ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆ ಎಂಬುದು ರಾಜಕೀಯ ಗಿಮಿಕ್ಕಾ? ಅಥವಾ ಇದರಿಂದ ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೆ ಏನಾದರೂ ಕಷ್ಟವಾಗಲಿದೆಯೇ?
ಹೀಗೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಎಫ್‌ಡಿಐನಿಂದಾಗಿ ಮುಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಭಾರತ ಪ್ರವೇಶಿಸಲಿವೆ. ಇದರಿಂದ ಭಾರತದಲ್ಲಿರುವ ಸಣ್ಣ ವ್ಯಾಪಾರಿಗಳಿಗೆ ಅಡ್ಡ ಪರಿಣಾಮವಾಗುವುದಿಲ್ಲವೇ ಎಂದು ಅದು ಪ್ರಶ್ನಿಸಿದೆ. ನ್ಯಾ. ಆರ್.ಎಂ. ಲೋಧಾ ಮತ್ತು ಎಸ್.ಜೆ. ಮುಖೋಪಾಧ್ಯಾಯ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಸಂಬಂಧ ವಿಚಾರಣೆ ನಡೆಸಿದೆ. ಇನ್ನು ಮೂರು ವಾರಗಳಲ್ಲಿ ಈ ಕುರಿತಂತೆ ವಿವರಣೆ ನೀಡುವಂತೆ ಅದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ನೀಡಿರುವುದರ ಹಿಂದೆ ಬೇರೆ ಯಾವ ರೀತಿಯ ಉದ್ದೇಶವೇನಾದರೂ ಇದೆಯೇ ಎಂದು ಪ್ರಶ್ನಿಸಿರುವ ಅದು, ಇದೊಂದು ರಾಜಕೀಯ ತಂತ್ರವಾ ಎಂದೂ ಕೇಳಿದೆ. ಯಾವುದೇ ಕಾರಣಕ್ಕೂ ಜನರ ಹಿತಾಸಕ್ತಿ ಬಲಿಕೊಡಬಾರದು ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.