ಮಹಾಶಿವರಾತ್ರಿ

ದಕ್ಷಿಣ ಕನ್ನಡದಲ್ಲಿ ಜಾಗರಣೆಗೆ ಎಳನೀರು ಕದಿಯುವ ಆಟ

Sumana Upadhyaya

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿವರಾತ್ರಿ ದಿನ ಕಳೆದು ಮಾರನೆ ದಿನ ಯಾರ ಮನೆಯ ತೆಂಗಿನ ಮರದಿಂದ ಎಷ್ಟು ಎಳನೀರು ಕದ್ದು ಹೋಗಿದೆ? ಯಾರ ಮನೆಯ ಗೇಟು ಮುರಿದುಕೊಂಡು ಹೋಗಿ ಪಕ್ಕದ ಮನೆಯಲ್ಲೋ ಇಲ್ಲವೋ ಊರಿನ ಶಾಲೆಯ ಗೇಟಿನಲ್ಲೋ, ಅಂಗಡಿಯ ಪಕ್ಕವೋ ಇಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುವುದನ್ನು ನೀವು ಕೇಳುತ್ತೀರಿ. ಶಿವರಾತ್ರಿ ಮುಗಿದರೆ ಮಾರನೇ ದಿನ ಇಲ್ಲಿ ಜನಸಾಮಾನ್ಯರು ಆಡಿಕೊಳ್ಳುವ ಮಾತು ಇದು. ಏಕೆಂದರೆ ಇಲ್ಲಿ ಈ ಸಂಪ್ರದಾಯವಿದೆ.

ಶಿವರಾತ್ರಿ ದಿನ ರಾತ್ರಿ ಹೊತ್ತು ನಿದ್ದೆ ಮಾಡದೆ ಜಾಗರಣೆ ಕುಳಿತು ಶಿವನ ಧ್ಯಾನದಲ್ಲಿ ಕೂರಬೇಕೆಂಬ ಸಂಪ್ರದಾಯವಿದೆ. ರಾತ್ರಿಯಿಡೀ ನಿದ್ದೆ ಮಾಡದೆ ಕುಳಿತುಕೊಂಡು ಸಮಯ ಕಳೆಯಬೇಕಲ್ಲವೇ? ಅದಕ್ಕೆ ಯುವಕರು ಗುಂಪು ಕಟ್ಟಿಕೊಂಡು ಮಧ್ಯರಾತ್ರಿಯಾದ ಮೇಲೆ ಬೇರೆಯವರ ಮನೆಯ ತೋಟಕ್ಕೆ ಲಗ್ಗೆಯಿಡುತ್ತಾರೆ. ಅಲ್ಲಿಂದ ಎಳನೀರು, ಬಾಳೆಗೊನೆ, ತರಕಾರಿ ಇತ್ಯಾದಿಗಳನ್ನು ಕದ್ದುಕೊಂಡು ಹೋಗುತ್ತಾರೆ. ಊರಿನ ಶಾಲೆಯ, ಅಂಗಡಿಗಳ ಗೇಟನ್ನು ಮುರಿದು ಬೇರೆಲ್ಲಿಗೋ ತೆಗೆದುಕೊಂಡು ಹೋಗಿ ಇಡುತ್ತಾರೆ. ಹೀಗೆ ಸಣ್ಣಪುಟ್ಟ ತೊಂದರೆ, ಉಪಟಳ, ಪುಂಡಾಟಗಳನ್ನು ಯುವಕರ ತಂಡ ಮಾಡುತ್ತದೆ. ಇದು ಯಾರು ಮಾಡಿದ್ದು ಎಂದು ಮನೆಯವರಿಗೆ, ಅಂಗಡಿ ಮಾಲೀಕರಿಗೆ ಗೊತ್ತಾಗುವುದಿಲ್ಲ. ಯಾರಿಗೂ ಸಿಕ್ಕಿಬೀಳದಂತೆ ಕದಿಯುವುದು ಯುವಕರ ಚಾಕಚಕ್ಯತೆ.

ಕರಾವಳಿಯಲ್ಲಿ ಶಿವರಾತ್ರಿ ಆಚರಣೆ ತುಂಬಾ ವಿಶಿಷ್ಟ ಮತ್ತು ವಿಭಿನ್ನ. ಹಗಲಿಡೀ ಉಪವಾಸ ಕುಳಿತು  ಧ್ಯಾನ, ಶಿವಪೂಜೆ, ಭಜನೆಗಳಲ್ಲಿ ನಿರತರಾಗಿ ತಡರಾತ್ರಿಯಾದ ಮೇಲೆ ಆಹಾರ ಸೇವಿಸುತ್ತಾರೆ. ಹಲವರು ರಾತ್ರಿಯಿಡೀ ಜಾಗರಣೆ ಕೂರುತ್ತಾರೆ. ಉಳಿದ ಹಬ್ಬ ಹರಿದಿನಗಳಲ್ಲಿ ಉಪವಾಸ ದಿನ ಅನ್ನ ತಿನ್ನಬಾರದು ಎಂಬ ಸಂಪ್ರದಾಯವಿರುವಂತೆ ಶಿವರಾತ್ರಿ ದಿನ ಕೂಡ ಅನ್ನ ಸೇವಿಸುವುದಿಲ್ಲ.

ಗೆಣಸಾಲೆ: ಶಿವರಾತ್ರಿಯಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆಹಾರ ಗೆಣಸಾಲೆ.ಅಕ್ಕಿಯನ್ನು ಚೆನ್ನಾಗಿ ಗಟ್ಟಿಯಾಗಿ ರುಬ್ಬಿ ಬಾಳೆ ಎಲೆ ಮೇಲೆ ಹಿಟ್ಟನ್ನು ಸವರುತ್ತಾರೆ. ಅದರ ಮೇಲೆ ಬೆಲ್ಲ ಮತ್ತು ಕಾಯಿತುರಿ, ಏಲಕ್ಕಿ ಪುಡಿ ಹಾಕಿ ಇಡ್ಲಿ ಮಾಡುವ ಪಾತ್ರೆಯಲ್ಲಿ ಅಥವಾ ಕುಕ್ಕರ್ ನಲ್ಲಿ ಬೇಯಿಸುತ್ತಾರೆ. ಇದುವೇ ಕರಾವಳಿ ಜಿಲ್ಲೆಯ ಶಿವರಾತ್ರಿ ದಿನದ ಆಹಾರ. ಅದು ಬಿಟ್ಟರೆ ಶಿವನಿಗೆ ಪ್ರಿಯವಾದ ಪಾಯಸ, ಸಿಹಿ ತಿನಿಸು ಮಾಡಿ ನೈವೇದ್ಯ ಮಾಡಿ ಪೂಜಿಸಿ ರಾತ್ರಿ ಸೇವಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಮೊದಲಾದ ಪ್ರಮುಖ ದೇವಸ್ಥಾನಗಳಲ್ಲಿ ಶಿವರಾತ್ರಿ ದಿನ ವಿಶೇಷ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರುತ್ತದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಬೆಳಗ್ಗೆ ಮಹಾರುದ್ರಾಭಿಷೇಕ, ಶತಸೀಯಾಳಾಭಿಷೇಕ, ಮಹಾಪೂಜೆ, ರಾತ್ರಿ ರಥೋತ್ಸವ, ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ ಇತ್ಯಾದಿಗಳನ್ನು ದೇವಾಲಯಗಳಲ್ಲಿ ನೋಡಬಹುದು.ಬಿಲ್ವಪತ್ರೆ, ಎಳನೀರು, ಹಾಲು ಮತ್ತು ಶುದ್ಧ ನೀರನ್ನು ಶಿವಲಿಂಗದ ಮೇಲೆ ಅರ್ಪಿಸಲಾಗುತ್ತದೆ.

SCROLL FOR NEXT