ಮಹಾಶಿವರಾತ್ರಿಯು ಹಿಂದೂಗಳ ಹಬ್ಬಗಳಲೆಲ್ಲಾ ಪ್ರಮುಖವಾಗಿದೆ. ಮಹಾ ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಬಹುಳ/ಕೃಷ್ಣ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ರಾತ್ರಿಯಲ್ಲಿ ಇರಬೇಕು. ಮಾಹಾ ಶಿವರಾತ್ರಿಯನ್ನು ಶಿವ ಭಕ್ತರು ಕಳೆಯುವ ರೀತಿ ಅನನ್ಯವಾದುದು. ಮಹಾಶಿವರಾತ್ರಿ ಹಬ್ಬವು ಬಹಳ ಮಟ್ಟಿಗೆ ಇತರ ಎಲ್ಲಾ ಹಬ್ಬಗಳಿಗಿಂತ ಭಿನ್ನವಾದುದಾಗಿದೆ. ಏಕೆಂದರೆ, ಅಂದು ಭಕ್ಷ್ಯ- ಭೋಜ್ಯ ಗಳನ್ನು ತಯಾರಿಸಲಾಗುವುದಿಲ್ಲ. ಉಪವಾಸ ವ್ರತವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು. ಮನಸ್ಸನ್ನು ಭಕ್ಷ್ಯ-ಭೋಜ್ಯಗಳೆಡೆ, ಅನಗತ್ಯ ವೈಭವದ ಕಡೆ ಹರಿಸದೆ ದೃಢ ನಿರ್ಧಾರದಿಂದ ಶಿವನ ಪೂಜೆ- ಪುರಸ್ಕಾರಗಳನ್ನು ಕೈಗೊಂಡು ಆಚಾರಶೀಲರಾಗಿ ಸೇವೆ ಗೈಯಲಾಗುವುದು. ಇಡೀ ರಾತ್ರಿ ಸ್ವಲ್ಪವೂ ನಿದ್ದೆ ಮಾಡದೆ ಶಿವ ಧ್ಯಾನದಲ್ಲಿ ತಲ್ಲೀನರಾಗಿ ಕಾಲದ ಸದ್ಬಳಕೆ ಮಾಡುವುದು.
ಮಹಾ ಶಿವರಾತ್ರಿ ದಿನದಂದು ಮಾಡಬೇಕಾದು ಪೂಜಾ ವಿಧಿವಿಧಾನ ಹೀಗಿದೆ...
ಬೇಕಾದ ಪೂಜಾ ಸಾಮಾಗ್ರಿಗಳು...
ರಂಗೋಲಿ, ಮಣೆ, ಮಂಟಪ, ದೇವರ ವಿಗ್ರಹ ಅಥ ದೇವರ ಪಟ, ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ, ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು, ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಶ್ರೀಗಂಧ, ಊದಿನ ಕಡ್ಡಿ, ವಿಭೂತಿ, ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ, ಪಂಚಾಮೃತ- (ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ) ವೀಳ್ಯದ ಎಲೆ, ಅಡಿಕೆ, ಹಣ್ಣು, ತೆಂಗಿನ ಕಾಯಿ ನೈವೇದ್ಯ(ಪಾಯಸ, ಅಕ್ಕಿ ತಂಬಿಟ್ಟು ಇತ್ಯಾದಿ) ಕರ್ಪೂರ, ಆರತಿ ತಟ್ಟೆ, ಹೂಬತ್ತಿ,
ಮಹಾ ಶಿವರಾತ್ರಿ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆ. ಬಿಲ್ವ ಪತ್ರೆ ಈಶ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ತೆಗೆದುಕೊಳ್ಳಬಹುದು.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡಬೇಕು.
ಸಂಕಲ್ಪ ಅಂದರೆ ನಿರ್ಧಾರ, ನಿರ್ಣಯ ಅಥವಾ ಚಿತ್ತ ಎಂದು. ಈ ದಿನ ಶಿವರಾತ್ರಿ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದನ್ನು ಸಂಕಲ್ಪ ಎಂದು ಹೇಳಲಾಗುತ್ತದೆ.
ಧ್ಯಾನ - ಶಿವನನ್ನು ಭಕ್ತಿಯಿಂದ ಧ್ಯಾನ ಮಾಡಿ ಆಹ್ವಾನ ಮಾಡುವುದು.
ಷೋಡಶೋಪಚಾರದಿಂದ ಪೂಜೆ ಅರ್ಥ ಹೀಗಿದೆ. ಷೋಡಶ ಅಂದರೆ 16. ಹದಿನಾರು ಬಗೆಯಿಂದ ಶಿವನಿಗೆ ಉಪಚಾರ ಮಾಡಿ ಎಂದರ್ಥ. ಆ 16 ಬಗೆ ಹೀಗಿದೆ...
1. ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
2. ಆಸನ- ಅಂದರೆ ಕುಳಿತುಕೊಳ್ಳುವ ಜಾಗ. ಶಿವಲಿಂಗ ಅಥವ ಶಿವ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
3. ಪಾದ್ಯ ಅಂದರೆ ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4. ಅರ್ಘ್ಯ- ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5. ಆಚಮನ- ಕುಡಿಯುವುದಕ್ಕೆ ನೀರು ಕೊಡುವುದು.
6. ಸ್ನಾನ- ನೀರು ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
7. ವಸ್ತ್ರ- ದೇವರಿಗೆ ಉಡುಪು ಧರಿಸುವುದು. ಗೆಜ್ಜೆ ವಸ್ತ್ರಗಳನ್ನು ದೇವರಿಗೆ ಇಡುವುದು.
8. ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9. ಪುಷ್ಪ ಮಾಲ- ಹೂವು, ಬಿಲ್ವ ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10. ಅರ್ಚನೆ/ಅಷ್ಟೋತ್ತರ- ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು
11. ಧೂಪ- ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು
12. ದೀಪ- ದೇವರ ಮುಂದೆ ದೀಪ ಬೆಳಗಿಸುವುದು
13. ನೈವೇದ್ಯ, ತಾಂಬೂಲ- ದೇವರಿಗೆ ವಿಧ ವಿಧ ಭಕ್ಷ್ಯಗಳನ್ನು ಅರ್ಪಿಸುವುದು. ವೀಳೆಯ, ಅಡಿಕೆ, ತೆಂಗಿನ ಕಾಯಿ ತಾಂಬೂಲ ಇಡಬೇಕು. ಫಲಗಳನ್ನು ದೇವರ ಮುಂದೆ ಇಡಬೇಕು.
14. ನೀರಾಜನ- ಕರ್ಪುರದಿಂದ ಮಂಗಳಾರತಿ ಮಾಡಬೇಕು
15. ನಮಸ್ಕಾರ- ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು
16. ಪ್ರಾರ್ಥನೆ- ಶಿವನಲ್ಲಿ ತಮ್ಮ ಇಷ್ಟಗಳನ್ನು ನಡೆಸಿಕೊಡು ಎಂದು ಅರಿಕೆ ಅಥವಾ ಪ್ರಾರ್ಥನೆ ಮಾಡಬೇಕು. ಪೂಜೆಯ ನಂತರ ದೇವರು ಅನುಗ್ರಹಿಸಿರುವ ಅರಿಶಿನ ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು. ಹೀಗೆ ಕ್ರಮವಾಗಿ ಶಿವನ ಪೂಜೆ ಮಾಡಬೇಕು.
ಹಾಲು, ಮೊಸರು, ತುಪ್ಪ, ಬಾಳೆಹಣ್ಣು, ಹಲಸು ಮೊದಲಾದ ಹಣ್ಣುಗಳು, ಗೋಡಂಬಿ, ದ್ರಾಕ್ಷಿ, ಉತ್ತುತ್ತೆ ಮೊದಲಾದ ವಿವಿಧ ಪದಾರ್ಥಗಳನ್ನು ಅಭಿಷೇಕಕ್ಕಾಗಿ ಬಳಸಬಹುದು. ಈ ಎಲ್ಲಾ ಪದಾರ್ಥಗಳನ್ನು ಶಿವಲಿಂಗದ ಮೇಲೆ ವಿಶೇಷ ರೀತಿಯಲ್ಲಿ ಮೆತ್ತಿ ಅಲಂಕರಿಸಿ, ಪೂಜಿಸಿ, ನಂತರ ಪ್ರಸಾದ ರೂಪದಲ್ಲಿ ಸ್ವೀಕರಿಸಬಹುದು.
ಬಿಲ್ವ, ಕಮಲ, ದಾಸವಾಳ, ಪುನ್ನಾಗ, ಕಣಿಗಲೆ, ತುಳಸಿ, ಎಕ್ಕದೆಲೆ, ಉತ್ತರಾಣಿ, ರುದ್ರ ಜಟೆ, ದವನ, ದತ್ತೂರಿ, ತುಂಬೆ, ಗರಿಕೆ, ನಂದಿ ಬಟ್ಟಲು, ಪಗಡೆ ಹೂ, ಬಸವನ ಪಾದದ ಹೂ, ಅಕ್ಷತೆ ಕಾಳುಗಳಲ್ಲಿ ಅರ್ಚನೆ ಮಾಡಬಹುದು.
ಶಿವ ರಾತ್ರಿ ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆ ಮಾಡಬೇಕು. ಜಾವ(ಯಾಮ) - ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ, ಮೂರು ಗಂಟೆ ಕಾಲ ಎಂದರ್ಥ. ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕು.
ಮಹಾಶಿವರಾತ್ರಿ ವ್ರತದ ಮಹಿಮೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ, ಹುಟ್ಟು, ಸಾವುಗಳಿಂದ ಭಗವಂತನ ಚಿರ ಸಾನ್ನಿಧ್ಯದ ಕಡೆಗೆ, ಬದುಕಿನ ನಿರಂತರ ಜಂಜಾಟದಿಂದ ಶಿವನ ಪಾದಗಳಲ್ಲಿ ಲೀನವಾಗುವುದೇ ಈ ಮಹಾಶಿವರಾತ್ರಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos