ಜನಪ್ರತಿನಿಧಿಗಳ ಅನರ್ಹತೆ ಅಸಾಧ್ಯ
ನವದೆಹಲಿ: ದೆಹಲಿ ಗ್ಯಾಂಗ್ರೇಪ್ ಪ್ರಕರಣದ ನಂತರ ಕಠಿಣ ಕಾನೂನಿಗಾಗಿ ರಚಿಸಲಾಗಿದ್ದ ನ್ಯಾ. ಜೆ.ಎಸ್. ವರ್ಮಾ ಸಮಿತಿಯ ಕೆಲ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅತ್ಯಾಚಾರ ಆರೋಪಗಳಿದ್ದರೂ ಸಹ ಶಾಸಕರು ಮತ್ತು ಸಂಸದರ ಸದಸ್ಯತ್ವವನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಕೆಲ ಕಾನೂನಿನ ತೊಡಕುಗಳಿವೆ ಎಂದು ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಹೇಳಿದ್ದಾರೆ.
ಸಮಿತಿ ಶಿಫಾರಸುಗಳ ಸಂಬಂಧ ಮಾತನಾಡಿದ ಅವರು, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿಯಲ್ಲಿರುವ ಕಡೆಯಲ್ಲಿ ಮತ್ತು ಶಾಸಕರ ಹಾಗೂ ಸಂಸದರ ಮೇಲಿನ ಆರೋಪಗಳ ಸಂಬಂಧ ಶಿಫಾರಸುಗಳನ್ನು ಜಾರಿ ಮಾಡಲು ಕೆಲ ಕಾನೂನಿನ ತೊಡಕುಗಳಿವೆ ಎಂದಿದ್ದಾರೆ.
ಆದರೆ ಅಪರಾಧಿಗಳು ಎಂದು ಸಾಬೀತಾದ ನಂತರ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ, ಹಾಗಂತ ಆರೋಪಗಳು ಕೇಳಿ ಬಂದ ತಕ್ಷಣವೇ ಅವರನ್ನು ಅನರ್ಹಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಶೀಘ್ರ ಸಂಸದೀಯ ಸಮಿತಿಗೆ ವರದಿ: ನ್ಯಾ. ಜೆ.ಎಸ್. ವರ್ಮಾ ಅವರು ನೀಡಿರುವ ವರದಿಯನ್ನು ಸದ್ಯದಲ್ಲೇ ಸಂಸದೀಯ ಸಮಿತಿಗೆ ಒಪ್ಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಮಹಿಳೆಯರ ಮೇಲಿನ ಅತ್ಯಾಚಾರಗಳ ನಿಯಂತ್ರಣ ಸಂಬಂಧ ನ್ಯಾ. ವರ್ಮಾ ಅವರ ಸಮಿತಿ ಹಲವಾರು ಶಿಫಾರಸುಗಳನ್ನು ನೀಡಿದೆ. ಇದನ್ನು ಸಂಸದೀಯ ಸಮಿತಿ ಅವಲೋಕಿಸಲಿದೆ. ಬಳಿಕ ಚಳಿಗಾಲದ ಅಧಿವೇಶನದಲ್ಲಿ ಅಪರಾಧ ಕಾನೂನು ತಿದ್ದುಪಡಿ ಮಸೂದೆ, 2012 ಅನ್ನು ಮಂಡಿಸಲಾಗುತ್ತದೆ ಎಂದು ತಿಳಿಸಿದೆ. ಸದ್ಯ ಕೇಂದ್ರ ಗೃಹ ಸಚಿವಾಲಯ ಈ ವರದಿಯನ್ನು ಅಧ್ಯಯನ ಮಾಡುತ್ತಿದೆ. ಬಳಿಕವಷ್ಟೇ ಸಂಸದೀಯ ಸಮಿತಿಗೆ ಒಪ್ಪಿಸಲಾಗುತ್ತದೆ ಎಂದಿದೆ. ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರ ನೇತೃತ್ವದ ಸಂಸದೀಯ ಸಮಿತಿ ಇದರ ಅವಲೋಕನ ಮಾಡಲಿದೆ.
ಇದೇ ವೇಳೆ ವಿವಾಹ ನಂತರದ ಅತ್ಯಾಚಾರ ಪ್ರಕರಣದ ವ್ಯಾಖ್ಯಾನ ನೀಡಿ ಎಂದು ವರ್ಮಾ ಸಮಿತಿ ಸರ್ಕಾರವನ್ನು ಕೇಳಿದೆ. ವಿವಾಹ ನಂತರ ಒಪ್ಪಿಗೆ ಇಲ್ಲದೇ ನಡೆಸುವ ಲೈಂಗಿಕ ಸಂಬಂಧವೂ ಅತ್ಯಾಚಾರ ಪ್ರಕರಣದ ವ್ಯಾಪ್ತಿಗೆ ಬರುತ್ತದೆಯೇ ಎಂದು ಅದು ಕೇಳಿದೆ.
ನಾನೂ ಬಾಲ ಆರೋಪಿ!: ದೆಹಲಿ ಗ್ಯಾಂಗ್ ರೇಪ್ ಪ್ರಕರಣದ 5ನೇ ಆರೋಪಿ ಕೂಡ ತನ್ನನ್ನೂ ಬಾಲ ಆರೋಪಿ ಎಂದು ಪರಿಗಣಿಸುವಂತೆ ಕೋರ್ಟ್ಗೆ ಮನವಿ ಸಲ್ಲಿಸಿದ್ದಾನೆ. ಈ ಸಂಬಂಧ ಕೋರ್ಟ್ ಸೋಮವಾರ ನಿರ್ಧಾರ ತೆಗೆದುಕೊಳ್ಳಲಿದೆ. ಈಗಾಗಲೇ ಒಬ್ಬ ಆರೋಪಿಯನ್ನು ಬಾಲ ಆರೋಪಿ ಎಂದು ಪರಿಗಣಿಸಲಾಗಿದ್ದು ಬಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ಮತ್ತೊಬ್ಬ ಕೂಡ ಶಿಕ್ಷೆಯಿಂದ ಪಾರಾಗಲು ತನ್ನನ್ನೂ ಬಾಲ ಆರೋಪಿ ಎಂದು ಪರಿಗಣಿಸುವಂತೆ ಕೋರಿಕೊಂಡಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.