ಮೋದಿ - ಕೇಜ್ರಿವಾಲ್ - ರಾಹುಲ್ ಗಾಂಧಿ 
ಹಿನ್ನೋಟ 2022

ರಾಜಕೀಯ ಹಿನ್ನೋಟ 2022: ಪಂಜಾಬ್ ನಲ್ಲಿ ಆಪ್ ಗೆ ಅಧಿಕಾರ, ಗುಜರಾತ್ ನಲ್ಲಿ ಮತ್ತೆ ಅರಳಿದ ಕಮಲ, ಖರ್ಗೆ ಕಾಂಗ್ರೆಸ್ ಅಧ್ಯಕ್ಷ

2022 ಹಲವು ಪ್ರಮುಖ ರಾಜಕೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ರಾಜಕೀಯ ಪಂಡಿತರನ್ನೂ ದಿಗ್ಭ್ರಮೆಗೊಳಿಸುವಂತಹ ಹಲವು ಘಟನೆಗಳು ದೇಶದಲ್ಲಿ ನಡೆದಿವೆ!

ಬೆಂಗಳೂರು: 2022 ಹಲವು ಪ್ರಮುಖ ರಾಜಕೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ರಾಜಕೀಯ ಪಂಡಿತರನ್ನೂ ದಿಗ್ಭ್ರಮೆಗೊಳಿಸುವಂತಹ ಹಲವು ಘಟನೆಗಳು ದೇಶದಲ್ಲಿ ನಡೆದಿವೆ!

2022ರಲ್ಲಿ ಪಂಜಾಬ್, ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆಗಳು ಸಹ ನಡೆದಿವೆ. ಕೆಲವು ಕಡೆ ಜನಾದೇಶ ಆಡಳಿತ ಪಕ್ಷವನ್ನು ಬದಲಾಯಿಸಿದೆ ಇನ್ನು ಕೆಲವೆಡೆ ಉಳಿಸಿಕೊಂಡಿದೆ. ಕೆಲವು ರಾಜಕೀಯ ಪಕ್ಷಗಳಿಗೆ ಈ ವರ್ಷ ಹೊಸ ಅವಕಾಶಗಳನ್ನು ತಂದಿದ್ರೆ ಮತ್ತೆ ಕೆಲವರಿಗೆ ಅದು ಇನ್ನಷ್ಟು ಕಠಿಣವಾಗಿ ಕೆಲಸ ಮಾಡಬೇಕೆನ್ನುವ ಸಂದೇಶವನ್ನು ನೀಡಿದೆ.

ಪಂಜಾಬ್ ನಲ್ಲಿ ಆಪ್ ಗೆ ಅಧಿಕಾರ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಈ ವರ್ಷದ ಆರಂಭದಲ್ಲಿ ನಡೆದ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಮತ್ತು ವರ್ಷದ ಅಂತ್ಯದಲ್ಲಿ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ.

ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯಿಂದ ಅತ್ಯಂತ ಕಿರಿಯ ರಾಷ್ಟ್ರೀಯ ಪಕ್ಷ ಅಧಿಕಾರ ಕಿತ್ತುಕೊಂಡಿದೆ. ಬಿಜೆಪಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡರೆ ಎಎಪಿ 134 ಸ್ಥಾನಗಳನ್ನು ಗೆದ್ದಿದೆ.

ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದೆ. ಮೋದಿ ಅಲೆಯ ಮೇಲೆ ಬಿಜೆಪಿ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಹಿಂದಿನ ಕಾಂಗ್ರೆಸ್ ದಾಖಲೆಯನ್ನು ಧೂಳಿಪಟ ಮಾಡಿದೆ. 1985ರಲ್ಲಿ ಮಾಧವಸಿಂಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್‌ನ 149 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿತ್ತು.

1995 ರಿಂದ ಗುಜರಾತ್‌ನಲ್ಲಿ ಸತತ ಗೆಲುವು ಸಾಧಿಸುತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ), ಈ ಬಾರಿ ಸತತ ಏಳನೇ ಅವಧಿಗೆ ಅಧಿಕಾರಕ್ಕೇರುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಹಿಮಾಚಲ ಪ್ರದೇಶದಲ್ಲಿ ಕೈಗೆ ಅಧಿಕಾರ
ಮತ್ತೊಂದು ಕಡೆ ಆಡಳಿತರೂಢ ಬಿಜೆಪಿ ಗುಡ್ಡಗಾಡು ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಸೋಲು ಅನುಭವಿಸಿದೆ. ಮೋದಿ ಮ್ಯಾಜಿಕ್ ಇಲ್ಲಿ ಕೆಲಸ ಮಾಡಿಲ್ಲ. ಬಿಜೆಪಿ ಈ ಬಾರಿಯ ಹಿಮಾಚಲ ಪ್ರದೇಶ ಚುನಾವಣೆಯನ್ನು ಸಂಪ್ರದಾಯ ಬದಲಾಗುತ್ತಿದೆ (ರಿವಾಜು ಬದಲಾವಣೆಯಾಗುತ್ತಿದೆ) ಎಂಬ ಘೋಷ ವಾಕ್ಯದಲ್ಲಿ ಎದುರಿಸಿತ್ತು. ಆದರೆ ಅದು ಘೋಷ ವಾಕ್ಯಕ್ಕೆ ಸೀಮಿತವಾಗಿ ಕಾಂಗ್ರೆಸ್ 5 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೇರಿದೆ.

ಭಾರತ್ ಜೋಡೋ ಯಾತ್ರೆ
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದು, ಸುಮಾರು 3500 ಕಿ.ಮೀ ದೂರವನ್ನು ಕ್ರಮಿಸುವ ಮೂಲಕ ಜನವರಿ 26 ರಂದು ಕಾಶ್ಮೀರದಲ್ಲಿ ಕೊನೆಗೊಳಿಸಲು ನಿರ್ಧರಿಸಿದ್ದಾರೆ.

ವಾಸ್ತವವಾಗಿ, 2023ರ ಫೆಬ್ರುವರಿ 20 ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಕಾಂಗ್ರೆಸ್ ಈ ಯಾತ್ರೆಯನ್ನು ಕೊನೆಗೊಳಿಸಲಿದೆ ಎನ್ನಲಾಗಿತ್ತು. ಆದರೆ, ಈಗ ಹೊಸ ಯೋಜನೆಯ ಅಡಿಯಲ್ಲಿ, ರಾಹುಲ್ ಗಾಂಧಿ ಅವರು ಗಣರಾಜ್ಯ ದಿನದಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ತಮ್ಮ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊನೆಗೂ ಕಾಂಗ್ರೆಸ್ ಗೆ ಚುನಾಯಿತ ಅಧ್ಯಕ್ಷ ನೇಮಕ
ಕೊನೆಗೂ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಈ ವರ್ಷ ಚುನಾವಣೆ ನಡೆಸಿದ್ದು, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖರ್ಗೆ ಅವರ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸ್ಪರ್ಧಿಸಿದ್ದರು.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಎರಡು ಹಂತದಲ್ಲಿ ಮೇಕೆದಾಟು ಪಾದಯಾತ್ರೆ, ಭಾರತ್‌ ಜೋಡೋ ಯಾತ್ರೆ, ಸಿದ್ದರಾಮೋತ್ಸವದ ಮೂಲಕ ಶಕ್ತಿ ಪ್ರದರ್ಶನ ಮಾಡಿದರೆ, ಬಿಜೆಪಿ ಸತತವಾಗಿ ಜನಸಂಕಲ್ಪ ಯಾತ್ರೆಗಳನ್ನು ಸಂಘಟಿಸಿ ಮುಂದಿನ ಚುನಾವಣೆಗೆ ತಯಾರಿ ನಡೆಸಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೂ ಸೆಡ್ಡು ಹೊಡೆದಿರುವ ಜೆಡಿಎಸ್‌ ಜನತಾ ಜಲಧಾರೆ, ಪಂಚರತ್ನ ಯಾತ್ರೆ ಮೂಲಕ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT