆರಿ ಎಣ್ಣೆ ನಿಜವಾಗಿಯೂ ಪರಿಣಾಮಕಾರಿಯೇ?
ಇತ್ತೀಚಿನ ವರ್ಷಗಳಲ್ಲಿ ರೋಸ್‌ಮೆರಿ ಎಣ್ಣೆ ಸಾಕಷ್ಟು ಜನಪ್ರಿಯವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಈ ಎಣ್ಣೆಯನ್ನು ಹಚ್ಚುವುದರೆ ಅದು ನೆತ್ತಿಯಲ್ಲಿ ರಕ್ತ ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಕೂದಲು ಉದುರುವಿಕೆ ಕಡಿಮೆ ಮಾಡಲು ನೆರವಾಗಬಹುದು. ಆದರೆ ಇದನ್ನೂ ಅದ್ಭುತ ಪರಿಹಾರ ಎಂದು ಪರಿಗಣಿಸುವುದು ಸರಿಯಲ್ಲ.
ಮನೆಯಲ್ಲಿ ತಯಾರಿಸಿದ ಎಣ್ಣೆಗಳು ಏನು ಮಾಡಬಲ್ಲವು?
ಸರಿಯಾದ ರೀತಿಯಲ್ಲಿ ಬಳಸಿದರೆ ಈ ಎಣ್ಣೆಗಳು:
ನೆತ್ತಿಯನ್ನು ತೇವಾಂಶದಿಂದ ಕಾಪಾಡುತ್ತವೆ.
ಕೂದಲು ಒಣಗದಂತೆ ನೋಡಿಕೊಳ್ಳುತ್ತವೆ.
ಕೂದಲು ಮುರಿಯುವಿಕೆಯನ್ನು ಕಡಿಮೆ ಮಾಡುತ್ತವೆ.
ಕೂದಲಿಗೆ ಹೊಳಪು ನೀಡುತ್ತವೆ.
ಕೂದಲಿನ ಆರೈಕೆಗೆ ಪೂರಕವಾಗುತ್ತವೆ.
ಆದರೆ ಇವು...
ಒಂದೇ ವಾರದಲ್ಲಿ ಕೂದಲು ಉದ್ದ ಮಾಡಲಾರವು.
ಬೋಳು ಭಾಗದಲ್ಲಿ ಹೊಸ ಕೂದಲು ಮೂಡಿಸಲಾರವು.
ಆನುವಂಶಿಕ ಕೂದಲು ಉದುರುವಿಕೆಯನ್ನು ಸಂಪೂರ್ಣವಾಗಿ ತಡೆಯಲಾರವು.
ಜನರು ಮಾಡುವ ಸಾಮಾನ್ಯ ತಪ್ಪುಗಳು
ಹೆಚ್ಚು ಎಣ್ಣೆ ಹಚ್ಚಿದರೆ ಹೆಚ್ಚು ಪ್ರಯೋಜನ ಎಂದು ಭಾವಿಸುವುದು
ಇದು ತಪ್ಪು ಕಲ್ಪನೆ. ಅತಿಯಾಗಿ ಎಣ್ಣೆ ಹಚ್ಚುವುದರಿಂದ ನೆತ್ತಿಯ ರಂಧ್ರಗಳು ಮುಚ್ಚಿಕೊಳ್ಳಬಹುದು. ಧೂಳು ಮತ್ತು ಕೊಳೆ ಅಂಟಿಕೊಳ್ಳಬಹುದು. ತಲೆಹೊಟ್ಟು ಸಮಸ್ಯೆ ಹೆಚ್ಚಾಗಬಹುದು.
ರಾತ್ರಿ ಪೂರ್ತಿ ಎಣ್ಣೆ ಬಿಡುವುದು
ಪ್ರತಿಯೊಬ್ಬರಿಗೂ ಇದು ಸೂಕ್ತವಲ್ಲ. ಅತಿಯಾದ ಎಣ್ಣೆ ಕೆಲವರಿಗೆ ಚರ್ಮದ ಉರಿಯೂತ ಅಥವಾ ಮೊಡವೆಗಳಿಗೂ ಕಾರಣವಾಗಬಹುದು.
ಎಣ್ಣೆಯೇ ಸಾಕು ಎಂದು ಭಾವಿಸುವುದು
ಕೇವಲ ಎಣ್ಣೆ ಹಚ್ಚುವುದರಿಂದ ಉತ್ತಮ ಕೂದಲು ಸಿಗುವುದಿಲ್ಲ. ಕೂದಲಿನ ಆರೋಗ್ಯಕ್ಕೆ ಸಮತೋಲಿತ ಆಹಾರ, ಸಾಕಷ್ಟು ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್‌ಗಳು, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಇವೆಲ್ಲವನ್ನೂ ಮಾಡುವುದು ಮುಖ್ಯವಾಗುತ್ತದೆ.
ಹಾಗಾದರೆ ಕೂದಲಿನ ಬೆಳವಣಿಗೆಗೆ ನಿಜವಾಗಿ ಏನು ಬೇಕು?
ತಜ್ಞರ ಪ್ರಕಾರ ಆರೋಗ್ಯಕರ ಅಭ್ಯಾಸಗಳು ಕೂದಲಿನ ಆರೈಕೆ ಮುಖ್ಯವಾಗುತ್ತದೆ. ಹೀಗಾಗ ಪ್ರೋಟೀನ್‌ಯುಕ್ತ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ, ನೆತ್ತಿಯನ್ನು ಸ್ವಚ್ಛವಾಗಿಡಿಸ ಅತಿಯಾದ ಹೀಟ್ ಸ್ಟೈಲಿಂಗ್ ತಪ್ಪಿಸಿ, ಕಠಿಣ ರಾಸಾಯನಿಕ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ, ನಿರಂತರ ಕೂದಲು ಉದುರುವಿಕೆ ಇದ್ದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.
ಮನೆಯಲ್ಲಿ ತಯಾರಿಸಿದ ಎಣ್ಣೆಗಳು ಕೂದಲಿನ ಬೆಳವಣಿಗೆಯನ್ನು ಅದ್ಭುತ ರೀತಿಯಲ್ಲಿ ಹೆಚ್ಚಿಸುವುದಿಲ್ಲ. ಆದರೆ, ನೆತ್ತಿಯ ಆರೋಗ್ಯವನ್ನು ಸುಧಾರಿಸಿ, ಕೂದಲು ತುಂಡಾಗುವುದನ್ನು ಕಡಿಮೆ ಮಾಡಿ, ಕೂದಲನ್ನು ಬಲಿಷ್ಠವಾಗಿಡಲು ಸಹಾಯ ಮಾಡುತ್ತವೆ.
ಆದ್ದರಿಂದ, "ಮನೆಯಲ್ಲಿ ತಯಾರಿಸಿದ ಎಣ್ಣೆ ಹಚ್ಚಿದರೆ ಕೆಲವೇ ದಿನಗಳಲ್ಲಿ ದಟ್ಟ ಮತ್ತು ಉದ್ದ ಕೂದಲು ಬರುತ್ತದೆ" ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಹೇಳಿಕೆಗಳನ್ನು ನಂಬುವ ಬದಲು, ಆರೋಗ್ಯಕರ ಆಹಾರ, ಸರಿಯಾದ ಕೂದಲಿನ ಆರೈಕೆ ಮತ್ತು ವೈದ್ಯರ ಸಲಹೆಯೊಂದಿಗೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ.