ನವದೆಹಲಿ: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದು ಸರಿ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಹಿಂದೂ ಭಯೋತ್ಪಾದನೆ ಬಗ್ಗೆ ಸರ್ಕಾರದ ಬಳಿ ದಾಖಲೆಗಳಿವೆ. ಇವುಗಳನ್ನು ಇಟ್ಟುಕೊಂಡೇ ಶಿಂಧೆ ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ತನಿಖಾ ಸಂಸ್ಥೆಗಳು ಅಗತ್ಯ ದಾಖಲೆಗಳನ್ನು ನೀಡಿವೆ. ಹೀಗಾಗಿ ಅವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಬೆಂಬಲ ಸೂಚಿಸಿದ್ದಾರೆ.
ಉಗ್ರವಾದಕ್ಕೆ ಬಣ್ಣವಾಗಲಿ, ಧರ್ಮವಾಗಲಿ ಇಲ್ಲ. ಅದು ಎಲ್ಲ ಕಡೆಗಳಲ್ಲೂ ಇದೆ ಎಂಬುದು ಸಚಿವರ ವಾದ.
ಸದ್ಯ ಬಿಜೆಪಿ ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದು, ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಶಿಂಧೆ ಅವರ ವಜಾಕ್ಕೆ ಒತ್ತಾಯಿಸುತ್ತಿದೆ ಎಂದೂ ಹೇಳಿದ್ದಾರೆ.
ಆದರೆ ಬಿಜೆಪಿ, ಆರ್‌ಎಸ್‌ಎಸ್ ಮಂಡಿಸುತ್ತಿರುವ ವಾದದಲ್ಲಿ ಯಾವುದೇ ಹುರುಳಿಲ್ಲ. ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಎಲ್ಲಾ ದಾಖಲೆ ಹೊಂದಿದೆ ಎಂದಿದ್ದಾರೆ. ಆದರೆ ಯಾವ ದಾಖಲೆಗಳು ಎಂಬ ಬಗ್ಗೆ ಅವರು ಯಾವುದೇ ಉತ್ತರ ನೀಡಿಲ್ಲ.
ಪಾಕ್‌ನ ಜೆಯುಡಿ ಉಗ್ರ ಹಫೀಜ್ ಸಯೀದ್ ಶಿಂಧೆ ಹೇಳಿಕೆಗೆ ಶ್ಲಾಘನೆ ನೀಡಿರುವ ಬಗ್ಗೆ ಮಾತನಾಡಿದ ಅವರು, ಯಾವುದೇ ಧರ್ಮಾಧಾರಿತ ಭಯೋತ್ಪಾದನೆ ದೇಶದ ಹಿತಾಸಕ್ತಿಗೆ ಮಾರಕ ಎಂದರು.
ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಮತ್ತು ಕೇಂದ್ರ ಸಚಿವ ವಿ. ನಾರಾಯಣಸ್ವಾಮಿ ಕೂಡ ಶಿಂಧೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿಂದೂ ಉಗ್ರವಾದವಾಗಲಿ, ಮುಸ್ಲಿಂ ಉಗ್ರವಾದವಾಗಲಿ, ಯುಪಿಎ ಸರ್ಕಾರ ಎಲ್ಲಾ ರೀತಿಯ ಭಯೋತ್ಪಾದನೆಯನ್ನೂ ಖಂಡಿಸುತ್ತದೆ ಎಂದಿದ್ದಾರೆ.
ಶಿಂಧೆ ವಜಾ ಮಾಡಿ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ನಮ್ಮ ಬಳಿ ಸಾಕ್ಷ್ಯಗಳಿವೆ: ಆರ್.ಕೆ.ಸಿಂಗ್
ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ನೆರವಿಗೆ ಕೇಂದ್ರ ಗೃಹ ಸಚಿವಾಲಯ ನಿಂತಿದೆ. ಆರ್‌ಎಸ್‌ಎಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸುಮಾರು 10 ಮಂದಿ ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಗಳಿವೆ ಎಂದು ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಹೇಳಿದ್ದಾರೆ. ಸಂಝೋತಾ ಎಕ್ಸ್‌ಪ್ರೆಸ್, ಮೆಕ್ಕಾ ಮಸೀದಿ, ದರ್ಗಾ ಷರೀಫ್ ಸ್ಫೋಟಗಳಲ್ಲಿ ಇವರ ಕೈವಾಡ ಇದೆ ಎಂದು ಅವರು ಹೇಳಿದ್ದಾರೆ.
ಸಂಝೋತಾ ಎಕ್ಸ್‌ಪ್ರೆಸ್ ಮತ್ತು ಅಜ್ಮೇರ್ ಷರೀಫ್ ದರ್ಗಾ ಸ್ಫೋಟಕ್ಕೆ ಸುನೀಲ್ ಜೋಶಿಯೇ ಕಾರಣ. ಈತ 1990ರಿಂದ 2003ರ ವರೆಗೆ ಆರ್‌ಎಸ್‌ಎಸ್‌ನ ಕಾರ್ಯಕರ್ತನಾಗಿದ್ದ. ಈತ ವಿಚಾರಣೆ ವೇಳೆಯಲ್ಲೇ ಸತ್ತಿದ್ದಾನೆ ಎಂದಿದ್ದಾರೆ.
ಸಂದೀಪ್ ಡಾಂಗೆ(ಪರಾರಿ) ಕೂಡ ಒಬ್ಬ ಆರೋಪಿ.
ಈತ ಇಂದೋರ್‌ನಲ್ಲಿ 1990ರಿಂದ 2006ರವರೆಗೆ ಆರ್‌ಎಸ್‌ಎಸ್ ಪ್ರಚಾರಕ್ ಆಗಿ ಕೆಲಸ ಮಾಡುತ್ತಿದ್ದ ಎಂದು ಸಿಂಗ್ ಹೇಳಿದ್ದಾರೆ. ಲೋಕೇಶ್ ಶರ್ಮಾ ಎಂಬಾತ ಆರ್‌ಎಸ್‌ಎಸ್ ಕಾರ್ಯಸೇವಕ್ ಆಗಿ, ಸ್ವಾಮಿ ಆಸೀಮಾನಂದ ಆರ್‌ಎಸ್‌ಎಸ್‌ನ ವಿಭಾಗವಾದ ವನವಾಸಿ ಕಲ್ಯಾಣ ಪರಿಷದ್ ಸದಸ್ಯ, ರಾಜೇಂದರ್ ಅಲಿಯಾಸ್ ಸಮುಂದರ್ ಆರ್‌ಎಸ್‌ಎಸ್‌ನ ವರ್ಗ ವಿಸ್ತಾರಕ್, ಮುಕೇಶ್ ವಾಸನಿ ಎಂಬಾತ ಆರ್‌ಎಸ್‌ಎಸ್ ಕಾರ್ಯಕರ್ತನಾಗಿ, ದೇವೇಂದರ್ ಗುಪ್ತಾ ಆರ್‌ಎಸ್‌ಎಸ್ ಪ್ರಚಾರಕ್ ಆಗಿ, ಚಂದ್ರಶೇಖರ್ ಲೇವೇ ಕೂಡ ಪ್ರಚಾರಕ್ ಆಗಿ, ಕಮಲ್ ಚೌಹಾಣ್ ಎಂಬಾತ ಕಾರ್ಯಕರ್ತನಾಗಿ, ರಾಮ್ಜಿ ಕಲ್‌ಸಂಗ್ರಾ ಎಂಬಾತ ಆರ್‌ಎಸ್‌ಎಸ್‌ನ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಅಲ್ಪಸಂಖ್ಯಾತ ಆಯೋಗ ಪುರ್ನಾ, ಪರ್ಭಾನಿ, ನಾಂದೇಡ್ ಸ್ಫೋಟಗಳ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಿಕೊಡಬೇಕು ಎಂದು ಶಿಂಧೆ ಅವರನ್ನು ಆಗ್ರಹಿಸಿದೆ.
ಬಿಜೆಪಿ ಆಕ್ರೋಶ
ಖುರ್ಷಿದ್ ಅವರು ಶಿಂಧೆಯನ್ನು ಸಮರ್ಥಿಸಿಕೊಂಡಿದ್ದನ್ನು ಬಿಜೆಪಿ ಆಕ್ಷೇಪಿಸಿದೆ. ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಖುರ್ಷಿದ್ ವಿರುದ್ಧ ಕಿಡಿಕಾರಿದ್ದಾರೆ.
ಭಾರತದ ಹೋರಾಟಕ್ಕೆ ಸೋಲು
ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶಿಂಧೆ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎಂದಿದ್ದಾರೆ. ಶಿಂಧೆ ಹೇಳಿಕೆ ಆಂತರಿಕ ವಿಷಯ
ಶಿಂಧೆ ಹೇಳಿಕೆಗೂ ಪಾಕ್‌ಗೂ ಯಾವುದೇ ಸಂಬಂಧವಿಲ್ಲ. ಅದು ಭಾರತದ ಆಂತರಿಕ ವಿಷಯ ಎಂದು ಪಾಕಿಸ್ತಾನ ಹೇಳಿದೆ. ಹೀಗಾಗಿ ಈ ಸಂಬಂಧ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದೂ ಹೇಳಿದೆ.
ಹೇಳಿಕೆ ಒಪ್ಪಲಸಾಧ್ಯ
ಶಿಂಧೆ ಹೇಳಿಕೆ ಒಪ್ಪುವಂಥದ್ದಲ್ಲ ಎನ್‌ಸಿಪಿ ಹೇಳಿದೆ. ಇಂಥ ಹೇಳಿಕೆ ನೀಡುವುದು ತಪ್ಪಷ್ಟೇ ಅಲ್ಲ, ಅಗತ್ಯವೂ ಇಲ್ಲವೆಂದು ಪಕ್ಷದ ಪ್ರಧಾನ ಕಾರ್ಯದರ್ಶಿ ತ್ರಿಪಾಠಿ ಹೇಳಿದ್ದಾರೆ.
ಕಾಂಗ್ರೆಸ್ ದೂರ ದೂರ...
ಇಷ್ಟೆಲ್ಲಾ ಬೆಳವಣಿಗೆಗಳಾದರೂ ಕಾಂಗ್ರೆಸ್ ಮಾತ್ರ ತುಟಿ ಬಿಚ್ಚಿಲ್ಲ. ಶಿಂಧೆ ಮತ್ತು ಅವರನ್ನು ಸಮರ್ಥಿಸಿಕೊಂಡವರಿಂದ ಪಕ್ಷ ದೂರ ಉಳಿದಿದೆ. ಹಿಂದೂ ಭಯೋತ್ಪಾದನೆ ಇಲ್ಲವೇ ಇಲ್ಲ ಎಂದು ಪಕ್ಷದ ವಕ್ತಾರ ಜನಾರ್ದನ ದ್ವಿವೇದಿ ಹೇಳಿದ್ದಾರೆ. ಕಾಂಗ್ರೆಸ್‌ನ ಯಾರೊಬ್ಬರೂ ಈ ರೀತಿ ಮಾತನಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಭಯೋತ್ಪಾದನೆಗೆ ಯಾವುದೇ ಧರ್ಮವನ್ನು ಥಳಕು ಹಾಕಬಾರದು ಎಂದಿರುವ ಅವರು, ಭಯೋತ್ಪಾದನೆಗೆ ಬಣ್ಣವಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಎಂದಿಗೂ ಕೇಸರಿ ಭಯೋತ್ಪಾದನೆ ಅಥವಾ ಹಿಂದೂ ಭಯೋತ್ಪಾದನೆ ಎಂಬ ಪದಗಳನ್ನೇ ಬಳಸಿಲ್ಲ ಎಂದು ಅವರು ಹೇಳಿದ್ದಾರೆ. ಶಿಂಧೆ ಅವರ ಬಾಯಿಯಿಂದ ಹಿಂದೂ ಉಗ್ರವಾದ ಎಂಬ ಪದ ಬರಬಾರದಿತ್ತು. ಕೆಲವೊಮ್ಮೆ ಉದ್ದೇಶವಿಲ್ಲದೆಯೂ ಇಂಥ ಪದಗಳು ಬಂದು ಬಿಡುತ್ತವೆ. ನಿಜವಾದ ಕಾಂಗ್ರೆಸ್ಸಿಗನ್ಯಾರೂ ಇಂಥ ಪದ ಬಳಸಲ್ಲ ಎಂದು ಹೇಳಿದ್ದಾರೆ. ಕೇಸರಿ ಎಂಬ ಪದವನ್ನು ನಾವು ಬಳಸುವುದಿಲ್ಲ ಎಂದಿರುವ ಅವರು ಕಾಂಗ್ರೆಸ್ ಪಕ್ಷ ಮತ್ತು ಭಾರತದ ಧ್ವಜದಲ್ಲಿ ಈ ಬಣ್ಣವಿದೆ. ನಾವೇನಾದರೂ ಕೇಸರಿ ಭಯೋತ್ಪಾದನೆ ಎಂದು ಬಳಸಿದಲ್ಲಿ ಅದು ದೇಶಕ್ಕೆ ಮಾಡುವ ಅನ್ಯಾಯವಾಗುತ್ತದೆ ಎಂದಿದ್ದಾರೆ.