ಟ್ರಂಪ್-ಪುಟಿನ್ ಮುತ್ತಿನ ಪ್ರಸಂಗ
ರಷ್ಯಾದ ಮಾಜಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕದ ಅಧ್ಯಕ್ಷೀಯ ಪ್ರಬಲ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಪರಸ್ಪರ ಚುಂಬಿಸಿಕೊಂಡಿರುವ ಚಿತ್ರ 2016ರ ಮೇ ತಿಂಗಳಲ್ಲಿ ವೈರಲ್ ಆಗಿತ್ತು. ಲಿಥುವೇನಿಯಾದ ವಿಲ್ನಿಯಸ್ ನಗರದ ರೆಸ್ಟೋರೆಂಟ್ ಮುಂಭಾಗದಲ್ಲಿ ಕಲಾವಿದ ಮಿಂಡೋಗಸ್ ಬೊನಾನು ಚಿತ್ರಿಸಿದ್ದ ಚಿತ್ರವದು. ಪುಟಿನ್ ಹಾಗೂ ಟ್ರಂಪ್ ಚುಂಬಿಸಿಕೊಳ್ಳುವ ಬೃಹದಾಕಾರದ ಉಬ್ಬು ಚಿತ್ರ ಗೋಚರಿಸುತ್ತದೆ. ಉಭಯ ದೇಶಗಳ ಸಂಬಂಧ ಸುಧಾರಿಸಬೇಕು ಎನ್ನುವ ಭಾವನೆಯಲ್ಲಿ ಕಲಾವಿದ ಮಿಂಡೋಗಸ್ ಬೊನಾನು ಈ ಚಿತ್ರ ಬಿಡಿಸಿದ್ದನಂತೆ. ಈತನ ಈ ಕಾರ್ಯಕ್ಕೆ ರೆಸ್ಟೋರೆಂಟ್ನ ಸಹ ಮಾಲೀಕ ಡೊಮಿನ್ಯುಕಾಸ್ ಸೆಕುಸ್ಕಾಸ್ ಬೆನ್ನೆಲುಬಾಗಿ ನಿಂತಿದ್ದ, ಕಲಾವಿದನ ಈ ಸೃಷ್ಟಿ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಅಲ್ಲದೆ ಕಲಾವಿದನ ಅದ್ಭುತ ಪೇಟಿಂಗ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು.
ಚುನಾವಣೆಗೂ ಮುನ್ನ ನ್ಯೂಯಾರ್ಕ್ ಪಾರ್ಕ್ ನಲ್ಲಿ ಟ್ರಂಪ್ ಬೆತ್ತಲೆ ಬೊಂಬೆ!
ಡೊನಾಲ್ಡ್ ಟ್ರಂಪ್ ಪ್ರಸ್ತುತ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರಬಹುದು. ಆದರೆ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅವರ ವಿರೋಧಿ ಬಣಗಳು ಟ್ರಂಪ್ ವಿರುದ್ಧ ಹೂಡದ ಅಸ್ತ್ರಗಳೇ ಇಲ್ಲ ಎನ್ನಬಹುದು. ಚುನಾವಣೆಹೂ ಮುನ್ನ ಟ್ರಂಪ್ ಅವರ ಬೆತ್ತಲೆ ಬೊಂಬೆಗಳನ್ನು ನ್ಯೂಯಾರ್ಕ್ ನಗರದ ಪಾರ್ಕ್ ಗಳಲ್ಲಿ ಪ್ರತಿಷ್ಟಾಪಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಗಿತ್ತು. ನ್ಯೂಯಾರ್ಕ್ ಮ್ಯಾನ್ ಹಟನ್ ನಲ್ಲಿ ಯೂನಿಯನ್ ಪಾರ್ಕ್ ನಲ್ಲಿ "ದ ಎಂಪರರ್ ಹ್ಯಾಸ್ ನೋ ಬಾಲ್ಸ್" ಎಂಬ ಅಡಿಬರಹ ಹೊಂದಿದ್ದ ಬೊಂಬೆಗಳನ್ನು ಇಡಲಾಗಿತ್ತು. ಕ್ಯಾಲಿಫೋರ್ನಿಯಾ ಮೂಲದ ಇಂಡಿಕ್ಲೈನ್ ಎಂಬ ಸಂಘಟನೆ ಈ ಬೊಂಬೆಗಳನ್ನು ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್, ಸೀಟ್ಲ್ ಮತ್ತು ಕ್ಲೀವ್ ಲ್ಯಾಂಡ್ ನಲ್ಲಿ ಬೊಂಬೆಗಳನ್ನು ಇಟ್ಟು ಪ್ರತಿಭಟನೆ ನಡೆಸಿತ್ತು.
ಕರ್ನಾಟಕ-ಕೇರಳ ಗಡಿಯಲ್ಲಿ ಏಲಿಯನ್ ಪತ್ತೆ
ಮಲೇಷ್ಯಾದ ಬೊರ್ನಿಯೊ ಪ್ರಾಂತ್ಯದಲ್ಲಿ ಆಹಾರವನ್ನರಿಸಿ ಗ್ರಾಮಕ್ಕೆ ಬಂದು ಮನುಷ್ಯರ ಕೈಗೆ ಸಿಕ್ಕಿ ಹಲ್ಲೆಗೊಳಗಾಗಿದ್ದ ಕರಡಿ ಸುದ್ದಿ ಸಾಮಾಜಿಕ ಜಾಲತಾಣಗಲ್ಲಿ ಬೇರೆಯದೇ ಚಿತ್ರಣ ಪಡೆದು ಸುದ್ದಿಯಾಗಿತ್ತು. ಕರ್ನಾಟಕ-ಕೇರಳ ಗಡಿಯಲ್ಲಿ ಏಲಿಯನ್ ಪತ್ತೆಯಾಗಿದ್ದು, ಆ ಮಾರ್ಗದಲ್ಲಿ ಸಂಚರಿಸುವ ಮನುಷ್ಯರನ್ನು ತಿಂದುಹಾಕುತ್ತಿದೆ ಎಂದೆಲ್ಲಾ ಸುದ್ದಿ ಹರಡಿಸಲಾಗಿತ್ತು. ಆದರೆ ಇದು ಏಲಿಯನ್ ಅಲ್ಲ. ಬದಲಿಗೆ ಬೊರ್ನಿಯೋ ಅರಣ್ಯ ಪ್ರದೇಶದಲ್ಲಿ ಚರ್ಮ ರೋಗದಿಂದ ಬಳಲುತ್ತಿದ್ದ ಕರಡಿ ಎಂದು ಬಳಿಕ ತಿಳಿಯಿತು.
ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ
ಚಿತ್ರಮಂದಿಗಳಲ್ಲಿ ರಾಷ್ಟ್ರಗೀತೆ ಹಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಚರ್ಚೆಗೆ ಸುಪ್ರೀಂ ಕೋರ್ಟ್ ಡಿಸೆಂಬರ್ ನಲ್ಲಿ ತೆರೆ ಎಳೆದಿತ್ತು. ಮಲ್ಟಿಪ್ಲೆಕ್ಸ್ ಗಳೂ ಸೇರಿದಂತೆ ದೇಶಾದ್ಯಂತ ಇರುವ ಎಲ್ಲ ಚಿತ್ರಮಂದಿರಗಳಲ್ಲಿ ಚಿತ್ರ ಪ್ರಸಾರಕ್ಕೂ ಮುನ್ನ ರಾಷ್ಟ್ರಗೀತೆ ಹಾಡಬೇಕು ಎಂದು ಮಹತ್ವದ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ಈ ತೀರ್ಪು ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿತ್ತು. ಅಂತೆಯೇ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ.
ಎಲ್ಲಿದ್ದೀರಾ ಯಶ್!
ಇಡೀ ಕರ್ನಾಟಕ ಪ್ರತಿಭಟನೆಯ ಬೇಗುದಿ ಬೇಯುವಂತೆ ಮಾಡಿದ್ದ ಕಾವೇರಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರವಾಗಿ ನಟ ಯಶ್ ವಿರುದ್ಧ ಖಾಸಗಿ ಮಾಧ್ಯಮವೊಂದರ ಆರೋಪ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಕನ್ನಡ ಚಿತ್ರರಂಗ ಪ್ರಮುಖರು ಅಮೆರಿಕದಲ್ಲಿ ನಡೆಯುತ್ತಿದ್ದ ಅಕ್ಕ ಸಮ್ಮೇಳನಕ್ಕೆ ಹಾಜರಾಗಿದ್ದರು. ಇತ್ತ ಸುಪ್ರೀ ಕೋರ್ಟ್ ತೀರ್ಪು ನೀಡಿದ್ದರೂ ನಟರು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಸುದ್ದಿ ವಾಹಿನಿಗಳಲ್ಲಿ ಎಲ್ಲಿದ್ದೀರಾ ನಟರೇ ಮತ್ತು ಎಲ್ಲಿದ್ದೀರಾ ಯಶ್ ಎಂಬ ಶೀರ್ಷಿಕೆಯಲ್ಲಿ ವರದಿಗಳು ಪ್ರಸಾರವಾಗಿದ್ದವು. ಅಕ್ಕ ಸಮ್ಮೇಳನದ ಬಳಿಕ ದೇಶಕ್ಕೆ ವಾಪಸಾಗಿದ್ದ ನಟ ಯಶ್ ಅವರನ್ನು ಮಾತನಾಡಿಸಿದ್ದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರು ಕಾವೇರಿ ವಿಚಾರವಾಗಿ ಪ್ರಶ್ನಿಸಿದ್ದಾಗ ಯಶ್ ವಾಹಿನಿಗಳ ರೈತಪರ ಕಾಳಜಿಯನ್ನು ಪ್ರಶ್ನಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೇ ಕರ್ನಾಟಕದಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಚೀನಾ ವಸ್ತು ನಿಷೇಧದ ಕುರಿತ ಆನ್ ಲೈನ್ ಜಾಗೃತಿ
ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಚೀನಾ ವಸ್ತುಗಳನ್ನು ನಿಷೇಧಿಸಬೇಕು ಎಂಬ ಜಾಗೃತಿ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಬೆಂಬಲ ಪಡೆಯತೊಡಗಿತ್ತು. ಇದಕ್ಕೆ ಇಂಬು ನೀಡುವಂತೆ ಕಳೆದ ಅಕ್ಟೋಬರ್ ತಿಂಗಳಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚೀನಾದ ಪಟಾಕಿಗಳ ಮಾರಾಟದಲ್ಲಿ ಗಣನೀಯ ಪ್ರಮಾಣದ ಕುಸಿತವಾಗಿತ್ತು. ಕಳೆದ ಬಾರಿಯ ದೀಪಾವಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ದೀಪಾವಳಿಯಲ್ಲಿ ಚೀನಾ ವಸ್ತುಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದವು. ಗೋವಾದ ಪ್ರಮುಖ ಮಾರುಕಟ್ಟೆ ಪಣಜಿಯಲ್ಲಿ ಪ್ರತೀ ವರ್ಷ ಜಗಮಗಿಸುತ್ತಿದ್ದ ಮೇಡ್ ಇನ್ ಚೀನಾ ದೀಪಗಳು ಈ ಬಾರಿ ಗ್ರಾಹಕರ ಮನಗೆಲ್ಲುವಲ್ಲಿ ವಿಫಲವಾಗಿದ್ದು, ದೇಶೀ ನಿರ್ಮಿತ ವಸ್ತುಗಳತ್ತ ಗ್ರಾಹಕರು ಹೆಚ್ಚಾಗಿ ಒಲವು ತೋರಿಸಿದ್ದಾರೆ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿತ್ತು.
ಪ್ರತಿಭಟನೆ ಮೀಸಲಾತಿ ಬಗ್ಗೆ ಸಾಮ್ನಾ ವ್ಯಂಗ್ಯಚಿತ್ರ
ಮಹಾರಾಷ್ಟ್ರದ ಕೋಪರಾಡಿಯಲ್ಲಿನ "ಹತ್ಯಾಚಾರ" ಪ್ರಕರಣ ಸಂಬಂಧ ಮರಾಠಿಗರು ನಡೆಸಿದ್ದ ಮೌನ ಪ್ರತಿಭಟನಾ ರ್ಯಾಲಿ ಕುರಿತಂತೆ ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯ ಚಿತ್ರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಮೂಕ್ ಮೋರ್ಚಾ ಹೆಸರಿನ ರ್ಯಾಲಿಯನ್ನು ಸಾಮ್ನಾ ಪತ್ರಿಕೆಯಲ್ಲಿ ಮೂಕಾ ಮೋರ್ಚಾ (ಮುತ್ತಿನ ಮೋರ್ಚಾ) ಎಂದು ವ್ಯಂಗ್ಯ ಮಾಡಲಾಗಿತ್ತು. ಪತ್ರಿಕೆಯ ವಿರುದ್ಧ ಮಹಾರಾಷ್ಟ್ರದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಕೆಲ ಪ್ರತಿಭಟನಾಕಾರರು ಪತ್ರಿಕೆಯನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸಾಮ್ನಾ ಪತ್ರಿಕೆ ವ್ಯಂಗ್ಯ ಚಿತ್ರವನ್ನು ತೆಗೆದು ಹಾಕಿತ್ತು.
ಜೈಲಿನಿಂದ ಪರಾರಿಯಾದ ಸಿಮಿ ಉಗ್ರರ ಎನ್ ಕೌಂಟರ್
ಕಳೆದ ಅಕ್ಟೋಬರ್ 31ರಂದು ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ಪರಾರಿಯಾಗಿದ್ದ 8 ಮಂದಿ ಸಿಮಿ ಉಗ್ರರನ್ನು ಅದೇ ದಿನ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿತ್ತು. ಜೈಲಿನಲ್ಲಿ ಮುಖ್ಯಪೇದೆಯನ್ನು ಕೊಂದು ಆತನಿಂದ ಬಂದೂಕು ತೆಗೆದುಕೊಂಡು ಪರಾರಿಯಾಗಿದ್ದ ಉಗ್ರರನ್ನು ಭೋಪಾಲ್ ಹೊಲವಲಯದ ಇಂಟ್ ಖೇಡಿ ಗ್ರಾಮದ ಬಳಿ ಎನ್ ಕೌಂಟರ್ ಮಾಡಲಾಗಿತ್ತು. ಆದರೆ ಎನ್ ಕೌಂಟರ್ ಮಾಡಿದ ಪರಿ ಹಾಗೂ ಆ ಬಳಿಕ ಬಿಡುಗಡೆಯಾಗಿದ್ದ ಎನ್ ಕೌಂಟರ್ ವಿಡಿಯೋ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಪ್ರಕರಣವನ್ನು ಹಲವರು ನಕಲಿ ಎನ್ ಕೌಂಟರ್ ಎಂದು ಟೀಕಿಸಿದ್ದರು. ಈ ಸಂಬಂಧ ಹಲವು ಅಧಿಕಾರಿಗಳು ಅಮಾನತಾಗಿದ್ದರು. ಅಲ್ಲದೆ ಈ ಪ್ರಕರಣ ಸಂಸತ್ ನ ಉಭಯ ಸದನಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಪಂಜಾಬ್ ಜೈಲಿನಿಂದ ಖಲಿಸ್ತಾನ ಉಗ್ರ ಪರಾರಿ, ಬಂಧನ
ಭೋಪಾಲ್ ಜೈಲಿನಿಂದ ಸಿಮಿ ಉಗ್ರರು ಪರಾರಿಯಾದ ಮಾದರಿಯಲ್ಲೇ ನವೆಂಬರ್ 27ರ ರಾತ್ರಿ ಪಂಜಾಬ್ ನ ನಭಾ ಜೈಲಿನಿಂದ ಕೆಲ ಉಗ್ರಗಾಮಿಗಳು ಪರಾರಿಯಾಗಿದ್ದರು. ಈ ಪೈಕಿ ಖಲಿಸ್ತಾನ ಲಿಬರೇಷನ್ ಫ್ರೆಂಟ್ ಉಗ್ರ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಕೂಡ ಸೇರಿದ್ದ. ಭೋಪಾಲ್ ಪ್ರಕರಣದಿಂದ ಎಚ್ಚೆತ್ತಿದ್ದ ಪಂಜಾಬ್ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಪರಾರಿಯಾದ 24 ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದರು. ರಾಜಧಾನಿ ದೆಹಲಿಯಲ್ಲಿ ಕ್ಷಿಪ್ರಕಾರ್ಯಾಚರಣೆ ನಡೆಸಿದ ಪಂಜಾಬ್ ಮತ್ತು ದೆಹಲಿ ಪೊಲೀಸರು ಹರ್ಮಿಂದರ್ ಸಿಂಗ್ ಮಿಂಟೂನನ್ನು ಬಂಧಿಸಿದ್ದರು. 49 ವರ್ಷ ವಯಸ್ಸಿನ ಹರ್ಮಿಂದರ್ ಸಿಂಗ್ ಮಿಂಟೂ ವಿರುದ್ಧ 10ಕ್ಕೂ ಹೆಚ್ಚು ದುಷ್ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದ್ದು, 2014ರಲ್ಲಿ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಖಲಿಸ್ತಾನ ಲಿಬರೇಷನ್ ಫ್ರಂಟ್ ಸಂಘಟನೆಯ ಹೆಸರಲ್ಲಿ ಈತ ಹಲವು ದುಷ್ಕೃತ್ಯಗಳಲ್ಲಿ ಪಾಲ್ಗೊಂಡಿದ್ದ. ಅಲ್ಲದೆ ಈತ ಪಾಕಿಸ್ತಾನದ ಐಎಸ್ ಐನೊಂದಿಗೂ ನಿಕಟ ಸಂಪರ್ಕ ಹೊಂದಿದ್ದ.