ಸೌಂದರ್ಯ, ವಿದ್ಯೆ , ಬುದ್ಧಿಯ ಅಧಿದೇವತೆಯಾದ ಮಹಾಲಕ್ಷ್ಮಿಯ ಎಂಟು ಅವತಾರಗಳು
ಆದಿ ಲಕ್ಷ್ಮಿ
ಭೃಗು ಋಷಿಯ ಪುತ್ರಿ ಹಾಗೂ ಶ್ರೀ ವಿಷ್ಣುವಿನ ಪತ್ನಿ ಈಕೆ. ವೈಕುಂಠದಲ್ಲಿ ವಿಷ್ಣುವಿನ ಜತೆ ವಾಸಮಾಡುವ ಈಕೆ ವಿಷ್ಣುವಿನ ತೊಡೆಯಲ್ಲಿ ಕುಳಿತಿರುತ್ತಾಳೆ. ಆಕೆ ತನ್ನ ಪತಿಯನ್ನು ಆರೈಕೆ ಮಾಡುವ ಮೂಲಕ ಇಡೀ ಜಗತ್ತನ್ನೇ ರಕ್ಷಿಸುವ ಹೊಣೆ ಹೊತ್ತಿರುತ್ತಾಳೆ ಎಂಬ ನಂಬಿಕೆಯಿದೆ. ಚತುರ್ಭುಜೆಯಾದ ಲಕ್ಷ್ಮಿ ಒಂದು ಕೈಯಲ್ಲಿ ಕಮಲ, ಇನ್ನೊಂದರಲ್ಲಿ ಬಿಳಿ ಪತಾಕೆ ಮತ್ತು ಇನ್ನೆರಡು ಕೈಯಲ್ಲಿ ಅಭಯ ಮುದ್ರೆ ಹಾಗೂ ವರದ ಮುದ್ರೆಯನ್ನು ಧರಿಸಿರುತ್ತಾಳೆ.
ಧನ ಲಕ್ಷ್ಮಿ
ಧನ ಅಂದರೆ ಸಂಪತ್ತು. ಸಂಪತ್ತಿನ ಅಧಿದೇವತೆ ಇವಳು. 6 ಕೈಗಳನ್ನು ಹೊಂದಿರುವ ಈಕೆ ಕೆಂಪು ಸಾರಿ ಉಟ್ಟು ತನ್ನ ಕೈಗಳಲ್ಲಿ ಶಂಖ, ಕುಂಭ, ಚಕ್ರ, ಬಿಲ್ಲು ಬಾಣ, ಕಮಲವನ್ನು ಹಿಡಿದುಕೊಂಡಿದ್ದಾಳೆ. 6 ನೇ ಕೈಯಲ್ಲಿ ಅಭಯ ಮುದ್ರೆಯಿದ್ದು, ಚಿನ್ನದ ನಾಣ್ಯಗಳು ಅಲ್ಲಿಂದ ಹರಿಯುತ್ತಿರುತ್ತವೆ.
ಧಾನ್ಯ ಲಕ್ಷ್ಮಿ
ಮನುಷ್ಯನ ಮನಸ್ಸು ಮತ್ತು ದೇಹಕ್ಕೆ ಬೇಕಾದ ಧವಸ ಧಾನ್ಯಗಳನ್ನು ನೀಡುವ ಅಧಿ ದೇವತೆ ಈಕೆ. ಹಸಿರು ವಸ್ತ್ರ ತೊಟ್ಟ ಈಕೆಗೆ 8 ಕೈಗಳಿಂದ್ದು ಅದರಲ್ಲಿ ಎರಡು ಕಮಲ, ರಾಜದಂಡ, ಬತ್ತ, ಕಬ್ಬು, ಬಾಳೆಹಣ್ಣಿನ ಗೊನೆ ಹಿಡಿದ್ದು, ಇನ್ನರೆಡು ಕೈಗಳಲ್ಲಿ ಅಭಯ ಮುದ್ರೆ ಮತ್ತು ವರದ ಮುದ್ರೆಯನ್ನು ಹೊಂದಿರುತ್ತಾಳೆ.
ಗಜ ಲಕ್ಷ್ಮಿ
ಸಮದ್ರ ಮಥನ ವೇಳೆ ಹುಟ್ಟಿದ ಸಾಗರದ ಪುತ್ರಿಯೇ ಗಜ ಲಕ್ಷ್ಮಿ. ಈಕೆ ಸಂಪತ್ತು, ಅಧಿಕಾರ ಹಾಗೂ ಶ್ರೇಯಸ್ಸನ್ನು ನೀಡುವವಳು. ನಾಲ್ಕು ಕೈಗಳಿರುವ ಈಕೆ ಕಮಲದಲ್ಲಿ ಕೆಂಪು ಸೀರೆಯುಟ್ಟು ಎರಡು ಕೈಗಳಲ್ಲಿ ಕಮಲ, ಇನ್ನೆರಡರಲ್ಲಿ ಅಭಯ ಮುದ್ರೆ ಮತ್ತು ವರದ ಮುದ್ರೆಯನ್ನು ಹೊಂದಿದ್ದಾಳೆ. ಅವಳ ಪಕ್ಕದಲ್ಲಿ ಎರಡು ಆನೆಗಳು ಆಕೆಗೆ ನೀರು ಪ್ರೋಕ್ಷಣೆ ಮಾಡುತ್ತಿರುತ್ತವೆ.
ಸಂತಾನ ಲಕ್ಷ್ಮಿ
ಸಂತಾನವನ್ನು ಕರುಣಿಸುವಾಕೆ ಇವಳು. ಆರೋಗ್ಯವಂತ ಹಾಗೂ ದೀರ್ಘಾಯುಸ್ಸುವುಳ್ಳ ಮಕ್ಕಳನ್ನು ಪಡೆಯಲು ಈಕೆಯನ್ನು ಪೂಜಿಸಲಾಗುತ್ತದೆ. ಆರು ಕೈಗಳನ್ನು ಹೊಂದಿರುವ ಈಕೆ ಎರಡು ಕೈಗಳಲ್ಲಿ ಕುಂಭಗಳನ್ನು, ಖಡ್ಗ, ಗುರಾಣಿ ಮತ್ತು ಇನ್ನೆರಡು ಕೈಗಳಲ್ಲಿ ಅಭಯ ಮುದ್ರೆಯನ್ನು ಹೊಂದಿದ್ದಾಳೆ. ವಿಶೇಷವಾಗಿ ಈಕೆಯ ಮಡಿಲಲ್ಲಿ ಮಗುವಿದೆ, ಆ ಮಗು ಕಮಲವನ್ನು ಹಿಡಿದಿದೆ.
ವೀರ ಲಕ್ಷ್ಮಿ
ಹೆಸರೇ ಸೂಚಿಸುವಂತೆ ಆಕೆ ಧೈರ್ಯ, ಶಕ್ತಿ ನೀಡುವವಳು. ಎಂಟು ಕರಗಳನ್ನು ಹೊಂದಿರುವ ಈಕೆ ಕೆಂಪು ಬಣ್ಣದ ಸೀರೆಯುಟ್ಟಿರುತ್ತಾಳೆ . ಕೈಯಲ್ಲಿ ಚಕ್ರ, ಶಂಖ, ಬಾಣ, ಖಡ್ಗ, ಚಿನ್ನದ ಬಿಲ್ಲೆ ಕೆಲವೊಮ್ಮೆ ಪುಸ್ತಕ ಮತ್ತು ಇನ್ನೆರಡು ಕೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹೊಂದಿದ್ದಾಳೆ .
ವಿದ್ಯಾಲಕ್ಷ್ಮಿ
ವಿದ್ಯೆಯನ್ನು ನೀಡುವ ಅಧಿ ದೇವತೆ ಈಕೆ. ಕಮಲದಲ್ಲಿ ಆಸೀನಳಾಗಿರುವ ವಿದ್ಯಾ ಲಕ್ಷ್ಮಿ ಅಥವಾ ಸರಸ್ವತಿ ಬಿಳಿ ಸೀರೆಯುಟ್ಟು ಎರಡು ಕೈಗಳಲ್ಲಿ ಕಮಲ ಹಾಗೂ ಇನ್ನೆರಡು ಕೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹೊಂದಿದ್ದಾಳೆ.
ವಿಜಯ ಲಕ್ಷ್ಮಿ
ವಿಜಯವನ್ನು ಕಲ್ಪಿಸುವ ಈಕೆಯನ್ನು ಜಯ ಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಎಂಟು ಕರಗಳಿರುವ ಈಕೆ ಕೆಂಪು ಸಾರಿಯುಟ್ಟು ಕಮಲದಲ್ಲಿ ಆಸೀನಳಾಗಿರುತ್ತಾಳೆ. ಕೈಯಲ್ಲಿ ಚಕ್ರ , ಶಂಖ, ಗುರಾಣಿ, ಕುಣಿಕೆ, ಕಮಲ ಹಾಗು ಇನ್ನೆರಡು ಕೈಗಳಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹೊಂದಿರುತ್ತಾಳೆ.