64ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸಾಂಸ್ಕೃತಿಕ ಪರಂಪರೆಯ ದರ್ಶನ
ನವದೆಹಲಿ: ಒಂದೆಡೆ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸೇನಾ ಪರಾಕ್ರಮಗಳನ್ನು ಪ್ರದರ್ಶಿಸುವ ಟ್ಯಾಬ್ಲೋಗಳು, ಮತ್ತೊಂದೆಡೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸೇರಿದ ಸಾವಿರಾರು ಮಂದಿ... ರಾಜಪಥ್ನಿಂದ ಕೆಂಪುಕೋಟೆಯವರೆಗೆ ಅಂದರೆ ಸುಮಾರು 8 ಕಿ.ಮೀ.ವರೆಗೂ ಚಾಚಿದ ಪೆರೇಡ್...
ಶನಿವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 64ನೇ ಗಣರಾಜ್ಯೋತ್ಸವದ ಸಂಭ್ರಮ ಕಂಡುಬಂದಿದ್ದು ಹೀಗೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ಮಾಡಿದರು. ಅತ್ಯಂತ ವೈಭವಯುತ ಪಥಸಂಚಲನಕ್ಕೆ ಮುಖ್ಯ ಅತಿಥಿ ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್ಗೇಲ್ ವಾಂಗ್ಚುಕ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಕ್ಷಣಾ ಸಚಿವ ಆ್ಯಂಟನಿ ಮತ್ತಿತರ ಗಣ್ಯಾತಿಗಣ್ಯರು ಸಾಕ್ಷಿಯಾದರು.
ಕರ್ನಾಟಕದ ಕಿನ್ನಾಳ ಕಲೆ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಟ್ಯಾಬ್ಲೋಗಳ ಸಂಖ್ಯೆ 23ರಿಂದ 19ಕ್ಕಿಳಿದಿತ್ತು. ಬೊಂಬೆಗಳು ಹಾಗೂ ಪ್ರತಿಮೆಗಳನ್ನು ನಿರ್ಮಿಸುವಂತಹ ಕುಶಲ ಕಲೆ ಕಿನ್ನಾಳವನ್ನು ಪ್ರದರ್ಶಿಸುವ ಕರ್ನಾಟಕದ ಟ್ಯಾಬ್ಲೋ ಎಲ್ಲರ ಗಮನಸೆಳೆಯಿತು.
ಪ್ರಶಸ್ತಿ ನಿರಾಕರಿಸಿದ ಜಾನಕಿ
ಗಾಯಕಿ ಎಸ್. ಜಾನಕಿ ಅವರು ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. 2013ರ ಪದ್ಮಭೂಷಣ ಪಟ್ಟಿಯಲ್ಲಿ ದಕ್ಷಿಣ ಭಾರತದವರನ್ನು ಕಡೆಗಣಿಸಲಾಗಿದೆ. ಉತ್ತರ ಭಾರತದವರಿಗೇ ಹೆಚ್ಚಿನ ಮನ್ನಣೆ ನೀಡಲಾಗಿದೆ. ಇದರಿಂದ ನೊಂದು ನಾನು ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ ಎಂದು ಜಾನಕಿ ಅವರು ತಿಳಿಸಿದ್ದಾರೆ.
ಪದ್ಮಭೂಷಣ ವಂಚಿತ ಸುಶೀಲ್ಗೆ ನಿರಾಸೆ
ಒಲಿಂಪಿಕ್ಸ್ ಇತಿಹಾಸದಲ್ಲೇ ಗಣನೀಯ ಸಾಧನೆಗೈದ ಭಾರತೀಯ ಕುಸ್ತಿಪಟು ಸುಶೀಲ್ ಕುಮಾರ್ ಅವರು ಪದ್ಮಭೂಷಣ ಪ್ರಶಸ್ತಿಯಿಂದ ವಂಚಿತರಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಸುಶೀಲ್ ಅವರಿಗೂ ಸರ್ಕಾರದ ಈ ನಡೆಯಿಂದ ಆಘಾತವಾಗಿದೆ. ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎನ್ನುವಾಗ ಒಂದು ವಿಚಿತ್ರವಾದ ಭಾವನೆ ನನ್ನಲ್ಲಿ ಮೂಡಿತು. ದೇಶಕ್ಕಾಗಿ ಅಷ್ಟೊಂದು ಸಾಧನೆಗೈದ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ಗೊತ್ತಾಗುತ್ತಿಲ್ಲ. ನನಗೆ ಪದ್ಮಭೂಷಣ ನೀಡಲು ತಿರಸ್ಕರಿಸುತ್ತಾರೆಂದು ನಾನು ನಿರೀಕ್ಷಿಸಿಯೇ ಇರಲಿಲ್ಲ ಎಂದು ಸುಶೀಲ್ ಕುಮಾರ್ ನೊಂದು ನುಡಿದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.