ಹಿನ್ನೋಟ 2015

ಮುಂಬೈ ಸ್ಫೋಟ ಅಪರಾಧಿ ಯಾಕೂಬ್ ಮೆಮನ್ ಗೆ ಗಲ್ಲು

Srinivasamurthy VN

ಯಾಕೂಬ್ ಅಬ್ದುಲ್ ರಜಾಕ್ ಮೆಮನ್ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ. ಟಾಡಾ ಪ್ರಕರಣದಲ್ಲಿ 1994ರಲ್ಲಿ ಕಠ್ಮಂಡುವಿನಲ್ಲಿ ಬಂಧಿತನಾಗಿದ್ದ ಯಾಕೂಬ್ ಮೆಮನ್ ಪ್ರಕರಣ ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ವಿಚಾರಣೆ ನಡೆಯಿತಾದರೂ ಅಂತಿಮವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಆತನಿಗೆ ಗಲ್ಲು ಶಿಕ್ಷೆ ಖಾಯಂ ಆಯಿತು. 2015ರ ಜುಲೈ 31 ರಂದು ಮಹಾರಾಷ್ಟ್ರದ ನಾಗಪುರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಯಾಕೂಬ್ ನನ್ನು ಗಲ್ಲಿಗೇರಿಸಲಾಗಿತ್ತು.

ವಿಶೇಷವೆಂದರೆ ಮುಂಬೈ ಸರಣಿ ಸ್ಫೋಟದ ಮೂಲಕ ನೂರಾರು ಮಂದಿಯ ಸಾವಿಗೆ ಕಾರಣನಾಗಿದ್ದ ಯಾಕೂಬ್ ನನ್ನು ಆತನ 54ನೇ ಜನ್ಮ ದಿನದಂದೇ ಗಲ್ಲಿಗೇರಿಸಲಾಗಿತ್ತು.

ಯಾಕೂಬ್ ನನ್ನು ಗಲ್ಲಿಗೇರಿಸುವ ಕೊನೆಕ್ಷಣದ ತನಕವೂ ಆತ ಗಲ್ಲಿಗೇರುವುದು ಅನುಮಾನವಾಗಿತ್ತು. ಏಕೆಂದರೆ ಗಲ್ಲು ಶಿಕ್ಷೆಯನ್ನು ಮುಂದೂಡಬೇಕು ಎಂದು ಕೋರಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಿದ ಸುಪ್ರೀಂ ಕೋರ್ಟ್ ತಡರಾತ್ರಿ 3 ಗಂಟೆಯಲ್ಲಿ ವಿಚಾರಣೆ ನಡೆಸಿ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕವೇ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಯಾಕೂಬ್ ನನ್ನು ಗಲ್ಲಿಗೇರಿಸಲಾಗಿತ್ತು.

ಆದರೆ ಆ ಬಳಿಕ ಭಾರತದಲ್ಲಿ ನಡೆದ ಘಟನೆಗಳು ನಿಜಕ್ಕೂ ಭಾರತೀಯ ಕಾನೂನು ಮತ್ತು ಸುವ್ಯವಸ್ಥೆಯನ್ನೇ ಅಣುಕಿಸುವಂತಿತ್ತು. ಏಕೆಂದರೆ ಬಾಂಬ್ ಸ್ಫೋಟ ನಡೆಸಿ ನೂರಾರು ಮಂದಿಯ ಸಾವಿಗೆ ಕಾರಣನಾಗಿದ್ದ ಅಪರಾಧಿಯೊಬ್ಬನ ಅಂತಿಮ ವಿಧಿವಿಧಾನಕ್ಕೆ ಸಾವಿರಾರು ಮಂದಿ ಸೇರಿದ್ದರು. ಒಂದು ಮೂಲದ ಪ್ರಕಾರ ಯಾಕೂಬ್ ನ ಅಂತಿಮ ಕ್ರಿಯಾವಿಧಿಗೆ ಹೆಚ್ಚು ಜನ ಸೇರಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾರಣ ಎಂದು ಹೇಳಲಾಗಿತ್ತು. ಸ್ವತಃ ದಾವೂದ್ ಮುಂಬೈನಲ್ಲಿರುವ ತನ್ನ ಸಹಚರರಿಗೆ ಸೂಚನೆ ನೀಡಿ, ಯಾಕೂಬ್ ಅಂತ್ಯಕ್ರಿಯೆಯಲ್ಲಿ ಹೆಚ್ಚು ಜನರನ್ನು ಸೇರಿಸುವಂತೆ ಆಜ್ಞೆ ಮಾಡಿದ್ದ ಎಂದು ಹೇಳಲಾಗಿದೆ.

ಇನ್ನು ಇದೇ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯಾಗಿರುವ ಯಾಕೂಬ್ ಸಹೋದರ ಟೈಗರ್ ಮೆಮನ್ ಇಂದಿಗೂ ತಲೆಮರೆಸಿಕೊಂಡಿದ್ದು, ಆತನ  ಬಂಧನಕ್ಕೆ ಬಲೆ ಬೀಸಲಾಗಿದೆ.

SCROLL FOR NEXT