ನೇಪಾಳ ಭೂಕಂಪದಂತಹ ಪ್ರಾಕೃತಿಕ ವಿಕೋಪದಂತೆಯೇ ಜರ್ಮನ್ ವಿಮಾನ ದುರಂತದಂತಹ ಅವಘಡಗಳು ಕೂಡ 2015ರಲ್ಲಿ ಸಾಕಷ್ಟು ನಡೆದಿವೆ. ಇಂತಹ ಪ್ರಮುಖ ದುರಂತಗಳ ಪಟ್ಟಿ ಇಲ್ಲಿದೆ.
ಜರ್ಮನಿ ವಿಮಾನ ದುರಂತ
ಫ್ರಾನ್ಸ್ ನ ಆಲ್ಫ್ ಪರ್ವತ ಶ್ರೇಣಿಯಲ್ಲಿ ಕಳೆದ ಮಾರ್ಚ್ ನಲ್ಲಿ ಜರ್ಮನಿಯ ಜರ್ಮನ್ ವಿಂಗ್ಸ್' ವಿಮಾನ ಪತನವಾಯಿತು. ದುರಂತದಲ್ಲಿ ಸುಮಾರು 150 ಮಂದಿ ಸಾವನ್ನಪ್ಪಿದ್ದರು. ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಸೇರಿ 6 ಸಿಬ್ಬಂದಿ ಮತ್ತು 146 ಪ್ರಯಾಣಿಕರು ಇದ್ದರು. ಕಳೆದ 4 ದಶಕದಲ್ಲಿ ಫ್ರಾನ್ಸ್ ನಲ್ಲಿ ಸಂಭವಿಸಿದ ಅತಿ ಘೋರ ವಿಮಾನ ದುರಂತವಿದು ಎಂದು ಹೇಳಲಾಗುತ್ತಿತ್ತು.
ವಿಮಾನವು ಸ್ಪೇನ್‌ನ ಕರಾವಳಿ ನಗರ ಬಾರ್ಸಿಲೋನಾದಿಂದ ಜರ್ಮನಿಯ ನಗರ ಡ್ಯುಸೆಲ್‌ಡಾರ್ಫ್‌ಗೆ ಹಾರುತ್ತಿತ್ತು. ಮಾರ್ಗ ಮಧ್ಯೆ ‘ಲೆಸ್ ಟ್ರಾಯಿಸ್ ಎವೆಚೆಸ್’ ಎಂದು ಕರೆಯುವ 1,400 ಮೀಟರ್‌ಗಳ ಎತ್ತರದ ಆಲ್ಪ್ಸ್ ಪರ್ವತದಲ್ಲಿ ವಿಮಾನ ಪತನವಾಗಿತ್ತು. ಆಲ್ಫ್ ಪರ್ವತ ಶ್ರೇಣಿ ಹಿಮಪಾತದ ದುರ್ಗಮ ಪ್ರದೇಶವಾಗಿದೆ. ವಿಮಾನ 5,000 ಅಡಿಗೆ ಇಳಿದಿದ್ದಾಗಲೇ ವಿಮಾನದ ಅಪಾಯದ ಸಂದೇಶವನ್ನು ರವಾನಿಸಿತ್ತಾದರೂ, ದುರಂತವನ್ನು ತಪ್ಪಿಸುವಲ್ಲಿ ಪೈಲಟ್ ಗಳು ವಿಫಲರಾದರು.
ಮೆಕ್ಕಾದಲ್ಲಿ ಮರಣ ಮೃದಂಗ
ಸೌದಿ ಅರೇಬಿಯಾದ ಮೆಕ್ಕಾದಲ್ಲಿ 2015ರ ಸೆಪ್ಟೆಂಬರ್ ನಲ್ಲಿ ಮರಣಮೃದಂಗ ಕೇಳಿಬಂದಿತ್ತು. ಲಕ್ಷಾಂತರ ಮಂದಿ ಸೇರಿದ್ದ ಹಜ್ಯಾಅತ್ರೆಯಲ್ಲಿ ಕಾಲ್ತುಳಿತ ಉಂಟಾಗಿ 2,236ರಷ್ಟು ಮಂದಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ್ದವರಲ್ಲಿ 114 ಮಂದಿ ಭಾರತೀಯರು ಇದ್ದರು. ಸುಮಾರು 900ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 650 ಜನ ನಾಪತ್ತೆಯಾದರು. ಇತ್ತೀಚಿನ ವರುಷಗಳಲ್ಲಿ ಹಜ್ ಯಾತ್ರೆಯಲ್ಲಾದ ಭಾರಿ ದೊಡ್ಡ ದುರಂತ ಇದಾಗಿದೆ. ಯಾತ್ರೆ ಆರಂಭವಾಗುವುದಕ್ಕೂ ಮೊದಲೇ ಅಲ್ಲಿನ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು ಆದರೂ, ಕಾಲ್ತುಳಿತ ತಪ್ಪಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.
ಜಗತ್ತನ್ನೇ ನಡುಗಿಸಿದ ಪ್ಯಾರಿಸ್ ಮೇಲಿನ ಉಗ್ರರ ದಾಳಿ
ಇಸಿಸ್ ಹೋರಾಟಗಾರರ ಮೇಲೆ ವಾಯುದಾಳಿ ನಡೆಸಿದ ಫ್ರಾನ್ಸ್ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಇಸಿಸ್ ಉಗ್ರಗಾಮಿಗಳು ಕಳೆದ ನವೆಂಬರ್ 13ರಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಮೇಲೆ ದಾಳಿ ಮಾಡಿದ್ದರು. ಪ್ಯಾರಿಸ್ ಹಲವೆಡೆ ಒಂದೇ ಸಮಯದಲ್ಲಿ ದಾಳಿ ಮಾಡಿದ ಉಗ್ರರು, ಆತ್ಮಹತ್ಯಾ ದಾಳಿ ನಡೆಸಿ 128 ಜನರನ್ನು ಬಲಿ ತೆಗೆದುಕೊಂಡಿತ್ತು. ದಾಳಿಯಲ್ಲಿ 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ 100 ಜನರ ಸ್ಥಿತಿ ಗಂಭೀರವಾಗಿದೆ.
ಪ್ಯಾರಿಸ್ ಜನ ನಿಭಿಡ ಬಟಕ್ಲಾನ್ ಸಂಗೀತ ಸಭಾಂಗಣ, ರಾಷ್ಟ್ರೀಯ ಫುಟ್ ಬಾಲ್ ಕ್ರೀಡಾಂಗಣ ಮತ್ತು ಕೆಲವು ಹೋಟೆಲುಗಳ ಮೇಲೆ ಸರಣಿ ದಾಳಿ ನಡೆಸಿದ್ದ ಉಗ್ರರ ಕೃತ್ಯವನ್ನು ಫ್ರಾನ್ಸ್ ವಿರುದ್ಧದ ‘ಯುದ್ಧ’ ಎಂದೇ ಅಧ್ಯಕ್ಷ ಒಲಾಂಡ್ ಪರಿಗಣಿಸಿದ್ದರು.
ಫ್ರಾನ್ಸ್ ಅಧ್ಯಕ್ಷ ಒಲಾಂಡ್ ಅವರು ಫ್ರಾನ್ಸ್ ಮತ್ತು ಜರ್ಮನಿಯ ನಡುವೆ ಸೌಹಾರ್ದ ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಕ್ರೀಡಾಂಗಣದ ಹೊರಗೆ ದಾಳಿ ನಡೆದಿತ್ತು. ಇದೇ ಕ್ರೀಡಾಂಗಣದಲ್ಲಿ ಅಧ್ಯಕ್ಷ ಒಲಾಂಡ್ ಅವರು ಕೂಡ ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಕನಿಷ್ಠ ಎಂಟು ಉಗ್ರರು ಸೊಂಟಕ್ಕೆ ಬಾಂಬುಗಳನ್ನು ಕಟ್ಟಿಕೊಂಡು ಪ್ಯಾರಿಸ್‌ನ ಬೀದಿಗಳಲ್ಲಿ ರಕ್ತ ಹರಿಯುವಂತೆ ಮಾಡಿದ್ದರು. ಮುಂಬೈ ದಾಳಿಯ ರೀತಿಯಲ್ಲಿಯೇ ಇಸಿಸ್ ಉಗ್ರರು ಈ ದಾಳಿಯನ್ನು ನಡೆಸಿದ್ದರು. ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ಸಭಾಂಗಣದೊಳಕ್ಕೆ ನುಗ್ಗಿದ ನಾಲ್ವರು ಬಂದೂಕುಧಾರಿ ಉಗ್ರರು ಮನಸೋ ಇಚ್ಛೆ ಗುಂಡು ಹಾರಾಟ ನಡೆಸಿದ್ದರು.
ಐ.ಎಸ್ ಉಗ್ರರ ವಿರುದ್ಧ ವಾಯು ದಾಳಿ ನಡೆಸಲು ಒಲಾಂಡ್ ಅವರು ಕೈಗೊಂಡ ನಿರ್ಧಾರದ ವಿರುದ್ಧವೂ ಉಗ್ರರು ಘೋಷಣೆಗಳನ್ನು ಕೂಗುತ್ತಿದ್ದರು. ತುರ್ತು ಕಾರ್ಯಾಚರಣೆ ಕೈಗೊಂಡ ಪ್ಯಾರಿಸ್ ಭದ್ರತಾ ಪಡೆಗಳು ದಾಳಿ ನಡೆಸಿದ ಎಲ್ಲ ಉಗ್ರರನ್ನು ಹೊಡೆದುರುಳಿಸಿದರು. ಆ ಬಳಿಕ ಫ್ರಾನ್ಸ್ ಸರ್ಕಾರ ಲಿಬಿಯಾದಲ್ಲಿ ಕೈಗೊಂಡಿದ್ದ ವಾಯುದಾಳಿಯನ್ನು ತೀವ್ರಗೊಳಿಸಿದೆ. ಪ್ರಸ್ತುತ ಫ್ರಾನ್ಸ್ ಗೆ ರಷ್ಯಾ, ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ ನಾನಾ ದೇಶಗಳು ಸಾಥ್ ನೀಡುತ್ತಿವೆ.
ಕೇರಳದಲ್ಲಿ ಬೋಟ್ ಮುಳುಗಡೆ, 6 ಮಂದಿ ಸಾವು
ಪ್ರಯಾಣಿಕ ಬೋಟ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೋಟ್ ಮುಳುಗಡೆಯಾಗಿ 6 ಮಂದಿ ಸಾವನ್ನಪ್ಪಿದ ದುರಂತ ಕಳೆದ ಆಗಸ್ಟ್ 26 ಕೇರಳದಲ್ಲಿ ನಡೆದಿತ್ತು. ಕೇರಳದ ಕೋಚ್ಚಿನ್ ನಲ್ಲಿ ಈ ಘಟನೆ ನಡೆದಿದ್ದು, ಸುಮಾರು 30 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕ ಬೋಟ್ ಮೀನುಗಾರಿಕಾ ಬೋಟ್ ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸಮುದ್ರ ಮಧ್ಯದಲ್ಲಿಯೇ ಪ್ರಯಾಣಿಕರ ಬೋಟ್ ಮುಳುಗಡೆಯಾಗಿತ್ತು. ಹೀಗಾಗಿ ನೀರಿನಲ್ಲಿ 6 ಮಂದಿ ಪ್ರಯಾಣಿಕರು ಮುಳುಗಿ ಸಾವನ್ನಪ್ಪಿದ್ದರು. ತುರ್ತು ಕಾರ್ಯಾಚರಣೆ ನಡೆಸಿದ್ದ ಕೊಚ್ಚಿನ್ ಕರಾವಳಿ ಪಡೆ ಇತರೆ 20 ಮಂದಿ ಪ್ರಯಾಣಿಕರನ್ನು ರಕ್ಷಿಸಿದ್ದರು. ಕೊಚ್ಚಿನ ನಲ್ಲಿ 3 ದಶಕಗಳ ಹಿಂದೆ ಇದೇ ರೀತಿಯ ಪ್ರಯಾಣಿಕ ಬೋಟ್ ವೊಂದು ಮುಳುಗಿ ದುರಂತಕ್ಕೀಡಾಗಿತ್ತು.
ಗೋದಾವರಿ ಪುಷ್ಕರಣಿ ಕಾಲ್ತುಳಿತ: 30ಕ್ಕೂ ಹೆಚ್ಚು ಸಾವು
ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿರುವ ಗೋದಾವರಿ ಪುಷ್ಕರ ಮೇಳದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕಳೆದ ಜುಲೈನಲ್ಲಿ ನಡೆದ ಈ ಪವಿತ್ರ ಪಷ್ಕರ ಮೇಳ 12 ವರ್ಷಕ್ಕೊಮ್ಮೆ ಬರುವ ದಕ್ಷಿಣ ಕುಂಭಮೇಳವೆಂದೇ ಪ್ರಸಿದ್ದವಾಗಿತ್ತು. ಹೀಗಾಗಿ ಈ ಮೇಳದಲ್ಲಿ ಪಾಲ್ಗೊಳ್ಳಲು ಮತ್ತು ಪವಿತ್ರ ಸ್ನಾನ ಮಾಡಲು ವಿವಿಧ ರಾಜ್ಯಗಳ ಲಕ್ಷಾಂತರ ಪ್ರಜೆಗಳು ಆಗಮಿಸಿದ್ದರು. ಆದರೆ ಈ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಅವಘಡದ ಬಗ್ಗೆ ದಿಗ್ಭ್ರಮೆ ವ್ಯಕ್ತ ಪಡಿಸಿದ್ದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪರಿಹಾರದ ಉಸ್ತುವಾರಿಯನ್ನು ಖುದ್ದು ತಾವೇ ವಹಿಸಿಕೊಂಡಿದ್ದರು, ಅಲ್ಲದೆ ಮೃತ ಕುಟುಂಬಗಳಿಗೆ ತಲಾ 10 ಲಕ್ಷ ರು. ಘೋಷಣೆ ಮಾಡಿದ್ದರು,