ಇದು ಆನ್ ಬಾಂಡ್!
ಲಂಡನ್: ಜೇಮ್ಸ್‌ಬಾಂಡ್ ಮಾದರಿಯ ಹಂತಕನ ಕಥೆ ಇದು. ಆತನ ಬಳಿ ಇದ್ದಿದ್ದ ಆಯುಧಗಳು ಬಾಂಡ್ ಸಿನಿಮಾಗಳಲ್ಲಿ ಬಳಸುತ್ತಿರುವ ವಿಶೇಷ ಮಾದರಿ ಆಯುಧಗಳೇ!
ಅಂದ ಹಾಗೆ ಈ ಹಂತಕನ ಗುರಿಯಾಗಿದ್ದದ್ದು ಉತ್ತರ ಕೊರಿಯಾದ ಮಾನವ ಹಕ್ಕುಗಳ ಹೋರಾಟಗಾರ ಪಾರ್ಕ್ ಸಾಂಗ್-ಹಾಕ್. ಬಂಧಿತನಾಗಿರುವ ಹಂತಕನ ಹೆಸರನ್ನು 'ಆನ್' (ಆಟಿ) ಎಂದಷ್ಟೇ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಂದ ಹಾಗೆ ಈ ಘಟನೆ ನಡೆದದ್ದು 2011ರ ಸೆಪ್ಟೆಂಬರ್‌ನಲ್ಲಿ. ಇಂಥ ರೋಚಕ ಸಂಗತಿಯನ್ನು ಇತ್ತೀಚೆಗೆ ಸಿಎನ್‌ಎನ್ ವರದಿ ಮಾಡಿತ್ತು.
ಬಾಂಡ್ ಆಯುಧಗಳು: ಈತನ ಕೈಯಿಂದ ವಶಪಡಿಸಿಕೊಳ್ಳಲಾದ ಆಯುಧಗಳ ಪೈಕಿ ಒಂದು ಕಪ್ಪು ಬಣ್ಣದ ಟಾರ್ಚ್. ಅದರ ಮೇಲೆ 'ಪೊಲೀಸ್' ಎಂದು ಪಟ್ಟಿಯಲ್ಲಿ ಬರೆಯಲಾಗಿದೆ. ಈ ಟಾರ್ಚ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವೇಳೆ ಕಂಡು ಬಂದದ್ದು 3 ರಂಧ್ರಗಳು. ಅವುಗಳು ಏನು ಗೊತ್ತೇ ಗುಂಡುಗಳನ್ನು ಇಡುವ ಸ್ಥಳಗಳು! ಟಾರ್ಚ್ ಆಕಾರದ ಬಂದೂಕಿಗೆ ಸ್ವಿಚ್ ಟ್ರಿಗರ್ ಆಗಿತ್ತು. ಅಂದರೆ ಕೇವಲ ಹತ್ತಿರದಿಂದ ಗುಂಡು ಹಾರಿಸುವ ಅನುಕೂಲ ಆ ಆಯುಧದಲ್ಲಿತ್ತು.
ಪೆನ್ ಮಾದರಿ 2 ಆಯುಧ: ಇನ್ನೊಂದು ಮಾದರಿ ಆಯುಧವೆಂದರೆ ಅದು ಬಾಲ್ ಪಾಯಿಂಟ್ ಪೆನ್‌ನಂತೆ ಇದೆ. ಅದು ವಿಷಪೂರಿತ ಸೂಜಿಯನ್ನು ಒಳಗೊಂಡಿತ್ತು. ಮತ್ತೊಂದು ಪೆನ್ ಕೂಡ ಸಣ್ಣ ಪ್ರಮಾಣದ ಗನ್‌ನಂತೆ ಇತ್ತು. ಅದರ ವಿಶೇಷತೆ ಏನೆಂದರೆ, ವಿಷಯುಕ್ತ ರಾಸಾಯನಿಕವನ್ನು ಒಳಗೊಂಡ ಗುಂಡು ಹಾರಿಸುವ ಸಾಮರ್ಥ್ಯ ಅದಕ್ಕಿದೆ.
ಪರಿಣಾಮ ಏನಾಗುತ್ತಿತ್ತು?: 2ನೇ ಪೆನ್‌ನಿಂದ ಹಾರುವ ಗುಂಡಿನಲ್ಲಿ 10 ಮಿಲಿಗ್ರಾಂನಷ್ಟು ವಿಷಪೂರಿತ ರಾಸಾಯನಿಕ ಇರುತ್ತದೆ. ಅದನ್ನು ಸೇವಿಸುವ ವ್ಯಕ್ತಿ ಉಸಿರಾಟದ ತೊಂದರೆ ಅಥವಾ ಹೃದಯಾಘಾತದಿಂದ ಅಸುನೀಗುವ ಸಾಧ್ಯತೆ ಹೆಚ್ಚು.
ಬೆಚ್ಚಿ ಬಿದ್ದರು: ಬಂಧಿತನಾಗಿರುವ ಆ್ಯನ್‌ನಲ್ಲಿರುವ ಆಯುಧಗಳನ್ನು ಕಂಡು ಬೆಚ್ಚಿ ಬೀಳುವ ಸರದಿ ಸಿಯೋಲ್‌ನಲ್ಲಿರುವ ಪೊಲೀಸ್ ಹಾಗೂ ಸೇನಾ ಅಧಿಕಾರಿಗಳದ್ದಾಗಿತ್ತು. ಅಂಥ ಆಯುಧಗಳನ್ನು ಅವರು ಕಂಡೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಯಾರು ಗುರಿ?: ವಿಚಿತ್ರ ರೀತಿಯ ಆಯುಧಗಳನ್ನು ಹೊಂದಿದ್ದ ಹಂತಕನ ಗುರಿ ಇದ್ದದ್ದು ಮಾನವ ಹಕ್ಕು ಹೋರಾಟಗಾರ ಪಾರ್ಕ್ ಆಂಗ್-ಹಾಕ್. ಒಂದು ಬಾರಿ ಹಾಕ್ ಅವರನ್ನು ಹಂತಕ ಭೇಟಿಯಾಗಿದ್ದ. ಉ. ಕೊರಿಯಾ ಸರ್ಕಾರದ ನೀತಿಗಳ ವಿರುದ್ಧ ಕಠಿಣವಾಗಿ ಮಾತನಾಡುವ ಹಾಕ್‌ರನ್ನು 'ಮುಗಿಸಿಬಿಡಲು' ಆದೇಶ ನೀಡಲಾಗಿತ್ತು ಎಂದು ತನಿಖಾಧಿಕಾರಿಗಳ ಅಭಿಪ್ರಾಯ. ಆಯುಧಗಳನ್ನು ನೋಡಿದ್ದ ಹಾಕ್ 'ನಾನು ಸುಲಭವಾಗಿ ಸಾಯುತ್ತಿದ್ದೆ' ಎಂದಿದ್ದಾರೆ. ಇಂಥ ಪ್ರಯತ್ನದಿಂದ ಮಾನವ ಹಕ್ಕುಗಳನ್ನು ಪ್ರೋತ್ಸಾಹಿಸುವ ತಮ್ಮ ಪ್ರಯತ್ನಕ್ಕೇನೂ ಹಿನ್ನಡೆಯಾಗುವುದಿಲ್ಲ ಎಂದಿದ್ದಾರೆ. ಘಟನೆ ಬಳಿಕ ಅವರಿಗೆ 24 ಗಂಟೆಗಳ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.
ಹಾಕ್‌ರನ್ನು ಕೊಲ್ಲುವ ಯತ್ನ ಇದೇನು ಮೊದಲಾಗಿರಲಿಲ್ಲ. ಉ. ಕೊರಿಯಾದ ಜನರು ಸರ್ವಾಧಿಕಾರಿ ವಿರುದ್ಧ ಮಧ್ಯ ಪ್ರಾಚ್ಯ, ಅರಬ್ ರಾಷ್ಟ್ರಗಳ ಮಾದರಿಯಲ್ಲಿ ದಂಗೆ ಏಳಬೇಕೆಂದು ಬಲೂನ್‌ಗಳ ಮೂಲಕ ಸತತವಾಗಿ ಸಂದೇಶ ಕಳುಹಿಸುತ್ತಿದ್ದಾರೆ. ಸದ್ಯ ದಕ್ಷಿಣ ಕೊರಿಯಾದಲ್ಲಿರುವ ಅವರು ಮಾನವ ಹಕ್ಕುಗಳ ಸಂಘಟನೆಯೊದನ್ನು ಸ್ಥಾಪಿಸಿಕೊಂಡಿದ್ದಾರೆ.
ಆನ್ ಯಾರು?
ಹಾಕ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ 'ಆನ್' ಉತ್ತರ ಕೊರಿಯಾದ ವಿಶೇಷ ಸೇನಾ ಪಡೆಯ ಯೋಧ. 1990ರಲ್ಲಿ ಉ.ಕೊರಿಯಾದಿಂದ ಪರಾರಿಯಾಗಿದ್ದ ಆತನಿಗೆದ.ಕೊರಿಯಾದಲ್ಲಿ ಆಶ್ರಯ ನೀಡಲಾಗಿತ್ತು. ಆದರೆ ಆತನ ಕುಟುಂಬ ಮಾತ್ರ ಉತ್ತರ ಕೊರಿಯಾದಲ್ಲಿದೆ. ಹಾಕ್ ಅವರನ್ನು ಹತ್ಯೆ ಮಾಡದಿದ್ದರೆ ಆನ್‌ನ ಕುಟುಂಬ ಸದಸ್ಯರನ್ನು ಬಲಿ ಹಾಕುವ ಬೆದರಿಕೆಯೊಡ್ಡಿತ್ತು ಎಂದು ಹೇಳಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಆತನಿಗೆ 4 ವರ್ಷಗಳ ಶಿಕ್ಷೆಯನ್ನು ಸಿಯೋಲ್‌ನ ಕೋರ್ಟ್ ಒಂದು ವಿಧಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.